ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಲೇ ಇದ್ದಾರೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಕಬ್ಬು ಬೆಳೆದು ಕಾರ್ಖಾನೆಗಳಿಗೆ ನೀಡಿದರೆ, ಕಬ್ಬು ಖರೀದಿಸುವ ಕಾರ್ಖಾನೆ ಮಾಲೀಕರು ಸಮಯಕ್ಕೆ ಸರಿಯಾಗಿ ಹಣ ನೀಡುತ್ತಿಲ್ಲ. ಹೀಗಾಗಿ, ಕಬ್ಬು ಬೆಳಗಾರರು ನಾನಾ ರೀತಿಯ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವು ರೈತರು ಕಾರ್ಖಾನೆಗಳ ಸಹವಾಸವೇ ಬೇಡವೆಂದು ನಿರ್ಧರಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಲವಾರು ರೈತರು ಕಾರ್ಖಾನೆಗಳಿಗೆ ಕಬ್ಬು ನೀಡದೆ, ಆಲೆಮನೆಗಳಿಗೆ ಕಬ್ಬು ಒದಗಿಸಲು ಮುಂದಾಗಿದ್ದಾರೆ. ಮಂಡ್ಯಕ್ಕೆ ಭೇಟಿ ನೀಡಿದ್ದ ಹಾನಗಲ್ ತಾಲೂಕಿನ ರೈತರ ತಂಡವೊಂದು ತಾಲೂಕಿನಲ್ಲಿ ಆಲೆಮನೆಗಳನ್ನು ತೆರೆದಿದೆ. ಶೀಗಿಹಳ್ಳಿ, ಸಿಂಗಾಪುರ, ಆಡೂರು ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಆಲೆಮನೆಗಳನ್ನು ತೆರೆದು, ಬೆಲ್ಲ ತಯಾರಿಕೆಯಲ್ಲಿ ತೊಡಗಿದ್ದಾರೆ.
ಆಲೆ ಮನೆಗಳಲ್ಲಿ ತಯಾರಿಸಿ ಬೆಲ್ಲವನ್ನು ಹಾವೇರಿ ಸೇರಿದಂತೆ ನಾನಾ ಭಾಗಗಳಲ್ಲಿ ವರ್ತಕರಿಗೆ ಮಾರಾಟ ಮಾಡಲಾಗುತ್ತದೆ. ಕಬ್ಬ ಅರೆದ ಕೆಲವೇ ದಿನಗಳಲ್ಲಿ ಹಣ ದೊರೆಯುತ್ತದೆ. ಉತ್ತಮ ಆದಾಯವೂ ಇದೆ ಎಂದು ರೈತರು ಹೇಳುತ್ತಿದ್ದಾರೆ.
ಸಕ್ಕರೆ ಕಾರ್ಖಾನೆಗಳಲ್ಲಿ ಟನ್ ಕಬ್ಬಿಗೆ 3,100 ರೂ. ದೊರೆಯುತ್ತದೆ. ಅದರಲ್ಲಿ, ಕಟಾವಿಗೆ 1,000 ರೂ. ನೀಡಬೇಕು. ಉಳಿಯುವುದು 2,100 ರೂ. ಮಾತ್ರ. ಅದು ಕಬ್ಬು ಬೆಳೆಗೆ ಹಾಕಿದ್ದ ಬಂಡವಾಳಕ್ಕೂ ಕಡಿಮೆ ಇರುತ್ತದೆ. ಆದರೆ, ಆಲೆಮನೆಗಳಲ್ಲಿ ಕೊಂಚ ಹೆಚ್ಚು ಆದಾಯ ಸಿಗುತ್ತದೆ. ಆಲೆಮನೆಯಲ್ಲಿ ತಯಾರಾಗುವ ಬೆಲ್ಲಕ್ಕೆ 10 ಕೆ.ಜಿಗೆ 340 ರೂ. ಸಿಗುತ್ತದೆ. ಒಂದು ಟನ್ ಕಬ್ಬಿನಿಂದ 90 ರಿಂದ 100 ಕೆ.ಜಿ ಬೆಲ್ಲ ಉತ್ಪಾದನೆಯಾಗುತ್ತದೆ. ಇದರಿಂದ ಸ್ವಲ್ಪ ಲಾಭವಿದೆ ಎಂದು ರೈತರು ಹೇಳಿದ್ದಾರೆ.