ಕಾಡಾನೆಯೊಂದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ 8 ಬಾರಿ ಅಂಬಾರಿ ಹೊತ್ತಿದ್ದ ‘ಅರ್ಜುನ’ ಆನೆ ದಾರುಣವಾಗಿ ಸಾವನ್ನಪ್ಪಿದೆ. ಒಂಟಿ ಸಲಗ ಹೊಟ್ಟಿಗೆ ತಿವಿದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಅರ್ಜುನ ಸೋಮವಾರ ಕೊನೆಯುಸಿರೆಳೆದಿದೆ. ಆನೆಯ ಸಾವಿಗೆ ಕರ್ನಾಟಕ ಕಂಬನಿ ಮಿಡಿದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಕಾಡಾನೆಯೊಂದರ ಉಪಟಳ ಹೆಚ್ಚಾಗಿತ್ತು. ಅದನ್ನು ಸೆಳೆ ಹಿಡಿಯಲು ನಾಲ್ಕು ಸಾಕಾನೆಗಳೊಂದಿಗೆ ತಾಲೂಕಿನ ಬಾಳೆಕೆರೆ ಅರಣ್ಯ ಪ್ರದೇಶದಲ್ಲಿ ಸೋಮವಾರ ಕಾರ್ಯಾಚರಣೆ ನಡೆಸಲಾಗಿತ್ತು. ನಾಲ್ಕು ಸಾಕಾನೆಗಳಿಂದಲೂ ಕಾಡಾನೆಯನ್ನು ಹಿಮ್ಮೆಟ್ಟಲು ಸಾಧ್ಯವಾಗಲಿಲ್ಲ.
ಈ ವೇಳೆ, ಮೂರು ಸಾಕಾನೆಗಳು ಹಿಂದೆ ಸರಿದಿವೆ. ಆದರೆ, ಅರ್ಜುನ ಕಾರ್ಯಾಚರಣೆಯಲ್ಲಿ ಮುಂದೆ ಹೋಗಿದೆ. ಕಾಡಾನೆ ಅರ್ಜುನನ ಮೇಲೆ ನಡೆದಿದೆ. ಅರ್ಜುನನನ್ನು ಮುನ್ನಡೆಸುತ್ತಿದ್ದ ಮಾವುತ ಕೆಳಗಿಳಿದು ಓಡಿ ಹೋಗಿದ್ದಾರೆ. ಗಾಯಗೊಂಡಿದ್ದ ಆನೆ ಮೃತಪಟ್ಟಿದೆ.
ಅರ್ಜುನನ ಸಾವಿಗೆ ಹಲವಾರು ಮಂದಿ ಕಂಬನಿ ಮಿಡಿದಿದ್ದಾರೆ. ಅರ್ಜುನನನ್ನು ನೆನೆದಿರುವ ನಟ ದರ್ಶನ್, “೮ ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ ೬೪ ವರ್ಷದ ‘ಅರ್ಜುನ’ ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ!
ಓಂ ಶಾಂತಿ!” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅರ್ಜನನನ್ನು ಸ್ಮರಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, “ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಹಲವು ಬಾರಿ ಅಂಬಾರಿ ಹೊತ್ತಿದ್ದ 64 ವರ್ಷದ ಅರ್ಜುನ ಆನೆಯ ಸಾವಿನ ಸುದ್ದಿ ತಿಳಿದು ಬಹಳ ದುಃಖವಾಗಿದೆ.
ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಯ ವೇಳೆ ದುರ್ಘಟನೆ ಸಂಭವಿಸಿದ್ದು, ಮದಗಜವೊಂದು, ಅರ್ಜುನನ ಮೇಲೆ ದಾಳಿ ಮಾಡಿ, ತನ್ನ ದಂತದಿಂದ ಚುಚ್ಚಿ ಘಾಸಿಗೊಳಿಸಿ, ಸಾವಿಗೆ ಕಾರಣವಾಗಿರುವುದು ಅತ್ಯಂತ ದುರಾದೃಷ್ಟಕರ. ಕಾರ್ಯಾಚರಣೆಯಲ್ಲಿ ಪುಂಡಾನೆ ರೌದ್ರಾವತಾರ ತಾಳಿ, ಅರ್ಜುನನ ಮೇಲೆ ದಾಳಿ ಮಾಡಿದೆ. ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಜಗ್ಗದೆ ದಾಳಿ ಮಾಡಿದೆ. ಮಾವುತ ಮತ್ತು ಪಶುವೈದ್ಯರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಮೂರು ಆನೆಗಳು ಹಿಮ್ಮೆಟ್ಟಿವೆ. ಆದರೆ ಅರ್ಜುನ ಪುಂಡಾನೆಯೊಂದಿಗೆ ಏಕಾಂಗಿಯಾಗಿ ಹೋರಾಡುವಾಗ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಜುನ ಆನೆ ಈ ಹಿಂದೆ ಹಲವು ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಅನುಭವ ಹೊಂದಿತ್ತು ಮತ್ತು ತರಬೇತಿ ಕೂಡಾ ಪಡೆದಿತ್ತು.
ತಾಯಿ ಶ್ರೀ ಚಾಮುಂಡೇಶ್ವರಿಯು ಅರ್ಜುನನ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, “ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ, ಸಕಲೇಶಪುರ ತಾಲೂಕಿನ ಯಸಳೂರು ವಲಯದ ಬಾಳೆಕೆರೆ ಫಾರೆಸ್ಟ್‌ನಲ್ಲಿ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ಸಂಗತಿ ತಿಳಿದು ದುಃಖವಾಗಿದೆ. ಒಂದು ಕಾಲದಲ್ಲಿ ಮೈಸೂರು ದಸರಾದ ಕೇಂದ್ರಬಿಂದುವಾಗಿದ್ದ ಅರ್ಜುನ ನಮ್ಮೆಲ್ಲರ ಹೃದಯದಲ್ಲಿ ಮರೆಯಲಾರದ ನೆನಪುಗಳನ್ನು ಬಿಟ್ಟುಹೋಗಿದ್ದಾನೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಅರ್ಜನನ ಸಾವಿಗೆ ಕಂಬನಿ ಮಿಡಿದಿದ್ದು, “ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಘಟನೆ ತಿಳಿದು ಬಹಳ ನೋವುಂಟಾಯಿತು. ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ. ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ. ಕಾಡಾನೆಗಳನ್ನು ಸೆರೆ ಹಿಡಿಯುವಾಗ ತಮ್ಮ ಪ್ರಾಣ ರಕ್ಷಣೆಯ ಜತೆಗೆ ವನ್ಯಮೃಗಗಳ ಜೀವಕ್ಕೆ ಹಾನಿ ಆಗದಂತೆ ಅರಣ್ಯ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಲಿ. ಅರ್ಜುನನ ಆತ್ಮಕ್ಕೆ ಚಿರಶಾಂತಿ ಸಿಗಲಿ. ಆ ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ” ಎಂದಿದ್ದಾರೆ.
“ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಗಜರಾಜ ಅರ್ಜುನ ಆನೆಗಳ ಕಾರ್ಯಾಚರಣೆ ವೇಳೆ ಮರಣ ಹೊಂದಿರುವ ಸುದ್ದಿ ತೀವ್ರ ನೋವುಂಟು ಮಾಡಿದೆ. ಅರ್ಜುನನ ಆತ್ಮಕ್ಕೆ ಶಾಂತಿ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.