ಕಾಂಗ್ರೆಸ್‌ ಕೈ ಜಾರಿದ ರಾಜಸ್ಥಾನ- ವಾಡಿಕೆ ತಪ್ಪಿಸದೆ ಪಕ್ಷ ಬದಲಿಸಿದ ಮತದಾರರು

Date:

  • ರಾಜಸ್ಥಾನದಲ್ಲಿ ಪ್ರತಿ ಅವಧಿಗೂ ಸರ್ಕಾರ ಬದಲಾಯಿಸುವ ರೂಢಿಯಿದೆ
  • ಹಾಲಿ ಚುನಾವಣೆಯಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ

ಕಾಂಗ್ರೆಸ್‌ ಕೈಯಲ್ಲಿದ್ದ ರಾಜಸ್ಥಾನ ಕಮಲದ ತೆಕ್ಕೆಗೆ ಜಾರಿದೆ. 199 ಸ್ಥಾನಗಳ ಪೈಕಿ 115 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. 71ಸ್ಥಾನಗಳಲ್ಲಿ ಕಾಂಗ್ರೆಸ್‌ ಮುಂದಿದೆ. ಇತರರು 13ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಈ ಮುನ್ನಡೆ ಮತ್ತು ಅಂತಿಮ ಫಲಿತಾಂಶದಲ್ಲಿ ಹೆಚ್ಚಿನ ವ್ಯತ್ಯಾಸವಾಗುವ ಸಾಧ್ಯತೆಗಳು ವಿರಳ. ಚುನಾವಣಾ ಆಯೋಗದ ಅಧಿಕೃತ ಪ್ರಕಟಣೆ ಬಿಡುಗಡೆ ಆಗುವುದಷ್ಟೇ ಬಾಕಿಯಿದೆ.

ಕಳೆದ ಮೂವತ್ತು ವರ್ಷಗಳಲ್ಲಿ ಆಡಳಿತ ಪಕ್ಷ ಚುನಾವಣೆಯಲ್ಲಿ ಮತ್ತೊಮ್ಮೆ ಆರಿಸಿ ಬಂದು ಅಧಿಕಾರ ಹಿಡಿದದ್ದೇ ಇಲ್ಲ. ಮತದಾರರು ಆಳುವ ಪಕ್ಷವನ್ನು ಸೋಲಿಸುತ್ತಲೇ ಬಂದಿದ್ದಾರೆ. ಹೆಂಚಿನಲ್ಲಿ ಬೇಯಿಸುವಾಗ ರೊಟ್ಟಿಯನ್ನು ತಿರುಗಿಸಿ ಹಾಕುವಂತೆ ರಾಜಸ್ಥಾನದಲ್ಲಿ ಪ್ರತಿ ಅವಧಿಗೂ ಸರ್ಕಾರ ಬದಲಾಯಿಸುವ ರೂಢಿಯಿದೆ. ಅದೇ ಈ ಬಾರಿಯೂ ಆದೀತೆಂಬ ವಿಶ್ವಾಸ ಬಿಜೆಪಿಗೂ ಇತ್ತು.

