ವಿಜಯಪುರ ಜಿಲ್ಲೆ ಜಿಲ್ಲಾಧಿಕಾರಿ ಕಚೇರಿ ಎದುರು ಭೀಮ್ ಆರ್ಮಿ ಸಂಘಟನೆಯಿಂದ ಸತತ 25 ದಿನಗಳಿಂದ ನಡೆಸಿದ ಅಹೋರಾತ್ರಿ ಧರಣಿ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಮಹದೇವ ಮುರುಗಿ ಭೇಟಿ ನೀಡಿದ್ದು, ಹತ್ತು ದಿನಗಳಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ.
ಅಪರ ಜಿಲ್ಲಾಧಿಕಾರಿ ಭರವಸೆ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಪ್ರತಿಭಟನಾ ನಿರತರು ಹೇಳಿದ್ದಾರೆ.
ಘಟನೆ ಹಿನ್ನೆಲೆ
ವಿಜಯಪುರ ಜಿಲ್ಲೆಯ ನಿರ್ಮಿತಿ ಕೇಂದ್ರದ ಅವ್ಯವಸ್ಥೆಗೆ ಕಾರಣರಾಗಿರುವ ಕೇಂದ್ರದ ಮುಖ್ಯಸ್ಥ ಜಿ ಎನ್ ಮಲಜಿ ಅವರನ್ನು ವಜಾಗೊಳಿಸಬೇಕು ಎಂಬುದು ಸೇರಿದಂತೆ ದಲಿತ ನೌಕರರ ವೇತನ ಶ್ರೇಣಿ ಸರಿಪಡಿಸುವಂತೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟಕರು 25 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.
“ಪ್ರತಿಭಟನೆ ಸ್ಥಳದ ಬಯಲಿನಲ್ಲಿ ಆಹಾರ ತಯಾರಿಸಿ ಪ್ರತಿಭಟನಾನಿರತರಿಗೆ ಉಣಬಡಿಸಲಾಗುತ್ತಿತ್ತು. ಬಯಲಿನಲ್ಲಿ ಸ್ನಾನ ಮಾಡುತ್ತಿದ್ದು, ಮುಳ್ಳುಕಂಠಿಗಳ ಪಕ್ಕದಲ್ಲಿ ಶೌಚ ಮುಗಿಸುತ್ತಿದ್ದರು. ಇಷ್ಟೊಂದು ಅವ್ಯವಸ್ಥೆಗಳ ಆಗರದ ಮಧ್ಯದಲ್ಲಿ ಯಾವುದೇ ಅಶಾಂತಿಗೆ ಭಂಗ ಬರದಂತೆ ಶಾಂತಿಯುತವಾಗಿ ಹೋರಾಟ ಕೈಗೊಳ್ಳಲಾಗಿತ್ತು” ಎಂದು ಪ್ರತಿಭಟನಾ ನಿರತರು ತಿಳಿಸಿದ್ದಾರೆ.
“ನಮ್ಮ ನೋವನ್ನು ಅರಿತ ಜಿಲ್ಲಾಡಳಿತ, ನಿರ್ಮಿತಿ ಕೇಂದ್ರದ ಅವ್ಯವಸ್ಥೆಗೆ ಕಾರಣರಾಗಿರುವ ಜಿ ಎನ್ ಮಲಜಿ ಅವರ ವಜಾಗೊಳಿಸುವಿಕೆ ಮತ್ತು ದಲಿತ ನೌಕರರ ವೇತನ ಶ್ರೇಣಿ ಸರಿಪಡಿಸುವ ಕುರಿತು 10 ದಿನಗಳ ಅವಧಿಗೆ ಕಾಲಾವಕಾಶ ಕೇಳಿದ್ದು, ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ 10 ದಿನಗಳ ಮಟ್ಟಿಗೆ ಹೋರಾಟವನ್ನು ಹಿಂಪಡೆದಿದ್ದೇವೆ. ಬಳಿಕ ಭರವಸೆ ಈಡೇರಲಿಲ್ಲ ಎಂದಾದಲ್ಲಿ ನಂತರ ಮತ್ತೆ ಪ್ರತಿಭಟನೆ ಆರಂಭಿಸುತ್ತೇವೆ” ಎಂದು ಹೇಳಿದರು.
