ಒಂದೇ ಭೇಟಿಗೆ ಸಲುಗೆ ಬೆಳೆಸಿಕೊಳ್ಳುಷ್ಟು ಒಳ್ಳೆಯತನ ರಾಮಚಂದ್ರ ಕುಲಕರ್ಣಿ ಅವರಲ್ಲಿತ್ತು. ಆತನ ಸ್ನೇಹಕ್ಕೆ ಮಾರು ಹೋದವರೇ ಇಲ್ಲ. ಸೂಕ್ಷ್ಮ ಮನಸ್ಸಿನ ಸ್ನೇಹಿತನ ಅಗಲಿಕೆಗೆ ಧಾರವಾಡದ ಪತ್ರಕರ್ತರು, ಫೋಟೋ ಜರ್ನಲಿಸ್ಟ್ಗಳು ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಸದಸ್ಯರು ಆರ್ಕೆ ಜೊತೆಗಿನ ಒಡನಾಟವನ್ನು ಆಪ್ತವಾಗಿ ಮೆಲಕು ಹಾಕಿದ್ದಾರೆ.
ಧಾರವಾಡದ ಸ್ನೇಹಿತರ ಬಳಗದಲ್ಲಿ ‘ಆರ್ಕೆ’ ಎಂದೇ ಗುರುತಿಸಿಕೊಂಡಿದ್ದ ಹಿರಿಯ ಛಾಯಾಗ್ರಾಹಕ ಪತ್ರಕರ್ತ ರಾಮಚಂದ್ರ ಕುಲಕರ್ಣಿ ತಮ್ಮ ಜನ್ಮದಿನದಂದೇ ಕೊನೆಯುಸಿರೆಳೆದಿದ್ದಾರೆ.
ಧಾರವಾಡದ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಹಿರಿಯ ಸದಸ್ಯರಾಗಿದ್ದ ರಾಮಚಂದ್ರ ಕುಲಕರ್ಣಿ ಅವರು ಕರುಳು ಸಮಸ್ಯೆಯಿಂದ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ತಡ ರಾತ್ರಿ ನಿಧನರಾಗಿದ್ದಾರೆ.
ಧಾರವಾಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಭಾಗಿಯಾಗುತ್ತಿದ್ದ ರಾಮಚಂದ್ರ ಕುಲಕರ್ಣಿ ಲೇಖಕರ ಅಪರೂಪದ ಫೋಟೋಗಳನ್ನು ಸೆರೆಹಿಡಿಯುತ್ತಿದ್ದರು. ಧಾರವಾಡ ಜಿಲ್ಲೆಯಲ್ಲಿ ಏನೇ ಸಂಭವಿಸಲಿ ಅವುಗಳ ಫೋಟೋಗಳು ಆರ್ಕೆ ಕ್ಯಾಮೆರಾದಲ್ಲಿ ಸಿಗುವುದು ಖಚಿತ ಎನ್ನುವಷ್ಟರ ಮಟ್ಟಿಗೆ ಆರ್ಕೆ ಪತ್ರಿಕಾ ವೃತ್ತಿಯಲ್ಲಿ ತೊಡಗಿದ್ದರು. ಯಾವುದೇ ಪತ್ರಿಕೆ, ಟಿವಿ ಇರಲಿ ಸುದ್ದಿಗೆ ಫೋಟೋ ‘ಮಿಸ್’ ಆಗಿದೆ ಅಂತ ಪತ್ರಕರ್ತ ಮಿತ್ರರು ಕೇಳಿದರೆ ಸಾಕು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಫೋಟೋಗಳನ್ನು ಕಳುಹಿಸಿಕೊಡುತ್ತಿದ್ದರು.