ಮುಖ್ಯಮಂತ್ರಿ ಗಾದಿಗೆ ಕಠಿಣ ಮತ್ತು ಕುತೂಹಲಕರ ಪೈಪೋಟಿಯ ದಟ್ಟ ಸೂಚನೆಗಳಿವೆ. ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವೆ ಜಗಳ ಏರ್ಪಟ್ಟು ಪೈಲಟ್‌ ಬಣ ಇನ್ನೇನು ಬಿಜೆಪಿ ಕಡೆ ಹೋಗುತ್ತದೆ ಎಂಬ ಹಂತದಲ್ಲಿ ಸರ್ಕಾರವನ್ನು ಉಳಿಸಲು ವಸುಂಧರಾ ರಾಜೆ ನೈತಿಕ ಬೆಂಬಲ ನೀಡಿದ್ದರು. ಹೀಗಾಗಿ ಗೆಹ್ಲೋಟ್‌ ಅವರೊಂದಿಗೆ ರಾಜೆ ಸೌಹಾರ್ದ ಸಂಬಂಧ ಹೊಂದಿದ್ದಾರೆಂಬುದು ಆ ಸಮಯದಲ್ಲಿ ಬಹಿರಂಗವಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2013ರಲ್ಲಿ ವಸುಂಧರಾ ರಾಜೇ ನೇತೃತ್ವದಲ್ಲಿ 200ರಲ್ಲಿ ಬಿಜೆಪಿ ದಾಖಲೆಯ 163 ಸೀಟುಗಳನ್ನು ಗೆದ್ದಿತ್ತು. ರಾಜೇ ರಾಜಸ್ಥಾನದ ಮುಖ್ಯಮಂತ್ರಿ ಆಗಿದ್ದಾಗ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ. ಸಮಕಾಲೀನ ನಾಯಕರು. ಮೂರನೆಯ ಸಲ ರಾಜೇ ಮುಖ್ಯಮಂತ್ರಿಯಾದರೆ ನಿಯಂತ್ರಣ ಕಷ್ಟ ಎಂಬುದು ಮೋದಿಶಾ ಭಾವನೆ. ಶಕ್ತಿಶಾಲಿ ಪ್ರಾದೇಶಿಕ ನಾಯಕರು ಬಿಜೆಪಿ ಹೈಕಮಾಂಡ್‌ಗೆ ಬೇಕಿಲ್ಲ. ಹೀಗಾಗಿ ರಾಜೇ ಮತ್ತೆ ಮುಖ್ಯಮಂತ್ರಿ ಆಗುವರೇ, ದಿಯಾಕುಮಾರಿ ಎಂಬ ಮತ್ತೊಬ್ಬ ಮಾಜಿ ರಾಜಕುವರಿಗೆ ಪಟ್ಟ ಕಟ್ಟಿ ಹೊಸ ನಾಯಕತ್ವವನ್ನು ಹುಟ್ಟು ಹಾಕುವರೇ ಎಂದು ಕಾದು ನೋಡಬೇಕಿದೆ.

ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಗಳು, ಮಹಿಳೆಯರಿಗೆ ಸುರಕ್ಷತೆ ಇಲ್ಲ, ಶಾಸಕರ ಭ್ರಷ್ಟಾಚಾರ ಕಾಂಗ್ರೆಸ್ಸನ್ನು ಕೆಳಜಗ್ಗಿರುವ ಸಂಗತಿಗಳು. ಗೆಹ್ಲೋಟ್‌ ವೈಯಕ್ತಿಕವಾಗಿ ಆಡಳಿತವಿರೋಧಿ ಅಲೆ ಎದುರಿಸಿಲ್ಲ. ಆದರೆ ಈ ಮಾತನ್ನು ಕಾಂಗ್ರೆಸ್ ಶಾಸಕರಿಗೆ ಅನ್ವಯಿಸುವುದು ಸಾಧ್ಯವಿಲ್ಲ.

ರಾಜಸ್ಥಾನ ಕಾಂಗ್ರೆಸ್‌ನ ಅಧ್ಯಕ್ಷ, ಉಪಮುಖ್ಯಮಂತ್ರಿ ಆಗಿದ್ದ ಯುವ ನಾಯಕ ಸಚಿನ್‌ ಪೈಲಟ್‌ ಮತ್ತು ಗೆಹ್ಲೋಟ್‌ ನಡುವೆ ಆಗಾಗ ಸ್ಪೋಟಗೊಳ್ಳುತ್ತಿದ್ದ ನಾಲ್ಕೂವರೆ ವರ್ಷಗಳ ಸತತ ಒಳಜಗಳವೂ ಕಾಂಗ್ರೆಸ್‌ ಸೋಲಿಗೆ ದೊಡ್ಡ ಕೊಡುಗೆ ನೀಡಿದಂತಿದೆ. ಕೋಮು ಧ್ರುವೀಕರಣದ ಬಿಜೆಪಿಯ ಹಳೆಯ ತಂತ್ರ ಕೆಲಮಟ್ಟಿಗೆ ಫಲಿಸಿರುವುದು ಸ್ಪಷ್ಟ. ಹಾಲಿ ಚುನಾವಣೆಯಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಹಲವು ಸಂಸದರನ್ನು ಕಣಕ್ಕೆ ಇಳಿಸಿತ್ತು. ಒಳಜಗಳ ಎರಡೂ ಪಕ್ಷಗಳನ್ನು ಬಾಧಿಸಿತ್ತು.

