ಧಾರವಾಡ ಜಿಲ್ಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಯುವ ಘಟಕ ಸ್ಥಾಪನೆಯಾಗುತ್ತಿರುವುದು ಸಂತಸದ ವಿಚಾರ. ಸಮಾಜದಿಂದ ಸಂಘಟನೆಗೆ ಹಣಕಾಸಿನ ಸಂಪನ್ಮೂಲಗಳ ಜತೆಗೆ ಜವಾಬ್ದಾರಿಯುತ ಮನಸ್ಸುಗಳು ಬೇಕಾಗುತ್ತದೆ ಎಂದು ಚಿಂತಕ ಶಂಭು ಹೆಗಡಾಳ ಹೇಳಿದರು.
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಾದ ಹುಬ್ಬಳ್ಳಿಯ ಜೆಎಲ್‌ಎಮ್ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಯುವ ಘಟಕ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸಮಾಜಕ್ಕಾಗಿ ನನ್ನ ಸಮಯವನ್ನು ಕಿಂಚಿತ್ತಾದರೂ ಮೀಸಲಿಡಬೇಕು ಅಂದುಕೊಂಡಾಗ ನೋವುಗಳು ಸರ್ವೆಸಾಮಾನ್ಯ. ಆದರೆ ಸದೃಢ ಮನಸ್ಸು ಇದ್ದಾಗ ಸಂಘಟನೆ ಗಟ್ಟಿಯಾಗುತ್ತದೆ. ಧರ್ಮ ಎಂದಾಕ್ಷಣ ವ್ಯತ್ಯಾಸಗಳು ಕಾಣುತ್ತವೆ. ಲಿಂಗಾಯತ ಧರ್ಮವನ್ನು ಬೇರೆ ಧರ್ಮಗಳ ಧಾರ್ಮಿಕ ಆಚರಣೆಗಳ ಜೊತಗೆ ಹೋಲಿಕೆ ಮತ್ತು ವ್ಯಾತ್ಯಾಸಗಳನ್ನು ಹುಡುಕುವ ಕೆಲಸ ಆಗಬಾರದು. ನಮ್ಮ ಧರ್ಮದಲ್ಲಿ ವೈದಿಕಾಚರಣೆಗಳು ಹಾಸುಹೊಕ್ಕಾಗಿವೆಯೆಂದು ವೈದಿಕ ಧರ್ಮಾಚರಣೆಗಳನ್ನು ಎತ್ತಿ ಹಿಡಿಯುವುದನ್ನು ಬಿಟ್ಟು ನಮ್ಮ ಧರ್ಮದ ಆಚರಣೆಗಳನ್ನಷ್ಟೇ ಹೇಳಿಕೊಳ್ಳಬೇಕು” ಎಂದರು.
“ಬಸವತತ್ವದ ಮೂಲ ನಿಜ ಆಚರಣೆಗಳನ್ನು ಪಾಲಿಸಬೇಕೇ ಹೊರತು ಬೇರೆ ಆಚರಣೆಗಳ ಕುರಿತು ನಾವು ಟೀಕಿಸುವುದು ಸರಿಯಲ್ಲ. ನಮ್ಮ ಧರ್ಮಕ್ಕಾಗಿ ಮತ್ತೊಂದು ಧರ್ಮವನ್ನು ಕಳನಾಯಕನ ಸ್ಥಾನದಲ್ಲಿ ನಿಲ್ಲಿಸಬಾರದು. ಸಂಘಟನಾ ಸಮಯದಲ್ಲಿ ಈ ರೀತಿಯ ವಿಷಯಗಳಲ್ಲಿ ಎಚ್ಚರವಹಿಸಬೇಕು. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕಾಗುತ್ತದೆ. ಬಸವಾದಿ ಶರಣರು ಮತ್ತೊಂದು ವ್ಯವಸ್ಥೆಯನ್ನು ದೂಷಿಸಲಿಲ್ಲ. ಆದ್ಧರಿಂದ ನಾವು ವೈರತ್ವ ಕಟ್ಟಿಕೊಂಡು ಹೋದಾಗ ಸಂಘಟನೆ ಬೆಳೆಯುವುದಿಲ್ಲ. ಹೀಗಾಗಿ ಎಲ್ಲರನ್ನೂ ಪ್ರೇಮದಿಂದ ಬರಮಾಡಿಕೊಳ್ಳುವ ಮನಸ್ಸು ಇರಬೇಕು. ನಮ್ಮ ಜನರೊಂದಿಗೆ ಅರಿವು ಮೂಡಿಸುವ ಕಾರ್ಯವಾಗಬೇಕೆ ಹೊರತು ಇನ್ನೊಬ್ಬರನ್ನು ದ್ವೇಷಿಸುವ ಕೆಲಸವಾಗಬಾರದು” ಎಂದು ತಿಳಿಸಿದರು.