ಹಿರಿಯರಿರಲಿ, ಕಿರಿಯರಿರಲಿ ಎಲ್ಲರ ಜೊತೆಯಲ್ಲೂ ಆತ್ಮೀಯವಾಗಿ ಬೆರೆತು ಬಿಡುತ್ತಿದ್ದರು. ಒಂದೇ ಭೇಟಿಗೆ ಸಲುಗೆ ಬೆಳೆಸಿಕೊಳ್ಳುಷ್ಟು ಒಳ್ಳೆಯತನ ರಾಮಚಂದ್ರ ಕುಲಕರ್ಣಿ ಅವರಲ್ಲಿತ್ತು. ಆತನ ಸ್ನೇಹಕ್ಕೆ ಮಾರು ಹೋದವರೇ ಇಲ್ಲ. ಸೂಕ್ಷ್ಮ ಮನಸ್ಸಿನ ಸ್ನೇಹಿತನ ಅಗಲಿಕೆಗೆ ಧಾರವಾಡದ ಪತ್ರಕರ್ತರು, ಫೋಟೋ ಜರ್ನಲಿಸ್ಟ್ಗಳು ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಸದಸ್ಯರು ರಾಮಚಂದ್ರ ಕುಲಕರ್ಣಿ ಜೊತೆಗಿನ ಒಡನಾಟವನ್ನು ಆಪ್ತವಾಗಿ ಮೆಲಕು ಹಾಕಿದ್ದಾರೆ.
ಕಲಬುರ್ಗಿ ಹತ್ಯೆಯಾದಾಗ ಪತ್ರಕರ್ತರಿಗೆ ಉಪ್ಪಿಟ್ಟು ತಂದಿದ್ದ ಆರ್ಕೆ!
“ಆರ್ಕೆ ಎಂಬ ಹುಚ್ಚು ಮನಸಿನ ಹುಡುಗನೇ, ಹುಟ್ಟಿದ ದಿನದಂದೇ ಮರಳಿ ಹೋಗೋ ಜರೂರತ್ತಿತ್ತಾ? ಆರ್ಕೆ ಒಳ್ಳೆಯ ನಳಪಾಕ ಪ್ರವೀಣ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅದು ನಮಗೆ ಗೊತ್ತಾಗಿದ್ದು ಎಂ ಎಂ ಕಲಬುರಗಿ ಸರ್ ಹತ್ಯೆಯಾದ ದಿನಗಳಲ್ಲಿ. ದಿನವಿಡೀ ಕಲಬುರ್ಗಿ ಸರ್ ಮನೆ ಎದುರು ಕಾಯುತ್ತಿದ್ದ ದಿನಗಳಲ್ಲಿ ಒಂದು ದಿನ ಅದ್ಭುತವಾದ ಉಪ್ಪಿಟ್ಟು ಮಾಡಿಕೊಂಡು ಬಂದು, ಎಲ್ಲರಿಗೂ ತಿನ್ನಿಸಿದ್ದ. ಇಂತಹ ಪ್ರೀತಿಯ, ಅಕ್ಕರೆಯ ಆರ್ಕೆ ನಮ್ಮನ್ನಗಲಿ ಹೋಗಿದ್ದಾನೆ. ಸದಾ ಜನರೊಂದಿಗೆ ನಗುನಗುತ್ತಾ, ತಮಾಷೆ ಮಾಡುತ್ತಾ ಇರತಿದ್ದ ಜೀವ ಸಣ್ಣ ವಯಸ್ಸಿನಲ್ಲಿಯೇ ಅಗಲಿದ್ದು ನೋವನ್ನುಂಟು ಮಾಡಿದೆ. ಹುಟ್ಟಿದ ದಿನದಂದೇ ಮರಳಿ ಹೋಗಿದ್ದಾನೆ. ಆತನ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ” ಎಂದು ಟಿವಿ 9 ವರದಿಗಾರ ನರಸಿಂಹಮೂರ್ತಿ ಪ್ಯಾಟಿ ಸಂತಾಪ ಸೂಚಿಸಿದ್ದಾರೆ.