“ಇದೇ ವೇಳೆ ಎಲ್ಲ ಅಕ್ರಮ ಕರ್ಮಕಾಂಡಗಳಿಗೆ ಕಾರಣಕರ್ತನಾದ ನಿರ್ಮಿತಿ ಕೇಂದ್ರದ ನಿರ್ದೇಶಕ ಜಿ ಎನ್ ಮಲಜಿ ಅವರ ಮೇಲೆ ಜಾತಿನಿಂದನೆ ಕೇಸು ದಾಖಲಿಸಬೇಕು. ಗ್ರಾಮೀಣ ನಿರ್ಮಿತ ಕೇಂದ್ರದಲ್ಲಿ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ದಲಿತ ನೌಕರರನ್ನು ವಿನಾಕಾರಣ ಸೇವೆಯಿಂದ ತೆಗೆದಿದ್ದವರನ್ನು ಮರಳಿ ಸೇವೆಗೆ ಸೇರ್ಪಡೆ ಮಾಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.
“ನಿರ್ಮಿತಿ ಕೇಂದ್ರದಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಶ್ರೇಣಿ ವ್ಯವಸ್ಥೆ ಜಾರಿಗೆ ಆಗಬೇಕು. ಸದರಿ ನಿರ್ಮಿತ ಕೇಂದ್ರದಲ್ಲಿ ಆರಂಭದಿಂದಲೂ ಸೇವೆ ಸಲ್ಲಿಸುತ್ತಿರುವ ಯೋಜನೆ ವ್ಯವಸ್ಥಾಪಕ ಸಂಗಮೇಶ ಶಂಕರ್ ಕಾಂಬಳೆಯವರಿಗೆ ಹಿರಿತನಕ್ಕೆ ತಕ್ಕಂತೆ ಹುದ್ದೆ ಹಾಗೂ ಸಂಬಳವನ್ನು ಸರ್ಕಾರದ ನಿಯಮಾವಳಿಯಂತೆ ಒದಗಿಸಿಕೊಡಬೇಕು. ಅಂತೆಯೇ 2016-17 ನೇ ಸಾಲಿನ ಪೂರ್ಣಗೊಂಡ ಅಂಗನವಾಡಿ ಶೌಚಾಲಯಗಳ ಬಿಲ್‌ಗಳನ್ನು ಪಾವತಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಸ್‌ಸಿ/ಎಸ್‌ಟಿ ವಿದ್ಯಾರ್ಥಿನಿಯರಿಗೆ ಸೌಲಭ್ಯ ಕಲ್ಪಿಸಲು ಮಹಿಳಾ ವಿವಿ ವಿಫಲ; ಡಿವಿಪಿ ಆರೋಪ
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯ ರಾಜ್ಯಾಧ್ಯಕ್ಷ ಪರಶುರಾಮ ಚಲವಾದಿ, ಉಪಾಧ್ಯಕ್ಷ ಸೋಮಲಿಂಗ ರಣದೇವಿ, ನಗರ ಸಂಚಾಲಕ ಸುಖದೇವ್, ಡಿಎಸ್‌ಎಸ್ ಜಿಲ್ಲಾ ಅಧ್ಯಕ್ಷ ಗೌಡಪ್ಪಬಸಪ್ಪ, ಪ್ರಗತಿಪರ ಸಂಘಟನೆಗಳ ಮುಖಂಡರುಗಳಾದ ಸುರೇಶ, ಆನಂದ, ಅರುಣ್ ಹಾಗೂ ಹಲವು ಸಂಘಟನೆಗಳ ಮುಖಂಡರು ಇದ್ದರು.