ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೊಸದೇನಲ್ಲ ಎಂಬಂತೆ ಆಗಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ವಿಶ್ವ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಜೆ.ಬಿ. ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಗ್ಗದಾಸಪುರ ಮುಖ್ಯ ರಸ್ತೆಯ ವರ್ಸೋವಾ ಲೇಔಟ್ ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಈ ಹಿನ್ನೆಲೆ, ಬೆಂಗಳೂರು ಸಂಚಾರ ಪೊಲೀಸರು ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸುವ ಸಲುವಾಗಿ ಕೆಲವು ಮಾರ್ಗಸೂಚಿ ನೀಡಿದ್ದಾರೆ.
“ಕಾಮಗಾರಿಯ ಸಮಯದಲ್ಲಿ ಪೂರ್ವಂಕರ ಅಪಾರ್ಟ್ಮೆಂಟ್ನಿಂದ ಕಗ್ಗದಾಸಪುರ ರೈಲ್ವೇ ಗೇಟ್ ಜಂಕ್ಷನ್ವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಿದ್ದು, ಕಗ್ಗದಾಸಪುರ ಮುಖ್ಯ ರಸ್ತೆಯಲ್ಲಿ ನಾಗವಾರ ಪಾಳ್ಯ ಕಡೆಯಿಂದ ಕಗ್ಗದಾಸಪುರ ರೈಲ್ವೇ ಗೇಟ್ ಸಂಚರಿಸುವ ಹಾಗೂ ಕಗ್ಗದಾಸಪುರ ರೈಲ್ವೇ ಗೇಟ್ ಕಡೆಯಿಂದ ನಾಗವಾರ ಪಾಳ್ಯ ಕಡೆಗೆ ಸಂಚರಿಸುವ ವಾಹನಗಳ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದೆ” ಎಂದು ಬೆಂಗಳೂರು ಸಂಚಾರ ಪೊಲೀಸ್ ಮಾಹಿತಿ ನೀಡಿದೆ.
“ಕಾಮಗಾರಿಯ ಸಮಯದಲ್ಲಿ ಕಗ್ಗದಾಸಪುರ ಮುಖ್ಯ ರಸ್ತೆಯಲ್ಲಿ ನಾಗವಾರ ಪಾಳ್ಯ ಕಡೆಯಿಂದ ಕಗ್ಗದಾಸಪುರ ರೈಲ್ವೇ ಗೇಟ್ ಸಂಚರಿಸುವ ವಾಹನಗಳು ಪೂರ್ವಂಕರ ಅಪಾರ್ಟ್ಮೆಂಟ್ ಎದುರಿನ ಬೈರಸಂದ್ರ 5ನೇ ಕ್ರಾಸ್ ಜಂಕ್ಷನ್ನಲ್ಲಿ ಬಲ ತಿರುವು ಪಡೆದು, ಬೈರಸಂದ್ರ ಮುಖ್ಯ ರಸ್ತೆಯ ಮೂಲಕ ಜಿ.ಎಂ.ಪಾಳ್ಯ ಜಂಕ್ಷನ್ ಕಡೆಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ” ಎಂದು ತಿಳಿಸಿದೆ.
ಕಗ್ಗದಾಸಪುರ ರೈಲ್ವೇ ಗೇಟ್ ಕಡೆಯಿಂದ ನಾಗವಾರ ಪಾಳ್ಯ ಕಡೆಗೆ ಸಂಚರಿಸುವ ವಾಹನಗಳು ಕಗ್ಗದಾಸಪುರ ರೈಲ್ವೇ ಗೇಟ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು – ಕಗ್ಗದಾಸಪುರ ಮುಖ್ಯ ರಸ್ತೆ – ವಿಜ್ಞಾನ ನಗರ ಜಂಕ್ಷನ್– ಬಲತಿರುವು – ಜಿ.ಎಂ ಪಾಳ್ಯ ಮುಖ್ಯ ರಸ್ತೆ– ಬೆಮೆಲ್ ಜಂಕ್ಷನ್ ಬಲ ತಿರುವು – ಗೀತಾಂಜಲಿ ಲೇಔಟ್ ಜಂಕ್ಷನ್ ಬಲ ತಿರುವು ಪಡೆದು ಡಿ.ಆರ್.ಡಿ.ಓ ಮೂಲಕ ನಾಗವಾರ ಪಾಳ್ಯ ಕಡೆಗೆ ಸಂಚರಿಸಬಹುದು ಅಥವಾ ಜಿ.ಎಂ.ಪಾಳ್ಯ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಬೈರಸಂದ್ರ ಮುಖ್ಯ ರಸ್ತೆ ಮೂಲಕ ನಾಗವಾರ ಪಾಳ್ಯ ಕಡೆಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಭವಾನಿ ರೇವಣ್ಣ ವರ್ತನೆ ಮಾಜಿ ಪ್ರಧಾನಿ ಕುಟುಂಬಕ್ಕೆ ಶೋಭೆ ತರುವಂತದಲ್ಲ: ಬಿ.ಟಿ.ನಾಗಣ್ಣ
ಬಿಬಿಎಂಪಿ ಕೈಗೆತ್ತಿಕೊಂಡಿರುವ ನಿರ್ಮಾಣ ಕಾಮಗಾರಿ ಮುಗಿಯುವವರೆಗೂ ಪೂರ್ವಂಕರ ಅಪಾರ್ಟ್ಮೆಂಟ್ನಿಂದ ಕಗ್ಗದಾಸಪುರ ರೈಲ್ವೆ ಗೇಟ್ ನಿಲ್ದಾಣದವರೆಗೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ.