ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯೂಎಚ್‌ಒ) ಅಮೆರಿಕ ಹೊರ ನಡೆದಿದೆ. ಡೊನಾಲ್ಡ್ ಟ್ರಂಪ್ ಅವರು 2ನೇ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ, ಡಬ್ಲ್ಯೂಎಚ್‌ಒದಿಂದ ಹೊರಬರುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ, ಡಬ್ಲ್ಯೂಎಚ್‌ಒದಿಂದ ಅಮೆರಿಕ ಹೊರಗುಳಿದಿದೆ.
ಡಬ್ಲ್ಯೂಎಚ್‌ಒದಿಂದ ಅಮೆರಿಕ ಹೊರ ಹೋಗುತ್ತಿದ್ದಂತೆಯೇ ಡಬ್ಲ್ಯೂಎಚ್‌ಒಗೆ ಚೀನಾ ಬೆಂಬಲ ಘೋಷಿಸಿದೆ. ಈ ಹಿಂದೆಯೇ ಚೀನಾ ಡಬ್ಲ್ಯೂಎಚ್‌ಒ ಭಾಗವಾಗಿಯೇ ಇತ್ತು. ಆದಾಗ್ಯೂ, ಇದೀಗ ಹೆಚ್ಚಿನ ಬೆಂಬಲ ಘೋಷಿಸಿದೆ. ಡಬ್ಲ್ಯೂಎಚ್‌ಒ ಜೊತೆಗೆ ಚೀನಾ ಮುಂದೆಯೂ ಇರುತ್ತದೆ. ಅಗತ್ಯ ನೆರವು ನೀಡುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೌ ಜಿಯಾಕುನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಜಿಯಾಕುನ್, “ಚೀನಾ ತನ್ನ ಜವಾಬ್ದಾರಿಗಳನ್ನು ಪೂರೈಸುತ್ತದೆ. ಮಾತ್ರವಲ್ಲದೆ, ಡಬ್ಲ್ಯುಎಚ್‌ಒಗೆ ಅಗತ್ಯ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ” ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬರುತ್ತಿದೆ ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಚೀನಾ, ಡಬ್ಲ್ಯುಎಚ್‌ಒ ಕುರಿತಾದ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಡಬ್ಲ್ಯೂಎಚ್‌ಒದಿಂದ ಹೊರಹೋಗುವ ಆದೇಶಕ್ಕೆ ಸಹಿ ಹಾಕಿರುವ ಟ್ರಂಪ್, “ಕೊವಿಡ್-19 ಸಾಂಕ್ರಾಮಿಕ ಮತ್ತು ಇತರ ಅಂತರರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳನ್ನು ನಿರ್ವಹಿಸುವಲ್ಲಿ ಡಬ್ಲ್ಯುಎಚ್‌ಒ ವಿಫಲವಾಗಿದೆ. ಡಬ್ಲ್ಯೂಎಚ್‌ಒದಿಂದ ಅಮೆರಿಕ ಅಧಿಕೃತವಾಗಿ ನಿರ್ಗಮಿಸುತ್ತದೆ. ಡಬ್ಲ್ಯುಎಚ್‌ಒಗೆ ಅಮೆರಿಕ ನೀಡುತ್ತಿದ್ದ ಆರ್ಥಿಕ ನೆರವನ್ನು ನಿಲ್ಲಿಸಲಾಗುತ್ತದೆ. ಅದರೊಂದಿಗೆ ಕೆಲಸ ಮಾಡುತ್ತಿರುವ ಅಮೆರಿಕದ ಸರ್ಕಾರಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.