ಇಡೀ ರಾಜ್ಯಕ್ಕೆ ಮಾದರಿ ಕಾಡಶೆಟ್ಟಿಹಳ್ಳಿ ಸರ್ಕಾರಿ ಶಾಲೆ; ಮಕ್ಕಳೇ ಇಲ್ಲಿ ಸಾರ್ವಭೌಮರು

Date:

Advertisements

ಪ್ರತಿ ಗ್ರಾಮದಲ್ಲೂ ಇಂತಹ ಸರ್ಕಾರಿ ಶಾಲೆ ಮತ್ತು ಶಿಕ್ಷಕರು ಇದ್ದರೆ ಎಷ್ಟು ಚೆಂದ ಅಲ್ಲವೇ?

ಸರ್ಕಾರಿ ಶಾಲೆಗಳನ್ನು ಕಂಡು ಮೂಗುಮುರಿಯುವ ಜನರೇನೂ ಕಡಿಮೆ ಇಲ್ಲ. ಆದರೆ ಶಿಕ್ಷಕರು ಮತ್ತು ಗ್ರಾಮದ ಮುಖಂಡರು ಇಚ್ಛಾಶಕ್ತಿ ತೋರಿದರೆ ಸರ್ಕಾರಿ ಶಾಲೆಯನ್ನು ಅದ್ಭುತವಾಗಿ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ’ಕಾಡಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಉದಾಹರಣೆಯಾಗಿ ನಮ್ಮ ಮುಂದಿದೆ.

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಕಡಬ ಹೋಬಳಿಯ ಕಾಡಶೆಟ್ಟಿಹಳ್ಳಿಗೆ ಹೋಗಬೇಕೆಂದರೆ ಸರಿಯಾದ ರಸ್ತೆ ವ್ಯವಸ್ಥೆಯೂ ಇಲ್ಲ. ಆದರೆ ಈ ಗ್ರಾಮದ ಶಾಲೆಗೆ ಕಡಬ ಸುತ್ತಮುತ್ತಲ 42 ಗ್ರಾಮಗಳ ಮಕ್ಕಳು ಬಂದು ವ್ಯಾಸಂಗ ಮಾಡುತ್ತಿದ್ದಾರೆ. ಹೋಬಳಿ ಕೇಂದ್ರವಾದ ಕಡಬ ಶಾಲೆಗಿಂತಲೂ ಕಾಡಶೆಟ್ಟಿಹಳ್ಳಿ ಸ್ಕೂಲ್‌ ಗಮನ ಸೆಳೆಯುತ್ತಿದೆ.

Advertisements

ಬಡ ಮಕ್ಕಳಿಗೆ ಆಸರೆಯಾಗಿರುವ ಇಲ್ಲಿ ಎಲ್‌ಕೆಜಿ- ಯುಕೆಜಿಯಿಂದ ಎಂಟನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ. ಅಚ್ಚುಕಟ್ಟಾದ ಶಾಲಾ ಅಂಗಳ, ಸುಸರ್ಜಿತ ಕಟ್ಟಡಗಳು, ಲೈಬ್ರರಿ, ಸೈನ್ಸ್ ಲ್ಯಾಬ್, ಡಿಜಿಟಲ್‌ ಸಾಧನಗಳ ಸದ್ಬಳಕೆ, ಕಂಪ್ಯೂಟರ್‌ ಸೌಲಭ್ಯ, ಬಯಲು ರಂಗಮಂದಿರ, ಕಾರ್ಯಕ್ರಮಗಳನ್ನು ನಡೆಸುವುದಕ್ಕಾಗಿ ಇರುವ ಸಭಾಂಗಣ, ಅಗತ್ಯ ಪಿಠೋಪಕರಣಗಳು- ಇಷ್ಟೇ ಅಲ್ಲದೆ ಈ ಶಾಲೆಯಲ್ಲಿ ಗಾಂಧಿ ಅಧ್ಯಯನ ಕೇಂದ್ರವೂ ಇದೆ. ಹಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಗಾಂಧಿ ಸ್ಟಡಿ ಸೆಂಟರ್‌ ಎಂಬ ಪರಿಕಲ್ಪನೆಯೇ ಅದ್ಭುತ. ಮಕ್ಕಳಿಗೆ ಗಾಂಧಿ ಮತ್ತು ಅಂಬೇಡ್ಕರ್‌ ವಿಚಾರಧಾರೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ, ಸಂವಿಧಾನದ ಮೌಲ್ಯಗಳನ್ನು ಬಿತ್ತುವುದಕ್ಕಾಗಿ ನಿರಂತರ ಪ್ರಯೋಗಗಳನ್ನು ಇಲ್ಲಿ ಮಾಡಲಾಗುತ್ತಿದೆ. ಅಂಬೇಡ್ಕರ್‌ ಅಧ್ಯಯನ ಕೇಂದ್ರವನ್ನೂ ತರಬೇಕೆಂಬ ಪ್ರಯತ್ನಗಳು ಆಗುತ್ತಿವೆ.