“ನಾವು ಯಾರ ವಿರೋಧಿಗಳೂ ಅಲ್ಲ, ನಾವು ಯಾವ ವ್ಯವಸ್ಥೆಯ ವಿರೋಧಿಗಳಲ್ಲ. ನಮಗೆ ಅರಿವು ಮೂಡುವ ಮುನ್ನ ನಾವೂ ಮೌಢ್ಯತೆಯಲ್ಲಿ ಮುಳುಗಿದ್ದವರೆ. ಸಂಘಟನೆ ಗಟ್ಟಿಗೊಳ್ಳಲು ಎಲ್ಲ ರೀತಿಯಿಂದ ನಮ್ಮ ಚಾರಿತ್ರ್ಯ ಶುದ್ಧವಾಗಿರಬೇಕು. ಪರರ ಸಂಕಷ್ಠಕ್ಕೆ ಸ್ಪಂದಿಸುವ ಗುಣವಿರಬೇಕು. ನಾವು ಬಾಗಿದ ತಲೆ ಮುಗಿದ ಕೈಯಾಗಿರಿಸಿಕೊಂದು ಹೋದಾಗ ಸಮಾಜದಲ್ಲಿ ನಾವೂ ಪರಿಪೂರ್ಣತೆಯನ್ನು ಸಾಧಿಸುತ್ತೇವೆ. ನಂತರ ನಮ್ಮ ಪ್ರಭಾವದಿಂದ ಸಮಾಜವೂ ಬದಲಾವಣೆಯ ಹಾದಿಯನ್ನು ಹಿಡಿಯುತ್ತದೆ. ನಾವು ವ್ಯಸನಮುಕ್ತರಾಗಬೇಕು, ತ್ಯಾಗಯುಕ್ತ ಜೀವನ ನಡೆಸಬೇಕು. ಕೆಲವು ವರ್ಷಗಳ ನಂತರ ನಾವೂ ಪೂಜ್ಯರಾಗುತ್ತೇವೆ. ಇದಕ್ಕೆಲ್ಲ ನಮ್ಮ ಪ್ರಯತ್ನ ನಿರಂತರವಾಗಿರಬೇಕು ಮತ್ತು ಒತ್ತಾಯವಾಗಿ ಯಾರ ಮೇಲೂ ಧರ್ಮಾಚರಣೆಗಳನ್ನು ಹೇರಬಾರದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ವೇದಗಳ ಕಾಲದಿಂದಲೂ ‘ಗಂಡು-ಹೆಣ್ಣು’ ಎಂಬ ಭೇದ ಇರಲಿಲ್ಲ: ಮಾಳವಿಕಾ
ಇದೇ ವೇಳೆ ಯುವ ಘಟಕದ ಅಧ್ಯಕ್ಷರಾಗಿ ಸಿ ಜಿ ಪಾಟಿಲ್ ಆಯ್ಕೆಯಾದರು. ಪದನಿಮಿತ್ತ ಸದಸ್ಯ ಬಸವಂತಪ್ಪ ತೋಟದ ಪ್ರಾಸ್ತಾವಿಕವಾಗಿ ಮಾತನಾಡಿ, ಅರಿವು ಮತ್ತು ಆಚಾರದೊಂದಿಗೆ ಲಿಂಗಾಯತ ಧರ್ಮದ ಬೆಳವಣಿಗೆಗೆ ಅವಿರತ ದುಡಿಯೋಣ ಎಂದು ಹೇಳಿದರು.
ಅಧ್ಯಕ್ಷ ಎಂ ವಿ ಗೊಂಗಡಶೆಟ್ಟಿ ಪ್ರತಿಜ್ಞಾವಿಧಿಯನ್ನು ಹೇಳಿಕೊಟ್ಟರು. ಡಿ ಎ ಲಿಂಗಶೆಟ್ಟರ ಶರಣು ಸಮರ್ಪಣೆ ಸಲ್ಲಿಸಿದರು. ಶಿವರುದ್ರಗೌಡ ಪಾಟೀಲ್ ನೀರೂಪಣೆ ಮಾಡಿದರು. ಜೆಎಲ್ಎಂನ ಸರ್ವ ಪದಾಧಿಕಾರಿಗಳು, ಸದಸ್ಯರುಗಳು ಇದ್ದರು.