ವಸುಂಧರಾ ರಾಜೆ ಅವರನ್ನು ಸಂಪೂರ್ಣ ಮೂಲೆಗುಂಪು ಮಾಡುವ ಇರಾದೆಯನ್ನು ಬಿಜೆಪಿ ಹೈಕಮಾಂಡ್ ಕೈಬಿಟ್ಟ ನಡೆಯಿಂದ ಪಕ್ಷಕ್ಕೆ ಒಳಿತೇ ಆಗಿದೆ. ರಾಜೆ ಗುಂಪಿನ ಕೆಲವರಿಗೆ ಟಿಕೆಟ್‌ ನೀಡಲಾಯಿತು. ರಾಜೆ ಕೊಡಬಹುದಾಗಿದ್ದ ಒಳ ಏಟಿನಿಂದ ಬಿಜೆಪಿ ಬಚಾವಾಗಿದೆ.

ಗೆಹ್ಲೋಟ್‌ ಸರ್ಕಾರ ಬಡ ಜನರ ಪರವಾದ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಗೆಲುವು ಅವರಿಂದ ದೂರವೇ ಉಳಿದಿದೆ. ಜನಪರ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತಂದರೂ ಜನಬೆಂಬಲವನ್ನು ಮತಗಳನ್ನಾಗಿ ಪರಿವರ್ತಿಸಲು ಈ ಯೋಜನೆಗಳನ್ನು ಮತ್ತೆ ಮತ್ತೆ ಪ್ರಚಾರ ಮಾಡಬೇಕಾಗುತ್ತದೆ. ಅಂತಹ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್‌ ಹಿಂದಿದೆ. ಮಾಡದ ಕೆಲಸವನ್ನೂ ಮಾಡಿದ್ದೇವೆಂದು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳಿಕೊಂಡು ಮತ ಪಡೆಯುವ ಕೌಶಲ್ಯ ಬಿಜೆಪಿಗೆ ಸಿದ್ಧಿಸಿದೆ.

ಇದನ್ನೂ ಓದಿ ಛತ್ತೀಸ್‌ಗಡ ಮತ ಎಣಿಕೆ; ಮುನ್ನಡೆಯಲ್ಲಿ ಬಿಜೆಪಿ- ಕಾಂಗ್ರೆಸ್‌ ನಡುವೆ ಹಾವು ಏಣಿ ಆಟ ಮುಗಿದು ಬಹುಮತದತ್ತ ಬಿಜೆಪಿ

2013-2018ರ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಯಾರೂ ಜಾರಿಗೆ ತರದಿದ್ದ ತಲಾ ಹತ್ತು ಕೇಜಿ ಉಚಿತ ನೀಡುವ ಅನ್ನಭಾಗ್ಯ, ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ, ಪಿಯು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಕಲಾವಿದರುಹಿರಿಯ ನಾಗರಿಕರ ಮಾಸಿಕ ವೇತನ ಹೆಚ್ಚಳದಂತಹ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅದನ್ನು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಜನರಿಗೆ ಮನವರಿಕೆ ಮಾಡುವಲ್ಲಿ ಸೋತಿತ್ತು. ಕಾಂಗ್ರೆಸ್‌ ಹೆಚ್ಚು ಸ್ಥಾನ ಗಳಿಸಿದರೂ ಬಹುಮತದ ಕೊರತೆಯಿಂದ ಸಮ್ಮಿಶ್ರ ಸರ್ಕಾರ ರಚನೆಯಾಗ, ಮತ್ತೆ ಆಪರೇಷನ್‌ ಕಮಲ ನಡೆದಿತ್ತು. ಚುನಾವಣಾ ಕಾರ್ಯತಂತ್ರ ರೂಪಿಸುವುದರಲ್ಲಿ ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ ಬಹಳ ಹಿಂದೆ ಬಿದ್ದಿರುವುದು ನಿಚ್ಚಳ. ಚುನಾವಣಾ ಪ್ರಚಾರ ಮತ್ತು ಸಂಘಟನಾತ್ಮಕ ಬಲದಲ್ಲಿ ಬಿಜೆಪಿಯ ದೈತ್ಯ ಆಳ ಅಗಲವನ್ನು ಸರಿಗಟ್ಟುವ ಪ್ರಯತ್ನ ಕೂಡ ಕಾಂಗ್ರೆಸ್‌ನಿಂದ ಕಾಣುತ್ತಿಲ್ಲ.