school 5

gandhi kutira

ಈ ಶಾಲೆಯ ಶಿಕ್ಷಕ ವೃಂದದ ಶ್ರಮ ಅಪಾರ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪೊರೆಯುವ ಅವರ ಕಾಯಕ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಮಕ್ಕಳ ಕಲಿಕೆಗೆ ಶಿಕ್ಷಕರ ಕೊರತೆಯಾಗದಂತೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಮುತುವರ್ಜಿ ವಹಿಸಿದೆ. ಶಿಕ್ಷಣ ಇಲಾಖೆಯಿಂದ ನೇಮಿಸಲಾದ ಹನ್ನೊಂದು ಮಂದಿ ಸಿಬ್ಬಂದಿಗಳಿದ್ದಾರೆ. ಇದರ ಜೊತೆಗೆ ಎಸ್‌ಡಿಎಂಸಿ ಮೂಲಕ ಐದು ಮಂದಿ ಶಿಕ್ಷಕರನ್ನು ನೇಮಿಸಿ ಬೋಧನಾ ಚಟುವಟಿಕೆಗಳಿಗೆ ಅಡತಡೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.

kadashettihalli111

’ಈ ದಿನ.ಕಾಂ’ನೊಂದಿಗೆ ಮಾತನಾಡಿದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ದಕ್ಷಿಣಮೂರ್ತಿಯವರು ಇಲ್ಲಿನ ಸೌಕರ್ಯ ಮತ್ತು ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. “ನಲವತ್ತೆರಡು ಗ್ರಾಮಗಳ ಮಕ್ಕಳು ನಮ್ಮ ಶಾಲೆಗೆ ಬರುತ್ತಿರುವುದು ವಿಶೇಷ. ಕಾಡಶೆಟ್ಟಿಹಳ್ಳಿಯ 32 ಮಕ್ಕಳು ಮಾತ್ರ ಶಾಲೆಯಲ್ಲಿ ಓದುತ್ತಿದ್ದಾರೆ. ಆದರೆ ನಮ್ಮ ಶಾಲೆಯ ದಾಖಲಾತಿ ಸಂಖ್ಯೆ  413. ಇಲ್ಲಿನ ಪರಿಪಕ್ವತೆಯೇ ಇದಕ್ಕೆ ಕಾರಣ. ಚಟುವಟಿಕೆ ಆಧರಿತ ಶಿಕ್ಷಣವನ್ನು ಕೊಡುತ್ತಿದ್ದೇವೆ. ನಾವು ಪಾಠ ಮಾಡಲ್ಲ. ಮಕ್ಕಳ ಮೂಲಕವೇ ಪಾಠ ಮಾಡಿಸುತ್ತೇವೆ. ಅದಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಕಡಬ ಗ್ರಾಮ ಪಂಚಾಯಿತಿ ಸದಸ್ಯರಾದ ಕಾಡಶೆಟ್ಟಿಹಳ್ಳಿ ಸತೀಶ್ ಹಾಗೂ ಎಸ್‌ಡಿಎಂಸಿ ಸದಸ್ಯರು ಒದಗಿಸಿದ್ದಾರೆ” ಎಂದು ಅವರು ತಿಳಿಸಿದರು.

