ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಘರ್ಷವು ಉಲ್ಬಣಗೊಳ್ಳುತ್ತಿದೆ. ಪಾಕ್ ವಿರುದ್ಧ ಜಲ ದಾಳಿಗೆ ಮುಂದಾಗಿದ್ದ ಭಾರತ, ಕಳೆದ ವಾರ ಝೀಲಂ ನದಿಗೆ ಏಕಾಏಕಿ ನೀರು ಹರಿಸಿತ್ತು. ಪರಿಣಾಮವಾಗಿ ಪಾಕಿಸ್ತಾನದ ಮುಜಾಫರಾಬಾದ್ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿತ್ತು. ಇದೀಗ, ಸಲಾಲ್ ಹೈಡ್ರೋ ಮತ್ತು ಬಗ್ಲಿಹಾರ್ ಹೈಡ್ರೋ ಅಣೆಕಟ್ಟುಗಳ ಗೇಟ್‌ಗಳನ್ನು ತೆರೆಯಲಾಗಿದ್ದು, ಚೆನಾಬ್ ನದಿಗೆ ನೀರು ಹರಿಸಲಾಗಿದೆ. ಪರಿಣಾಮವಾಗಿ, ಪಾಕಿಸ್ತಾನದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧು ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದಾಗಿ ಭಾರತ ಘೋಷಿಸಿದೆ. ಇದೇ ವೇಳೆ, ಚೆನಾಬ್ ನದಿಗೆ ಕಟ್ಟಲಾಗಿರುವ ಅಣೆಕಟ್ಟುಗಳ ಎಲ್ಲ ಗೇಟ್‌ಗಳನ್ನು ಮುಚ್ಚಿತ್ತು. ಪರಿಣಾಮವಾಗಿ, ಚೆನಾಬ್ ನದಿಯಲ್ಲಿ ನೀರು ಕಡಿಮೆಯಾಗಿ, ಪಾಕಿಸ್ತಾನಕ್ಕೆ ನೀರಿನ ಹರಿವುದು ಇಲ್ಲದಂತಾಗಿತ್ತು.
ಈ ನಡುವೆ, ರಿಯಾಸಿಯಲ್ಲಿರುವ ಸಲಾಲ್ ಹೈಡ್ರೋ ಯೋಜನೆ ಮತ್ತು ರಾಂಬನ್‌ನಲ್ಲಿರುವ ಬಗ್ಲಿಹಾರ್ ಹೈಡ್ರೋ ಯೋಜನೆ ಅಣೆಕಟ್ಟುಗಳು ತುಂಬುತ್ತಿದ್ದವು. ಇದೀಗ, ಅಣೆಕಟ್ಟುಗಳ ಗೇಟ್‌ಗಳನ್ನು ಏಕಾಏಕಿ ತೆಗೆಯಲಾಗಿದೆ. ಪಾಕಿಸ್ತಾನದಲ್ಲಿನ ನದಿ ದಂಡೆಯ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
“ಭಾರೀ ಮಳೆಯಿಂದಾಗಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ನೀರು ಬಿಡುಗಡೆ ಅನಿವಾರ್ಹವಾಗಿದೆ. ಸಲಾಲ್ ವಿದ್ಯುತ್ ಯೋಜನೆಯ ಮೂರು ಗೇಟ್‌ಗಳು ಮತ್ತು ಬಗ್ಲಿಹಾರ್ ಯೋಜನೆಯ ಎರಡು ಗೇಟ್‌ಗಳನ್ನು ಗುರುವಾರ ತೆರೆಯಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸಾಮಾನ್ಯವಾಗಿ ಚೆನಾಬ್ ನದಿಯಲ್ಲಿ 25-30 ಅಡಿಯಷ್ಟು ನೀರು ಹರಿಯುತ್ತದೆ. ಆದರೆ, ಕಳೆದ ವಾರ ಪಾಕಿಸ್ತಾನಕ್ಕೆ ನೀರಿನ ಹರಿವನ್ನು ನಿರ್ಬಂಧಿಸಿದ್ದರಿಂದ ಎರಡು ಅಣೆಕಟ್ಟುಗಳ ಗೇಟ್‌ಗಳನ್ನು ಮುಚ್ಚಲಾಗಿತ್ತು. ಪರಿಣಾಮವಾಗಿ, ನದಿಯಲ್ಲಿ ಕೇವಲ 2 ಅಡಿ ನೀರು ಮಾತ್ರ ಇತ್ತು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಆಪರೇಷನ್ ಸಿಂಧೂರ್ | ಉಭಯ ರಾಷ್ಟ್ರಗಳ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಬಹುದೇ?
ಗೇಟ್‌ಗಳನ್ನು ಮುಚ್ಚಿದ್ದರಿಂದ, ಚೆನಾಬ್ ನದಿ ಒಣಗಿ ಹೋಗಿತ್ತು. ಪಾಕಿಸ್ತಾನಕ್ಕೆ ನೀರಿನ ಹರಿವು ಕಡಿಮೆಯಾಯಿತು. ಮೊದಲ ಬಾರಿಗೆ, ಜಮ್ಮು ಪ್ರದೇಶದ ಅಖ್ನೂರ್ ಪ್ರದೇಶದಲ್ಲಿ ಜನರು ಕಾಲ್ನಡಿಗೆಯಲ್ಲಿ ಚೆನಾಬ್ ನದಿಯನ್ನು ದಾಟುವಷ್ಟು ನೀರು ಕಡಿಮೆಯಾಗಿತ್ತು.
ಬಾಗ್ಲಿಹಾರ್ (ರಾಂಬನ್), ಸಲಾಲ್ (ರಿಯಾಸಿ) ಮತ್ತು ಕಿಶನ್‌ಗಂಗಾ (ಬಂಡಿಪೋರಾ) ಅಣೆಕಟ್ಟುಗಳ ಮೂಲಕ ಭಾರತವು ಪಾಕಿಸ್ತಾನಕ್ಕೆ ನೀರು ಹರಿಸುತ್ತದೆ. ತನ್ನ ಇಚ್ಛೆ ಮತ್ತು ಸಮಯಕ್ಕೆ ತಕ್ಕಂತೆ ನೀರಿನ ಹರಿವನ್ನು ಭಾರತ ನಿಯಂತ್ರಿಸುತ್ತದೆ. ಐಡಬ್ಲ್ಯೂಟಿ ಪ್ರಕಾರ, ಭಾರತವು ‘ಪೂರ್ವ ನದಿಗಳಾದ’ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳಿಂದ ಅನಿಯಂತ್ರಿತವಾಗಿ ನೀರು ಹರಿವನ್ನು ಪಡೆಯುತ್ತದೆ. ಪಾಕಿಸ್ತಾನವು ಸಿಂಧೂ, ಝೀಲಂ ಮತ್ತು ಚೆನಾಬ್ ಸೇರಿದಂತೆ ‘ಪಶ್ಚಿಮ ನದಿಗಳ’ ನೀರಿನ ಹರಿವನ್ನು ಪಡೆಯುವ ಹಕ್ಕು ಹೊಂದಿದೆ.