ದೇಶದ ಎಲ್ಲ ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸುವಂತೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ) ಸೂಚನೆ ನೀಡಿದೆ. ಯುಜಿಸಿ ನಡೆ ಖಂಡನೀತ ಎಂದು ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕ್ಯಾಂಪಸ್‌ಗಳಲ್ಲಿ ಮೋದಿ ಭಾವಚಿತ್ರದೊಂದಿಗೆ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳಲು ಮತ್ತು ಅವುಗಳನ್ನು ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಸಂದರ್ಶಕರನ್ನು ಉತ್ತೇಜಿಸುವಂತೆ ಅಧಿಕಾರಿಗಳಿಗೆ ಯುಜಿಸಿ ತಿಳಿಸಿದೆ. ಇದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಯಲ್ಲ. ಈ ನಡೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿಯೂ ತೊಂದರೆಯಾಗಲಿದ್ದು, ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ” ಎಂದು ಅವರು ಹೇಳಿದ್ದಾರೆ.
“ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ಗುರಿಯಾಗಿಸಿ ಕ್ಯಾಂಪಸ್‌ಗಳಲ್ಲಿ ಇಂತಹ ಅಭಿಯಾನ ನಡೆಸಿ ಯುವ ವಿದ್ಯಾರ್ಥಿಗಳನ್ನು ತನ್ನೆಡೆಗೆ ಸೆಳೆಯುವ ಹುನ್ನಾರ ಮಾಡುತ್ತಿರುವುದು ವಿಷಾದನೀಯ. ಪಕ್ಷದ ಪರವಾಗಿ ಪ್ರಚಾರ ಮಾಡಲು ತನ್ನದೇ ಆದ ವೇದಿಕೆಯಿದೆ. ಅದನ್ನು ಬಿಟ್ಟು ಇಂತಹ ಚಟುವಟಿಕೆಗಳನ್ನು ಕಾಲೇಜು ಕ್ಯಾಂಪಸ್‌ಗಳಲ್ಲಿ ಆರಂಭಿಸುವುದು ಸರಿಯಲ್ಲ” ಎಂದು ಕಿಡಿಕಾರಿದ್ದಾರೆ.
“ಯುಜಿಸಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಇಂತಹ ಚಟುವಟಿಕೆಗಳಿಗೆ ಶೈಕ್ಷಣಿಕ ವ್ಯವಸ್ಥೆಯನ್ನು ಬಲಿಕೊಡಬಾರದು. ವಿದ್ಯಾರ್ಥಿಗಳ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ತನ್ನ ಸೂಚನೆಯನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ವಿದ್ಯಾರ್ಥಿ ಚಳವಳಿ ನಡೆಸುತ್ತೇವೆ” ಎಂದು ಎಚ್ಚರಿಸಿದ್ದಾರೆ.