dhakshina Murthi
ಪ್ರಭಾರ ಮುಖ್ಯಶಿಕ್ಷಕ ದಕ್ಷಿಣಮೂರ್ತಿ

ಮುಂದುವರಿದು, “ಶಾಲೆಯಲ್ಲಿ ಪ್ರೊಜೆಕ್ಟರ್‌ ಇದೆ. ಲಾಪ್‌ಟಾಪ್‌ಗಳಿವೆ. ಎರಡು ಇಂಟರ್‍ಯಾಕ್ಟಿವ್ ಬೋರ್ಡ್ ಇವೆ. ಎಲ್ಲ ರೀತಿಯ ಬೋಧನೋಪಕರಣಗಳು ಲಭ್ಯವಿವೆ. ಪಿಯು ಕಾಲೇಜಿನಲ್ಲಿ ಇರಬಹುದಾದ ಸೈನ್ಸ್‌ ಲ್ಯಾಬ್ ನಮ್ಮ ಶಾಲೆಯಲ್ಲಿಯೂ ಇದೆ. ಅತ್ಯುನ್ನತವಾದ ಪ್ರತ್ಯೇಕ ಗ್ರಂಥಾಲಯ ರೂಪಿಸಿದ್ದೇವೆ. ಮಕ್ಕಳ ಆಸಕ್ತಿ ಅನುಸಾರ ಕಲಿಸುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಇಲ್ಲಿ ಮಕ್ಕಳೇ ಸಾರ್ವಭೌಮರು” ಎನ್ನುತ್ತಾರೆ ದಕ್ಷಿಣಮೂರ್ತಿ.

“ಚಟುವಟಿಕೆಗಳನ್ನು ಮಕ್ಕಳೇ ಇಲ್ಲಿ ಸೃಷ್ಟಿಸುತ್ತಾರೆ. ಶಿಕ್ಷಕರು ಕೇವಲ ವಿಷಯವನ್ನು ಕೊಡುತ್ತೇವೆ. ಉದಾಹರಣೆಗೆ ಒಂದು ಕತೆಗೆ ಕಾನ್ಸೆಪ್ಟ್‌ ಕೊಟ್ಟರೆ ಅದನ್ನು ಮಕ್ಕಳೇ ಡಿಸೈನ್ ಮಾಡುತ್ತಾರೆ. ಮಕ್ಕಳಿಗೆ ರೆಡಿಮೇಡ್‌ ಫುಡ್ ಕೊಡದೆ, ಸಾಮಗ್ರಿಗಳನ್ನು ಕೊಟ್ಟು ತಯಾರು ಮಾಡಿಕೊಳ್ಳುವುದನ್ನು ಹೇಳಿಕೊಡಬೇಕು. ನಮ್ಮ ಶಿಕ್ಷಕರು ಉಪ್ಪಿಟ್ಟು ಮಾಡಿಕೊಡುವುದಿಲ್ಲ, ಉಪ್ಪಿಟ್ಟು ಮಾಡುವ ವಿಧಾನವನ್ನು ಕಲಿಸಿಕೊಡುತ್ತಾರೆ” ಎಂದು ತಾವು ಅಳವಡಿಸಿಕೊಂಡಿರುವ ಬೋಧನಾ ಕ್ರಮವನ್ನು ವಿವರಿಸಿದರು.

“ಯಾವುದೇ ಕಾರ್ಯಕ್ರಮವಾದರೂ ನಿರೂಪಣೆ, ಸ್ವಾಗತ, ವಂದನಾರ್ಪಣೆ ಎಲ್ಲವನ್ನೂ ಮಕ್ಕಳೇ ನಡೆಸಿಕೊಡುತ್ತಾರೆ. ಮಕ್ಕಳೇ ಮುಂದಾಳತ್ವ ವಹಿಸಿ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಪ್ರತಿದಿನ ಧ್ಯಾನ ಮಾಡುತ್ತಾರೆ. ಗಾಂಧೀಜಿಯವರ ವಚನಗಳನ್ನು, ವಿಚಾರಗಳನ್ನು ಮೆಲುಕು ಹಾಕಲಾಗುತ್ತದೆ. ಆ ಮೂಲಕ ಗಾಂಧೀಜಿಯವರ ಸ್ಮರಣೆ ನಿತ್ಯವೂ ನಡೆಯುತ್ತಿದೆ” ಎಂದು ತಿಳಿಸಿದ ಅವರು, “ಶುದ್ಧವಾದ ಕುಡಿಯುವ ನೀರಿಗಾಗಿ ಆರ್‌ಒ ಪ್ಲಾಂಟ್ ಇದೆ. ಶಾಲೆಯಲ್ಲಿಯೇ ಆರೋಗ್ಯ ತಪಾಸಣೆಯನ್ನು ಇಲಾಖೆಯಿಂದಲೂ ಮತ್ತು ವೈಯಕ್ತಿಕವಾಗಿಯೂ ಕಾಲಕಾಲಕ್ಕೆ ಹಮ್ಮಿಕೊಳ್ಳುತ್ತೇವೆ” ಎಂದು ಹೇಳಿದರು.