“13 ವರ್ಷಗಳ ಹಿಂದೆ ಧಾರವಾಡಕ್ಕೆ ಬಂದಾಗ ತಾನೇ ಬಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ತಮ್ಮದು ಮೂಲತಃ ನಿಮ್ಮ ಕೊಪ್ಪಳ ಜಿಲ್ಲೆಯ ಪಕ್ಕದ ಗದಗ ಜಿಲ್ಲೆ ಅಂತಾನೂ ಹೇಳಿಕೊಂಡಿದ್ದ. ಯಾವುದೇ ಸುದ್ದಿಯಿದ್ದರೂ ಮೊದಲಿಗೆ ಫೋನಿಸೋ ಜೀವಿ. ಅಲ್ಲಿಗೆ ಹೋಗುತ್ತಲೇ ‘ಹೆಂಗೈತಿ ಸುದ್ದಿ?’ ಅನ್ನುವಂತೆ ಕಣ್ಣು ಚೂಟಿ ನಗುತ್ತಿದ್ದ. ಒಮ್ಮೊಮ್ಮೆ ಅಚ್ಚರಿಪಡುವಂಥ ನಮ್ಮದೇ ಫೋಟೋ ವಾಟ್ಸಪ್ಗೆ ಕಳಿಸಿ ಶಾಕ್ ಕೊಡುತ್ತಿದ್ದ. ಇದನ್ನು ಯಾವಾಗ ತೆಗೆದಿಯೋ ಅಂದ್ರೆ, ‘ನಾನು ಹಂಗೇ ಸರ್’ ಅಂತಾ ನಕ್ಕುಬಿಡುತ್ತಿದ್ದ” ಎಂದು ತಮ್ಮ ಒಡನಾಟವನ್ನು ಪ್ಯಾಟಿ ನೆನಪಿಸಿಕೊಂಡಿದ್ದಾರೆ.
ಆರ್ಕೆ ಎಂಬ ಜೀವಪರ ಮಿತ್ರನ ಸಹಿಸಲಾಗದ ಅಗಲಿಕೆ: ಮನೋಜಕುಮಾರ್ ಗುದ್ದಿ
“ಧಾರವಾಡದಲ್ಲಿ ಇದ್ದ ಹದಿನೈದು ವರ್ಷ ಫೋಟೋಗ್ರಾಫರ್ ಗೆಳೆಯ ಆರ್ಕೆ (ರಾಮಚಂದ್ರ ಕುಲಕರ್ಣಿ)ಯಂತಹ ಪ್ರೀತಿಯ ಜೀವಗಳ ಒಡನಾಟ ಆ ನಗರವನ್ನು ನಾನು ಹೆಚ್ಚು ಇಷ್ಟಪಡುವಂತೆ ಮಾಡಿತ್ತು. ಆಗಾಗ ಮನೆಗೆ ಬರುತ್ತಿದ್ದ ಆರ್ಕೆ ಕೆನ್ನಿಸುವಷ್ಟು ತುಪ್ಪ ಹಾಕಿ ಗರಿ ಗರಿ ಮಸಾಲೆ ದೋಸೆ ತಯಾರಿಸಿ ತಿನಿಸುತ್ತಿದ್ದ. ‘ಆಶ್ರಮ’ ಎನ್ನುತ್ತಿದ್ದ ತನ್ನ ರೂಮಿಗೆ ಹಲವು ಬಾರಿ ನನ್ನ ಕರೆದೊಯ್ದು ಊಟದ ಸಮಾರಾಧನೆ ಮಾಡಿಸುತ್ತಿದ್ದ. ತನ್ನ ಹತ್ತಿರ ರೊಕ್ಕ ಇರದಿದ್ದರೂ ಯಾವ ಚಿಂತೆಯನ್ನೂ ಮಾಡದೇ ಸಾಲ ಮಾಡಿ ಏನೇನೋ ಕಾರ್ಯಕ್ರಮ ಮಾಡುತ್ತಿದ್ದ. ನನ್ನ ಮೊದಲ ಮಗಳು ಅನನ್ಯ ಚೋಟುದ್ದ ಇದ್ದಾಗ ಅವಳ ಅಂದದ ಫೋಟೊ ತೆಗೆದು ಆಕೆಯ ಬಾಲ್ಯದ ನೆನಪನ್ನು