ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಒಂದು ತಿಂಗಳಷ್ಟೇ ಬಾಕಿ ಇದೆ. ನವೆಂಬರ್‌ನಲ್ಲಿ ಚುನಾವಣೆಯ ನಡೆಯಲಿದೆ. ಚುನಾವಣೆಗಾಗಿ ಟಮೆರಿಕ ಮಾಜಿ ಅಧ್ಯಕ್ಷ, ಹಾಲಿ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ‘ಎಕ್ಸ್’ ಖಾತೆಯಿಂದ ಸ್ವಯಂಚಾಲಿತ ಸಂದೇಶಗಳು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಹೋಗುತ್ತಿವೆ. ಅಂತಹೊಂದು ಸಂದೇಶಕ್ಕೆ ಭಾರತೀಯ ಬಳಕೆದಾರನೊಬ್ಬ ಪ್ರತಿಕ್ರಿಯಿಸಿದ್ದು, ಆತನ ಟ್ವೀಟ್ ವೈರಲ್ ಆಗುತ್ತಿದೆ.
ಟ್ರಂಪ್ ಅವರು ‘ಎಕ್ಸ್’ ಖಾತೆಯಿಂದ ರೋಷನ್ ರೈ ಎಂಬ ಬಳಕೆದಾರರ ಖಾತೆಯನ್ನು ಉಲ್ಲೇಖಿಸಿ, “ರೋಷನ್ ರೈ ಅವರೇ, “ನಾನು ನಿಮಗೆ ಉತ್ತರ ಕೆರೊಲಿನಾದ ಪ್ರಮುಖ ಚುನಾವಣಾ ಮಾಹಿತಿಗಳನ್ನು ಕಳುಹಿಸುತ್ತೇನೆ. ನವೆಂಬರ್ 5 ರೊಳಗೆ ಡೊನಾಲ್ಡ್ ಜೆ ಟ್ರಂಪ್‌ಗೆ ಮತ ಹಾಕಲು ನೀವು ಸಿದ್ಧರಿದ್ದೀರಿ ಎಂದು ಖಾತ್ರಿಪಡಿಸಿ. ಮಾಹಿತಿಗಳು ಬೇಡವೆಂದಾರೆ #stop ಎಂದು ಪ್ರತಿಕ್ರಿಯಿಸಿ” ಎಂಬ ಸಂದೇಶ ಕಳಿಸಲಾಗಿದೆ.
ಟ್ರಂಟ್ ಖಾತೆಯಿಂದ ಬಂದ ಈ ಸಂದೇಶಕ್ಕೆ ರೋಶನ್ ರೈ ಅವರು ಪ್ರತಿಕ್ರಿಯಿಸಿದ್ದು, “ಧನ್ಯವಾದಗಳು. ಆದರೆ ನೀವು ಎಂದಿಗೂ ನನ್ನ ಅಧ್ಯಕ್ಷರಾಗಲು ಸಾಧ್ಯವಿಲ್ಲ. ಕಮಲಾ ಹ್ಯಾರಿಸ್ ಕೂಡ ಎಂದಿಗೂ ನನ್ನ ಅಧ್ಯಕ್ಷರಾಗಲಾರರು. ಯಾಕೆಂದರೆ, ನಾನು ಭಾರತದವನು” ಎಂದು ವ್ಯಂಗ್ಯವಾಡಿದ್ದಾರೆ.
ರೋಷನ್ ರೈ ಅವರು ತಮ್ಮ ‘ಎಕ್ಸ್‘ ಖಾತೆಯ ಬಯೋದಲ್ಲಿ ‘ಭಾರತೀಯ, ಹಾಸ್ಯಗಾರ, ಕ್ರಿಕೆಟ್‌ಹೋಲಿಕ್’ ಎಂದು ಬರೆದುಕೊಂಡಿದ್ದಾರೆ.
ಟ್ರಂಪ್ ಸಂದೇಶಕ್ಕೆ ರೋಷನ್ ರೈ ಅವರ ಪ್ರತಿಕ್ರಿಯೆಯು ನೆಟ್ಟಿಗರ ಗಮನ ಸೆಳೆದಿದೆ. ಇದು ಟ್ರಂಪ್ ಅವರ ಸ್ವಯಂಚಾಲಿತ ಸಂದೇಶ ವ್ಯವಸ್ಥೆಯು ಅಮೆರಿಕದ ಗಡಿಯನ್ನೂ ದಾಟಿದೆ ಎಂಬುದನ್ನೂ ತೋರಿಸುತ್ತದೆ. 2016ರಲ್ಲಿಯೂ ಟ್ರಂಪ್ ಇಂತದ್ದೇ ತಂತ್ರಗಳ ಮೂಲಕ ಜನರನ್ನು ಸೆಳೆದಿದ್ದರು. ಇದೂ ಕೂಡ ಅವರ ಗೆಲುವಿಗೆ ಕಾರಣವಾಗಿತ್ತು ಎಂದು ಹೇಳಲಾಗಿದೆ.
2018ರಲ್ಲಿ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ ನಡೆಸಿದ ಅಧ್ಯಯನದ ಪ್ರಕಾರ, “2016ರ ಅಮೆರಿಕ ಚುನಾವಣೆಗಳಲ್ಲಿ ಮತಗಳನ್ನು ಟ್ರಂಪ್ ಪರವಾಗಿ ತಿರುಗಿಸುವಲ್ಲಿ ಇಂತಹ ಸ್ವಯಂಚಾಲಿಕ ಸಂದೇಶದ ಬಾಟ್‌ಗಳು ನಿರ್ಣಾಯಕ ಪಾತ್ರ ವಹಿಸಿವೆ. ಡೊನಾಲ್ಡ್ ಟ್ರಂಪ್ ಅವರಿಗೆ ಸಂದ ಒಟ್ಟು ಮತಗಳಲ್ಲಿ 3.23%ರಷ್ಟು ಮತಗಳು ಹೆಚ್ಚಾಗುವಲ್ಲಿ ಟ್ವಿಟರ್ ಬಾಟ್‌ಗಳ ಪಾತ್ರವಿದೆ” ಎಂದು ಸೂಚಿಸಿದೆ.