school 3

“ಜ್ಞಾನಮಲ್ಲಿಕಾ ಆಪ್‌ ಮೂಲಕ ಆನ್‌ಲೈನ್‌ನಲ್ಲಿ ತಜ್ಞರು ಮಕ್ಕಳೊಡನೆ ಮಾತುಕತೆ ನಡೆಸಿಕೊಡುತ್ತಾರೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗಾಗಿ ’ಸ್ನೇಹಾ ಕಲಿಕಾ’ ಕಾರ್ಯಕ್ರಮವನ್ನು ಅಳವಡಿಸಿಕೊಂಡಿದ್ದೇವೆ. ಒಂದಿಷ್ಟು ಕಲಿಕೆಯಲ್ಲಿ ಉನ್ನತಿ ಹೊಂದಿರುವ ಮಕ್ಕಳು ತಮ್ಮ ಸಹಪಾಠಿಗಳಿಗೆ ಹೇಳಿಕೊಡುವುದೇ ಸ್ನೇಹಾ ಕಲಿಕಾ ಸಹಭಾಗಿತ್ವವಾಗಿದೆ. ಇದರ ಜೊತೆಗೆ ಮೈತ್ರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಹಿರಿಯ ತರಗತಿಯ ವಿದ್ಯಾರ್ಥಿಗಳು ಕಿರಿಯರನ್ನು ದತ್ತು ತೆಗೆದುಕೊಳ್ಳುವ ವಿನೂತನ ಚಟುವಟಿಕೆ ಇದಾಗಿದೆ. ತಮ್ಮ ತಮ್ಮಲ್ಲೇ ಮಕ್ಕಳು ಯೋಗಕ್ಷೇಮ ವಿಚಾರಿಸುವುದು ಇದರ ಉದ್ದೇಶ. ಈ ರೀತಿಯ ಚಟುವಟಿಕೆಗಳನ್ನು ಮಾಡುತ್ತಾ, ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸುತ್ತಾ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ” ಎನ್ನುವ ಅವರ ಮಾತುಗಳಲ್ಲಿ ಸಮರ್ಪಣಾ ಮತ್ತು ಸಂತೃಪ್ತಿಭಾವ ಕಾಣುತ್ತದೆ.

ಕಾಡಶೆಟ್ಟಿಹಳ್ಳಿ ಸತೀಶ್ ಅವರ ಪರಿಶ್ರಮ ಅಗಾಧ

ಕಡಬ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ರಾಜ್ಯ ಗ್ರಾಮ‌ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷರೂ ಆಗಿರುವ ಕಾಡಶೆಟ್ಟಿಹಳ್ಳಿ ಸತೀಶ್ ಅವರ ಪರಿಶ್ರಮವೇ ಈ ಶಾಲೆಯ ಅಭಿವೃದ್ಧಿಗೆ ಕಾರಣ. ಗ್ರಾಮೀಣ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು ಎಂಬ ಉದ್ದೇಶ ಇಟ್ಟುಕೊಂಡು ಅವರು ಮುಂದುವರಿಯುತ್ತಿದ್ದಾರೆ.