ಹಸಿರಾಗಿಸಿದ್ದ. ಅವನಿಗೆ ಕಂಕಣಬಲ ಕೂಡಿ ಬರದ್ದನ್ನು ನೋಡಿ ನನ್ನ ಮಗಳನ್ನೇ ಕೊಡ್ತೀನಿ ಬಿಡು ಎಂದು ತಮಾಷೆ ಮಾಡುತ್ತಿದ್ದೆ. ಚಿಕ್ಕಂದಿನಲ್ಲಿ ಅಂಟಿಕೊಂಡ ಕೆಲ ವ್ಯಸನಗಳು ನನ್ನ ಗೆಳೆಯನನ್ನು ಇನ್ನಿಲ್ಲದಂತೆ ಕಾಡಿದವು. ಹೋಗಿ ಬಾ ಗೆಳೆಯ. ಹೊಸ ಲೋಕ ನಿನ್ನನ್ನು ಇಲ್ಲಿಗಿಂತ ಸಹನೀಯವಾಗಿ ಪೊರೆಯಲಿ” ಎಂದು ಪ್ರಜಾವಾಣಿ ಪತ್ರಕರ್ತ ಮನೋಜಕುಮಾರ್ ಗುದ್ದಿ ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
“ಚೆಂದದ ಚಿತ್ರ ತೆಗೆಯುತ್ತಿದ್ದ ಆರ್ಕೆ ಎಂದೇ ಪ್ರಸಿದ್ಧನಾಗಿದ್ದ ಧಾರವಾಡದ ಗೆಳೆಯ, ಸಂಯುಕ್ತ ಕರ್ನಾಟಕದ ಛಾಯಾಗ್ರಾಹಕ ರಾಮಚಂದ್ರ ಕುಲಕರ್ಣಿ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. 41 ವರ್ಷ ವಯಸ್ಸಿನ, ಅವಿವಾಹಿತನಾಗಿದ್ದ ಆರ್.ಕೆ. ಧಾರವಾಡದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಭಾಗಿಯಾಗುತ್ತ ಲೇಖಕರ ಅಪರೂಪದ ಪಟಗಳನ್ನು ತೆಗೆಯುತ್ತಿದ್ದ” ಎಂದು ಗಣೇಶ್ ಅಮೀನಗಡ ಸಂತಾಪ ಸೂಚಿಸಿದ್ದಾರೆ.
ಸಂತೋಷ್ ಲಾಡ್ ಸಂತಾಪ ಸೂಚನೆ
“ಆರ್ಕೆ ಎಂದೇ ಖ್ಯಾತರಾಗಿದ್ದ ಧಾರವಾಡದ ಪತ್ರಿಕಾ ಛಾಯಾಗ್ರಾಹಕ ರಾಮಚಂದ್ರ ಕುಲಕರ್ಣಿಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಆರ್ ಕೆ ಅವರು, ಸಾಮಾಜಿಕ ಕಳಕಳಿ ಹೊಂದಿದ್ದರು. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಕುಟುಂಬದ ಸದಸ್ಯರಿಗೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಂತಾಪ ಸೂಚಿಸಿದ್ದಾರೆ.