2018ರಲ್ಲಿ ಕಾಂಗ್ರೆಸ್‌ಗೆ ಶೇ.39.20 ಮತಗಳು ಬಿದ್ದಿದ್ದವು. ಬಿಜೆಪಿ 38.77 ರಷ್ಟು ಮತಗಳು. ಸರ್ಕಾರ ರಚಿಸಿದ ಪಕ್ಷ ಮತ್ತು ಪ್ರತಿಪಕ್ಷದ ಸಾಲಿನಲ್ಲಿ ಕುಳಿತ ಪಕ್ಷದ ನಡುವೆ ಕೇವಲ ಒಂದು ಪರ್ಸೆಂಟ್ ವ್ಯತ್ಯಾಸ ಮಾತ್ರ. ಈ ವ್ಯತ್ಯಾಸ ಬಿಜೆಪಿಗೆ 73 ಸೀಟುಗಳ ಗಳಿಕೆಯ ಸೋಲನ್ನೂ, ಕಾಂಗ್ರೆಸ್ಸಿಗೆ ನೂರು ಸೀಟುಗಳ ಗೆಲುವನ್ನೂ ನೀಡಿತ್ತು. ಹದಿಮೂರು ಮಂದಿ ಪಕ್ಷೇತರರು ಗೆದ್ದಿದ್ದರು. ಈ ಬಾರಿಯೂ ಹದಿಮೂರು ಮಂದಿ ಇತರರು ಗೆದ್ದಿದ್ಧಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಮಾರಣ್ಣನ ಜೇಬಲ್ಲಿದ್ದ ‘ಪೆನ್‌ಡ್ರೈವ್‌’ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿ ಕೆ ಶಿವಕುಮಾರ್

ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಜೆಡಿಎಸ್ ಸಂಸದ ಹಾಗೂ ಹಾಸನ...

‘ಬರ ಪರಿಹಾರ ಸಾಕು’ ಎಂದಿರುವ ಕುಮಾರಸ್ವಾಮಿ ನಾಡದ್ರೋಹಿ: ಡಿಸಿಎಂ ಡಿಕೆಶಿ ವಾಗ್ದಾಳಿ

"ಕೇಂದ್ರ ಸರ್ಕಾರ ಕರ್ನಾಟಕದ ಬರಕ್ಕೆ ಅಲ್ಪ ಪರಿಹಾರ ಮೊತ್ತ ಘೋಷಿಸಿದ್ದು, ನಾವು...

ಹಿಂದುಳಿದ ಸಮುದಾಯಗಳೇ ಎಚ್ಚರ, ಮೋದಿ ನಿಮ್ಮ ಹಾದಿ ತಪ್ಪಿಸುತ್ತಿದ್ದಾರೆ: ಘರ್ಜಿಸಿದ ಸಿದ್ದರಾಮಯ್ಯ

ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ. ಮೋದಿ ನಿಮ್ಮ ಹಾದಿ ತಪ್ಪಿಸಿ ಮುಸ್ಲಿಮರ...

ಪಿಎಂ ಮೋದಿ ಸೂಪರ್‌ ಮ್ಯಾನ್ ಅಲ್ಲ ದುಬಾರಿ ಮ್ಯಾನ್: ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಸೂಪರ್ ಮ್ಯಾನ್ ಅಲ್ಲ ಬದಲಾಗಿ ಅವರು ದುಬಾರಿ...