ಬೇಹುಗಾರಿಕೆ ಪ್ರಕರಣದಲ್ಲಿ ಸುಮಾರು 1901 ದಿನಗಳು (ಐದು ವರ್ಷ 76 ದಿನ) ಲಂಡನ್ ಜೈಲಿನಲ್ಲಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಕೊನೆಗೂ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧದಲ್ಲಿ ಕ್ರೂರವಾದ ವರ್ತನೆ ಸೇರಿದಂತೆ ಸರ್ಕಾರದ ರಹಸ್ಯಗಳನ್ನು ಬಹಿರಂಗಪಡಿಸಿದ, ಹಲವಾರು ರಹಸ್ಯ ರಕ್ಷಣಾ ದಾಖಲೆಗಳ ಪ್ರಕಟಣೆ ಮಾಡಿದ ಆರೋಪದಲ್ಲಿ ಜೂಲಿಯನ್ ಅಸ್ಸಾಂಜೆ ಜೈಲು ಸೇರಿದ್ದರು.
ಬುಧವಾರ ಜೂಲಿಯನ್ ಅಸ್ಸಾಂಜೆ ಅವರು ಮರಿಯಾನಾ ದ್ವೀಪಗಳಲ್ಲಿನ ಯುಎಸ್ ಫೆಡರಲ್ ನ್ಯಾಯಾಲಯಕ್ಕೆ ಹಾಜರಾಗುವ ನಿರೀಕ್ಷೆಯಿದೆ. ಹಾಗೆಯೇ ಕಾನೂನುಬಾಹಿರವಾಗಿ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಪ್ರಕಟಿಸಿದ್ದ ತಪ್ಪೊಪ್ಪಿಕೊಂಡ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ಜೂಲಿಯನ್ ಅಸ್ಸಾಂಜೆ ಒಪ್ಪಂದದ ನಂತರ ಅವರನ್ನು ಬೆಲ್‌ಮಾರ್ಷ್ ಜೈಲಿನಿಂದ ಲಂಡನ್‌ನ ಸ್ಟಾನ್‌ಸ್ಟೆಡ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿಂದ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಬಿಡುಗಡೆಯ ನಂತರ ಜೂಲಿಯನ್ ಅಸ್ಸಾಂಜೆ ತನ್ನ ತವರು ದೇಶವಾದ ಆಸ್ಟ್ರೇಲಿಯಾಕ್ಕೆ ಹಿಂತಿರುಗಲು ಮುಕ್ತರಾಗಿರುತ್ತಾರೆ.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಪ್ರಕರಣ| ಅರವಿಂದ್ ಕೇಜ್ರಿವಾಲ್ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ವಿಕಿಲೀಕ್ಸ್, “ಜೂಲಿಯನ್ ಅಸ್ಸಾಂಜೆ ಮುಕ್ತರಾಗಿದ್ದಾರೆ. ಅವರು 1901 ದಿನಗಳನ್ನು ಕಳೆದ ನಂತರ ಜೂನ್ 24ರ ಬೆಳಿಗ್ಗೆ ಬೆಲ್‌ಮಾರ್ಷ್ ಗರಿಷ್ಠ ಭದ್ರತಾ ಜೈಲಿನಿಂದ ಹೊರ ನಡೆದಿದ್ದಾರೆ. ಲಂಡನ್‌ನ ಹೈಕೋರ್ಟ್‌ನಿಂದ ಅವರಿಗೆ ಜಾಮೀನು ಲಭ್ಯವಾಗಿದೆ. ಮಧ್ಯಾಹ್ನದ ಸಮಯದಲ್ಲಿ ಸ್ಟಾನ್‌ಸ್ಟೆಡ್ ವಿಮಾನ ನಿಲ್ದಾಣದಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಅವರು ವಿಮಾನವನ್ನು ಹತ್ತಿ ಯುಕೆಗೆ ತೆರಳಿದರು” ಎಂದು ಹೇಳಿದೆ.