“ಧಾರವಾಡದ ಪ್ರತಿಯೊಂದು ಬೀದಿಯನ್ನು ಸುತ್ತಿಸಿ, ಅದಷ್ಟೋ ಜನರಿಗೆ ನನ್ನ ಶಿಷ್ಯ ಎಂದು ಪರಿಚಯಿಸಿ , ಧಾರವಾಡದ ಹಿರಿಯ ಸಾಹಿತಿಗಳ ಮನೆಗಳಿಗೆ ಕರೆದುಕೊಂಡು ಹೋಗಿ ನಮ್ಮ ಹುಡಗಾ ನಾಲ್ಕು ಬುದ್ಧಿಮಾತು ಹೇಳಿ ಎಂದು ತಮಾಷೆ ಮಾಡುತ್ತಿದ್ದ ಆರ್ಕೆ ಅಣ್ಣಾ ಇನ್ನಿಲ್ಲ ಎಂಬ ಸುದ್ದಿ ಕೇಳಿ ಮನಸ್ಸಿಗೆ ಘಾಸಿಯಾಗಿದೆ. ತೀರಾ ಇತ್ತೀಚೆಗೆ ಧಾರವಾಡಕ್ಕೆ ಹೋದಾಗ ನಿನ್ನ ಬೆಳವಣಿಗೆ ನೋಡಿ ಖುಷಿ ಆಯ್ತು.. ನಾನು ಕೊಟ್ಟ ಒಂದು ತುತ್ತು ಅನ್ನವನ್ನು ನೀನು ಯಾರಿಗಾದರು ಕೊಟ್ಟು ನನ್ನ ಋಣ ಮುಟ್ಟಿಸು, ದುಡ್ಡ ಮಾಡಬೇಡ ಇನ್ನೊಬ್ಬರಿಗಾಗಿ ಬದುಕು ಎನ್ನುತ್ತಾ ಹಾರೈಸಿದ ಜೀವವನ್ನು ಹೇಗೆ ಮರೆಯಲಿ. ನಾನು ಬದುಕಿರುವ ವರೆಗೆ ನಿನ್ನ ನೆನಪುಗಳು ಶಾಶ್ವತ. ಹೋಗಿ ಬಾ ಅಣ್ಣಾ” ಎಂದು ಯುವ ಪತ್ರಕರ್ತ ರಂಗನಾಥ್ ಬನ್ನಟ್ಟಿ ಬರೆದುಕೊಂಡಿದ್ದಾರೆ.
ಪ್ರತಿಭಾವಂತ ಪ್ರೀತಿಯ ರಾಕು: ಸಿದ್ದನಗೌಡ ಪಾಟೀಲ್
“ಧಾರವಾಡದಲ್ಲಿ ಪ್ರತಿಸಲ ಸಿಕ್ಕಾಗಲೂ ಒಂದು ನಗು, ಎರಡೇ ಮಾತು. ಆದರೆ ನನಗೇ ಗೊತ್ತಿಲ್ಲದಂತೆ ನನ್ನ ನೂರಾರು ಫೋಟೋ ತೆಗೆದು ನನ್ನ ವಾಟ್ಸಾಪ್ಗೆ ಹಾಕಿ ಸಂತೋಷ ಪಟ್ಟಿದ್ದ ರಾಮಚಂದ್ರ. ಹೊಸತು ಪತ್ರಿಕೆಗೂ ನಾನು ಕೇಳಿದ ಹಲವಾರು ಫೋಟೋ ಕಳಿಸಿದ. ದುಡ್ಡು ಕೊಡಲು ಹೋದರೆ ನಿರಾಕರಿಸಿದ. ನಗು ನಾಚಿಗೆ ಮಿತ ಭಾಷೆ, ವಿಶಿಷ್ಟ ವ್ಯಕ್ತಿತ್ವದ ಪ್ರತಿಭಾವಂತ ಪ್ರೀತಿಯ ರಾಕು ಅಗಲಿಕೆ ಆಘಾತ ತಂದಿದೆ.ನಮನಗಳು ಗೆಳೆಯ” ಎಂದು ಚಿಂತಕ ಸಿದ್ದನಗೌಡ ಪಾಟೀಲ್ ಆರ್ಕೆ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.