ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಗಳ ಬಗ್ಗೆ ಭಾರತದ ಎಲ್ಲ ಟಿವಿ ಚಾನೆಲ್‌ಗಳು ಪ್ರಚೋದನಕಾರಿ ಸುದ್ದಿಗಳನ್ನು ಪ್ರಸಾರ ಮಾಡಿವೆ. ಕೋಮುದ್ವೇಷ ಬಿತ್ತುತ್ತಿವೆ ಎಂದು ಆರೋಪಿಸಿ, ಬಾಂಗ್ಲಾದಲ್ಲಿ ಭಾರತೀಯ ಟಿವಿ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಬಾಂಗ್ಲಾ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.
ವಕೀಲ ಎಖ್ಲಾಸ್ ಉದ್ದೀನ್ ಭುಯಾನ್ ಅವರು ಅರ್ಜಿ ಸಲ್ಲಿಸಿದ್ದಾರೆ. ಬಾಂಗ್ಲಾ ಹೈಕೋರ್ಟ್‌ನ ನ್ಯಾಯಮೂರ್ತಿ ಫಾತಿಮಾ ನಜೀಬ್ ಮತ್ತು ಸಿಕ್ದರ್ ಮಹಮುದೂರ್ ರಾಜಿ ಅವರಿರುವ ಪೀಠವು ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಸ್ವತಃ ಭುಯಾನ್ ಅವರೇ ತಿಳಿಸಿದ್ದಾರೆ.
“ಸ್ಟಾರ್ ಜಲ್ಶಾ, ಸ್ಟಾರ್ ಪ್ಲಸ್, ಝೀ ಬಾಂಗ್ಲಾ, ರಿಪಬ್ಲಿಕ್ ಬಾಂಗ್ಲಾ ಹಾಗೂ ಇತರ ಎಲ್ಲ ಭಾರತೀಯ ಮೂಲದ ಟಿವಿ ಚಾನೆಲ್‌ಗಳನ್ನು ನಿಷೇಧಿಸಬೇಕು. ಈ ಚಾನೆಲ್‌ಗಳ ಪ್ರಸಾರ ನಿಷೇಧಿಕ್ಕೆ ‘ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಆಪರೇಷನ್ ಆಕ್ಟ್-2006’ರ ಸೆಕ್ಷನ್ 29ರ ಅಡಿಯಲ್ಲಿ ನಿರ್ದೇಶನ ನೀಡಬೇಕು” ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಭಾರತೀಯ ಚಾನೆಲ್‌ಗಳಲ್ಲಿ ಪ್ರಚೋದನಕಾರಿ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಬಾಂಗ್ಲಾದೇಶದ ಸಂಸ್ಕೃತಿಯನ್ನು ವಿರೋಧಿಸಿ ಅನಿಯಂತ್ರಿತವಾಗಿ ಸುದ್ದಿಗಳು ಪ್ರಸಾರವಾಗುತ್ತಿವೆ. ಯುವಜನರಲ್ಲಿ ದ್ವೇಷ ಬಿತ್ತುತ್ತಿವೆ. ಈ ಚಾನಲ್‌ಗಳು ಯಾವುದೇ ನಿಯಮಗಳಿಗೆ ಬದ್ಧವಾಗಿಲ್ಲ” ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಅರ್ಜಿಯಲ್ಲಿ, ಬಾಂಗ್ಲಾದೇಶದ ಮಾಹಿತಿ ಸಚಿವಾಲಯ ಮತ್ತು ಗೃಹ ಸಚಿವಾಲಯದ ಕಾರ್ಯದರ್ಶಿಗಳು, ಬಾಂಗ್ಲಾದೇಶ ದೂರಸಂಪರ್ಕ ನಿಯಂತ್ರಣ ಆಯೋಗ (ಬಿಟಿಆರ್‌ಸಿ) ಮತ್ತು ಇತರರನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.
ಈ ವರದಿ ಓದಿದ್ದೀರಾ?: ಮಹಾರಾಷ್ಟ್ರ | ಬಿಜೆಪಿ ಗೆಲುವಿನಲ್ಲಿ ಆರ್‌ಎಸ್‌ಎಸ್ ಪಾತ್ರ; ಕಾಂಗ್ರೆಸ್ ಕಲಿಯಬೇಕಾದ ಪಾಠ
ಬಾಂಗ್ಲಾದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರನ್ನು ಆಗಸ್ಟ್ ತಿಂಗಳಿನಲ್ಲಿ ಪದಚ್ಯುತಗೊಳಿಸಲಾಯಿತು. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾಗಿದೆ. ಯೂನಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತ ಮತ್ತು ಬಾಂಗ್ಲಾ ನಡುವಿನ ಸಂಬಂಧಗಳು ಹದಗೆಟ್ಟಿವೆ ಎಂದು ಹೇಳಲಾಗುತ್ತಿದೆ.
ಬಾಂಗ್ಲಾದಲ್ಲಿ ಅಸ್ಪಸಂಖ್ಯಾತರಾಗಿರುವ ಹಿಂದುಗಳ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ಭಾರತೀಯ ಮಾಧ್ಯಮಗಳು ನಿರಂತರವಾಗಿ ಆರೋಪಿಸುತ್ತಿವೆ. ಈ ನಡುವೆ, ಕೋಮುದ್ವೇಷ ಮತ್ತು ಹಿಂಸೆ ಪ್ರಚೋದನೆ ಬಿತ್ತುತ್ತಿರುವ ಆರೋಪದ ಮೇಲೆ ಇಸ್ಕಾನ್ ಮಾಜಿ ಸದಸ್ಯ ಚಿನ್ಮೋಯ್ ಕೃಷ್ಣ ದಾಸ್ ನವೆಂಬರ್ 25ರಂದು ಬಾಂಗ್ಲಾ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೂ ಭಾರತೀಯ ಮಾಧ್ಯಮಗಳು ಕೋಮು ಬಣ್ಣ ಬಳಿಯುತ್ತಿವೆ.