ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಕೊಣನೂರು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಮಂಡ್ಯ ಮೂಲದ ಡಾ. ಸತೀಶ್ ಶುಕ್ರವಾರ ತಾವು ಪ್ರಯಾಣಿಸುತ್ತಿದ್ದ ಕಾರಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಮಂಡ್ಯದ ಮತ್ತೊಬ್ಬ ವೈದ್ಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಫ್ಯಾಮಿಲಿ ಪ್ಲಾನಿಂಗ್ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ನಟರಾಜ್ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ತಮ್ಮ ಮನೆಯಲ್ಲಿ ಶುಕ್ರವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಾ. ನಟರಾಜ್ ಅವರು ಕಳೆದ ಕೆಲವು ಸಮಯದಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಹಲವು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೇ ಗೈರಾಗಿದ್ದ ಅವರು ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಈ ಹಿಂದೆಯೂ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಡಾ. ನಟರಾಜ್ ಅವರು ಕೆಲಸ ಮಾಡುತ್ತಿದ್ದ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಡಿಎಚ್‌ಒ ನೀಡಿದ ಕಿರುಕುಳದಿಂದ ಅವರು ಪ್ರಾಣ ಕಳೆದುಕೊಂಡಿದ್ದಾರೆಂಬ ಆಪಾದನೆಯೂ ಕೇಳಿಬಂದಿದೆ. ಆದರೆ, ಡಿಎಚ್‌ಒ ಡಾ. ಮೋಹನ್ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದು, “ಡಾ. ನಟರಾಜ್ ಹಲವು ಸಮಯದಿಂದ ಮಾನಸಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದರು. ಅದೇ ಕಾರಣಕ್ಕಾಗಿ ಈ ರೀತಿ ಮಾಡಿಕೊಂಡಿರಬಹುದು” ಎಂದು ಹೇಳಿದ್ದು, ಕೆಲವು ದಾಖಲೆಗಳನ್ನೂ ನೀಡಿದ್ದಾರೆ.
ನನ್ನ ವಿರುದ್ದ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಮಂಡ್ಯದಲ್ಲಿ ಡಿಎಚ್‌ಒ ಡಾ ಮೋಹನ್ ಹೇಳಿಕೆ ನೀಡಿದ್ದು, ಡಾ. ನಟರಾಜ್ ಅವರು ತಮಗೆ ಕೌಟುಂಬಿಕ ಸಮಸ್ಯೆ ಇರುವುದು, ಮಾನಸಿಕವಾಗಿ ನೊಂದಿದ್ದು ಮತ್ತು ವರ್ಗಾವಣೆಗೆ ಪ್ರಯತ್ನಿಸುತ್ತಿರುವ ಬಗ್ಗೆ ನೀಡಿದ ಪತ್ರಗಳ ಎಲ್ಲ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
“ಡಾ ನಟರಾಜ್ ಮಂಡ್ಯ ಡಿಎಚ್‌ಒ ಕಚೇರಿಯಲ್ಲಿ ಫ್ಯಾಮಿಲಿ ಪ್ಲಾನಿಂಗ್ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದರು. ನಟರಾಜ್ ನಮ್ಮ ಕಚೇರಿಗೆ ಬಂದು 3 ತಿಂಗಳಾಗಿದೆ. ನವೆಂಬರ್ 2ರಂದು ಅವರು ನನಗೆ ಹೃದಯಾಘಾತವಾಗಿದೆ ಎಂದು ಪತ್ರ ಬರೆದು ರಜೆ ಕೇಳಿದ್ದರು. ನಂತರ ನಾನು ಅವರಿಗೆ 15 ದಿನ ರಜೆ ನೀಡಿದ್ದೆ. ಬಳಿಕ ನವೆಂಬರ್ 17ರಂದು ಮತ್ತೆ ನನಗೆ ಪತ್ರ ಬರೆದು ಇಲ್ಲಿ ಕೆಲಸ ಮಾಡಲು ಆಗುತ್ತಿಲ್ಲವೆಂದು ತಿಳಿಸಿದ್ದರು” ಎಂದು ಹೇಳಿದ್ದಾರೆ.
“ಕೌಟುಂಬಿಕ ಹಾಗೂ ಅನಾರೋಗ್ಯದ ಕಾರಣದಿಂದ ಹಿಂದೆ ಕೆಲಸ ಮಾಡುತ್ತಿದ್ದ ಜಾಗಕ್ಕೆ ವರ್ಗಾವಣೆ ಮಾಡಲು ಕೋರಿದ್ದರು. ಜತೆಗೆ ಅವರು ವರ್ಗಾವಣೆ ಬಯಸಿದ್ದ ಕುಣಿಗಲ್ ಕ್ಷೇತ್ರದ ಶಾಸಕರ ಬಳಿಯ ಶಿಫಾರಸು ಪತ್ರವನ್ನೂ ಕೂಡ ನೀಡಿದ್ದಾರೆ. ಅಲ್ಲದೆ ನಟರಾಜ್ ಕೌಟುಂಬಿಕ ಕಲಹದಿಂದ ಖಿನ್ನತೆಗೆ ಒಳಾಗಾಗಿದ್ದರು. ಈಗಾಗಲೇ ನಾಲ್ಕೈದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ನನ್ನ ಮೇಲಿನ ಆರೋಪ ಒಂದು ಪಿತೂರಿಯಾಗಿದೆ. ಇನ್ಮುಂದೆ ನನ್ನ ವಿರುದ್ದ ಯಾರು ಪಿತೂರಿ ಮಾಡುತ್ತಿದ್ದಾರೆಂದು ತಿಳಿದುಕೊಂಡು ಎಚ್ಚರಿಕೆ ವಹಿಸುತ್ತೇನೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭ್ರೂಣ ಹತ್ಯೆ ಪ್ರಕರಣ | ಆರೋಪ ಕೇಳಿ ಬಂದಿದ್ದ ವೈದ್ಯ ಕಾರೊಳಗೆ ಶವವಾಗಿ ಪತ್ತೆ
“ಹೆಣ್ಣುಭ್ರೂಣ ಪತ್ತೆ, ಹತ್ಯೆ ಪ್ರಕರಣಕ್ಕೂ ಮೃತ ನಟರಾಜ್ ಸಾವಿಗೂ ಯಾವುದೇ ಸಂಬಂಧವಿಲ್ಲ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ತಿಳಿಸಿದ್ದಾರೆ.