kadashettihalli satish
ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್

’ಈದಿನ’ದೊಂದಿಗೆ ಮಾತನಾಡಿದ ಅವರು, “ಗ್ರಾಮ ಪಂಚಾಯಿತಿಯ ನರೇಗಾ ಯೋಜನೆ ಸೇರಿದಂತೆ ಬೇರೆ ಬೇರೆ ಅನುದಾನದ ಮೂಲಗಳನ್ನು ತಂದಿದ್ದು ಶಾಲೆಯನ್ನು ಉನ್ನತೀಕರಿಸಲು ಸಾಧ್ಯವಾಗಿದೆ. ಸರ್ವಶಿಕ್ಷಾ ಅಭಿಯಾನದ ಅಡಿಯಲ್ಲಿ ಶಿಕ್ಷಣ ಇಲಾಖೆ ಒಂದಿಷ್ಟು ಕಟ್ಟಡಗಳನ್ನು ಕಟ್ಟಿಕೊಟ್ಟಿದೆ. ರಾಜ್ಯಸಭಾ ಸದಸ್ಯರಾಗಿದ್ದ ಬಿ.ಜಯಶ್ರೀ ಅವರು ತಮಗೆ ಬಂದ ಲೋಕಲ್‌ ಏರಿಯಾ ಡೆವಲಪ್‌ಮೆಂಟ್ ಫಂಡ್ ನಮಗೆ ಕೊಟ್ಟರು. 1 ಕೋಟಿ 30 ಲಕ್ಷ ರೂಪಾಯಿಯಲ್ಲಿ ರಂಗಮಂದಿರ, ಬಯಲು ರಂಗಮಂದಿರ, ಆರು ಕೊಠಡಿಗಳು, ಗ್ರಂಥಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಶಾಲೆಗೆ ಒದಗಿಸಿಕೊಟ್ಟರು. ಇದರ ಜೊತೆಗೆ ಸರ್ಕಾರೇತರ ಸಂಸ್ಥೆಗಳಾದ ಸೇವ್ ದಿ ಚಿಲ್ಡ್ರನ್‌, ರೋಟರಿ ತುಮಕೂರು ಈಸ್ಟ್‌, ಶಾಲೆಯ ಹಳೆಯ ವಿದ್ಯಾರ್ಥಿಗಳ ಗುಂಪು, ಸಂಘ ಸಂಸ್ಥೆಗಳು ಈ ಶಾಲೆಗೆ ಸಹಕರಿಸಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಪಿಎಂ ಶ್ರೀ ಯೋಜನೆಯ ಸದುಪಯೋಗವನ್ನೂ ಪಡೆದಿದ್ದೇವೆ. ಎಸ್‌ಡಿಎಂಸಿ ನೇತೃತ್ವದಲ್ಲಿ ಸರಿಯಾದ ಯೋಜನೆಗಳನ್ನು ರೂಪಿಸಿ  ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದೇವೆ” ಎಂದು ಮಾಹಿತಿ ನೀಡಿದರು.

“ಇಲ್ಲಿನ ಎಲ್ಲಾ ಶಿಕ್ಷಕರು ಬಹಳ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕ ವೃತ್ತಿ ನೌಕರಿಯಲ್ಲ, ನೆಮ್ಮದಿಯ ನಾಳೆಗಳನ್ನು ಸೃಷ್ಟಿಸುವ ಪವಿತ್ರ ಜವಾಬ್ದಾರಿ ಎಂಬುದು ಇಲ್ಲಿನ ಶಿಕ್ಷಕರ ಘೋಷವಾಕ್ಯವಾಗಿದೆ. ಹೀಗಾಗಿ ನಾವು ಕೊಟ್ಟಿರುವ ಎಲ್ಲಾ ಸೌಕರ್ಯಗಳು ಸದ್ಬಳಕೆ ಆಗುತ್ತಿವೆ” ಎಂದರು.

ರಾಷ್ಟ್ರಕವಿ ಕುವೆಂಪು ವಿರಚಿತ ’ನೇಗಿಲಯೋಗಿ’ (ರೈತಗೀತೆ)ಯನ್ನು ಮಧ್ಯಾಹ್ನದ ಬಿಸಿಯೂಟದ ವೇಳೆ ಮಕ್ಕಳು ಹಾಡುವುದು ಇಲ್ಲಿನ ವಿಶೇಷ. ಪ್ರತಿ ಗ್ರಾಮದಲ್ಲೂ ಇಂತಹ ಸರ್ಕಾರಿ ಶಾಲೆ ಮತ್ತು ಶಿಕ್ಷಕರು ಇದ್ದರೆ ಎಷ್ಟು ಚೆಂದ ಅಲ್ಲವೇ? ಗ್ರಾಮಸ್ಥರು ಮನಸ್ಸು ಮಾಡಿದರೆ, ಶಿಕ್ಷಕರು ಇಚ್ಛಾಶಕ್ತಿ ತೋರಿದರೆ ಯಾವುದೂ ಕಷ್ಟವಲ್ಲ ಎಂಬುದಕ್ಕೆ ಕಾಡಶೆಟ್ಟಿಹಳ್ಳಿ ಶಾಲೆ ಮಾದರಿಯಾಗಿ ನಿಂತಿದೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X