“ಜೂಲಿಯನ್ ಅಸ್ಸಾಂಜೆ ಬಿಡುಗಡೆಯು ತಳಮಟ್ಟದ ಸಂಘಟಕರು, ಪತ್ರಿಕಾ ಸ್ವಾತಂತ್ರ್ಯ ಪ್ರಚಾರಕರು, ಶಾಸಕರು ಮತ್ತು ರಾಜಕೀಯ ನಾಯಕರು, ವಿಶ್ವಸಂಸ್ಥೆಯವರೆಗೂ ವ್ಯಾಪಿಸಿರುವ ಜಾಗತಿಕ ಅಭಿಯಾನದ ಫಲಿತಾಂಶವಾಗಿದೆ. ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಜಸ್ಟೀಸ್ ಜೊತೆ ಸುದೀರ್ಘವಾದ ಮಾತುಕತೆಯ ಬಳಿಕ ಅಂತಿಮ ಒಪ್ಪಂದವೊಂದಕ್ಕೆ ಬರಲಾಗಿದೆ. ನಾವು ಸಾಧ್ಯವಾದಷ್ಟು ಬೇಗ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತೇವೆ” ಎಂದು ತಿಳಿಸಿದೆ.
“ಐದು ವರ್ಷಗಳಿಗಿಂತ ಹೆಚ್ಚು ಕಾಲ 2×3 ಮೀಟರ್ ಸೆಲ್‌ನಲ್ಲಿ, ದಿನಕ್ಕೆ 23 ಗಂಟೆಗಳ ಕಾಲ ಇದ್ದ ನಂತರ ಜೂಲಿಯನ್ ಅಸ್ಸಾಂಜೆ ಅವರು ಶೀಘ್ರದಲ್ಲೇ ತಮ್ಮ ಹೆಂಡತಿ ಸ್ಟೆಲ್ಲಾ ಅಸ್ಸಾಂಜೆ ಮತ್ತು ಅವರ ಮಕ್ಕಳೊಂದಿಗೆ ಮತ್ತೆ ಸೇರಲಿದ್ದಾರೆ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಹಗರಣ | ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆಗೊಂಡ ಆಪ್ ಸಂಸದ ಸಂಜಯ್ ಸಿಂಗ್
ಹಾಗೆಯೇ, “ವಿಕಿಲೀಕ್ಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಅದ್ಭುತ ಕಥೆಗಳನ್ನು ಪ್ರಕಟಿಸಿತ್ತು. ಪ್ರಧಾನ ಸಂಪಾದಕರಾಗಿ, ಜೂಲಿಯನ್ ಈ ತತ್ವಗಳಿಗಾಗಿ ಹೆಚ್ಚು ತೆರಬೇಕಾಯಿತು. ಅವರು ಆಸ್ಟ್ರೇಲಿಯಕ್ಕೆ ಹಿಂದಿರುಗುತ್ತಾರೆ. ನಮ್ಮ ಬೆಂಬಲಕ್ಕೆ ನಿಂತ, ನಮಗಾಗಿ ಹೋರಾಡಿದ ಮತ್ತು ಅವರ ಸ್ವಾತಂತ್ರ್ಯದ ಹೋರಾಟದಲ್ಲಿ ಸಂಪೂರ್ಣವಾಗಿ ಬದ್ಧರಾಗಿರುವ ಎಲ್ಲರಿಗೂ ಧನ್ಯವಾದಗಳು” ಎಂದು ತಿಳಿಸಿದ್ದಾರೆ.
JULIAN ASSANGE IS FREE
Julian Assange is free. He left Belmarsh maximum security prison on the morning of 24 June, after having spent 1901 days there. He was granted bail by the High Court in London and was released at Stansted airport during the afternoon, where he boarded a…
— WikiLeaks (@wikileaks) June 24, 2024
ಇನ್ನು ರಹಸ್ಯ ದಾಖಲೆಗಳನ್ನು ಪಡೆಯಲು ಜೂಲಿಯನ್ ಅಸ್ಸಾಂಜೆಗೆ ಸಹಾಯ ಮಾಡಿದ ಯುಎಸ್ ಆರ್ಮಿ ಗುಪ್ತಚರ ವಿಭಾಗದ ಅಧಿಕಾರಿ ಚೆಲ್ಸಿಯಾ ಮ್ಯಾನಿಂಗ್ ಅವರಿಗೆ 35 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 2017ರಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಆಕೆಯ ಶಿಕ್ಷೆಯನ್ನು ಕಡಿಮೆ ಮಾಡಿದ್ದು ಸುಮಾರು ಏಳು ವರ್ಷಗಳ ನಂತರ ಅವರನ್ನು ಬಿಡುಗಡೆ ಮಾಡಿಕೊಟ್ಟರು.