ಇಂದು ಪ್ರಕಟಗೊಂಡ ಚುನಾವಣಾ ಫಲಿತಾಂಶಗಳ ಬಗ್ಗೆ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದೆ.
ಛತ್ತೀಸ್‌ಘಡದಲ್ಲಿ ಅರಳಿದ ಕಮಲ
ಈ ಪೈಕಿ ಛತ್ತೀಸ್‌ಘಡದಲ್ಲಿ 90 ಸ್ಥಾನಗಳ ಪೈಕಿ 54 ಬಿಜೆಪಿ ಗೆದ್ದರೆ, 35 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಒಂದು ಸ್ಥಾನವನ್ನು ಗೊಂಡ್ವಾನ ಗಣತಂತ್ರ ಪಕ್ಷ ಗೆದ್ದಿದೆ. ಆ ಮೂಲಕ 54 ಸ್ಥಾನಗಳನ್ನು ಗೆದ್ದ ಬಿಜೆಪಿ, ಆಡಳಿತಾರೂಢ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೇರಿದೆ.
ಫಲಿತಾಂಶ ಹೊರಬೀಳುತ್ತಿದ್ದಂತೆಯೇ ರಾಜ್ಯಪಾಲರ ಕಚೇರಿಗೆ ತೆರಳಿದ ಭೂಪೇಶ್ ಬಘೇಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ತೆಲಂಗಾಣದಲ್ಲಿ ಕೆಸಿಆರ್ ಹ್ಯಾಟ್ರಿಕ್‌ಗೆ ತಡೆಯಾದ ಕಾಂಗ್ರೆಸ್
ತೆಲಂಗಾಣ ರಾಜ್ಯ ರಚನೆ ಆದಾಗಿನಿಂದ ಕಾಂಗ್ರೆಸ್ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ ಪಕ್ಷದ ಕೆ ಚಂದ್ರಶೇಖರ್ ರಾವ್ ಅವರ ಪ್ರಬಲ ಕೋಟೆಯನ್ನು ಕಾಂಗ್ರೆಸ್ ಭೇದಿಸಿ, ಗೆಲುವು ಸಾಧಿಸಿದೆ. ಆ ಮೂಲಕ ಕೆಸಿಆರ್ ಹ್ಯಾಟ್ರಿಕ್ ಗೆಲುವಿಗೆ ಕಾಂಗ್ರೆಸ್ ತಡೆಬೇಲಿ ಹಾಕುವಲ್ಲಿ ಯಶಸ್ವಿಯಾಗಿದೆ.
ಅಧಿಕೃತ ಚುನಾವಣಾ ಫಲಿತಾಂಶ ಪ್ರಕಟಿಸಿರುವ ಆಯೋಗ, 119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 64 ಸ್ಥಾನಗಳಲ್ಲಿ ಗೆದ್ದಿದೆ. ಆಡಳಿತಾರೂಢ ಬಿಆರ್‌ಎಸ್ ಪಕ್ಷವು ಕೇವಲ 39 ಸ್ಥಾನಗಳನ್ನಷ್ಟೇ ಗೆಲ್ಲಲು ಯಶಸ್ವಿಯಾಗಿದೆ. ಉಳಿದಂತೆ ಬಿಜೆಪಿ 8, ಅಸಾದುದ್ದೀನ್ ಉವೈಸಿಯ ಎಐಎಂಐಎಂ 7 ಹಾಗೂ ಸಿಪಿಐ ಪಕ್ಷ ಒಂದು ಸ್ಥಾನವನ್ನು ಗೆದ್ದುಕೊಂಡಿದೆ. ಕೆ ಚಂದ್ರಶೇಖರ್ ರಾವ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜಸ್ಥಾನದಲ್ಲಿ ಸರ್ಕಾರ ಬದಲಾಯಿಸಿದ ಮತದಾರರು
ಕಾಂಗ್ರೆಸ್ ಕೈಯಲ್ಲಿದ್ದ ರಾಜಸ್ಥಾನ ಕಮಲದ ತೆಕ್ಕೆಗೆ ಜಾರಿದೆ. 199 ಸ್ಥಾನಗಳ ಪೈಕಿ 115 ಸ್ಥಾನಗಳಲ್ಲಿ ಬಿಜೆಪಿ ಗೆದ್ದುಕೊಂಡಿದೆ. 69 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದುಕೊಂಡಿದೆ.
ಇದನ್ನೂ ಓದಿ: ಕಾಂಗ್ರೆಸ್ ಕೈ ಜಾರಿದ ರಾಜಸ್ಥಾನ- ವಾಡಿಕೆ ತಪ್ಪಿಸದೆ ಪಕ್ಷ ಬದಲಿಸಿದ ಮತದಾರರು
ಭಾರತ್ ಆದಿವಾಸಿ ಪಕ್ಷದಿಂದ ಮೂವರು ಶಾಸಕರು, ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ಯಿಂದ ಇಬ್ಬರು, ರಾಷ್ಟ್ರೀಯ ಲೋಕದಳದಿಂದ ಹಾಗೂ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದಿಂದ ತಲಾ ಓರ್ವ ಹಾಗೂ ವಿಶೇಷವಾಗಿ ಎಂಟು ಮಂದಿ ಸ್ವತಂತ್ರ ಅಭ್ಯರ್ಥಿಗಳು ಜಯಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಮಧ್ಯಪ್ರದೇಶ: ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತ ಬಿಜೆಪಿ ಮತ್ತೆ ಅಧಿಕಾರಕ್ಕೆ
ಮಧ್ಯಪ್ರದೇಶದ 2023ರ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ ನಿರ್ಣಾಯಕವಾಗಿತ್ತು. 230 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಭಾರೀ ಹೋರಾಟವನ್ನೇ ಮಾಡಿತಾದರೂ, ಅಧಿಕಾರಕ್ಕೆ ಬರುವಲ್ಲಿ ವಿಫಲವಾಗಿದೆ.
ದೊಡ್ಡ ರಾಜ್ಯವಾದ ಮಧ್ಯಪ್ರದೇಶದಲ್ಲಿ ಬಿಜೆಪಿ 163 ಸ್ಥಾನಗಳಲ್ಲಿ ಗೆದ್ದು ಬೀಗಿದರೆ, ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಕಾಂಗ್ರೆಸ್ ಕೇವಲ 66 ಸ್ಥಾನಗಳನ್ನಷ್ಟೇ ಗೆಲ್ಲಲು ಸಫಲವಾಗಿದೆ. ಆಡಳಿತ ವಿರೋಧಿ ಅಲೆಯ ನಡುವೆಯೂ ಶಿವರಾಜ್ ಸಿಂಗ್ ಚೌಹಾಣ್ ಗೆಲುವಿನ ನಗೆ ಬೀರಿದ್ದಾರೆ. ಉಳಿದಂತೆ ಭಾರತ್ ಆದಿವಾಸಿ ಪಕ್ಷದಿಂದ ಓರ್ವ ಶಾಸಕ ಇಲ್ಲಿ ಆಯ್ಕೆಯಾಗಿದ್ದಾನೆ ಎಂದು ಚುನಾವಣಾ ಆಯೋಗವು ತಿಳಿಸಿದೆ.