‘ಆಯುಷ್ಮಾನ್ ಭಾರತ್’ ಮತ್ತು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ನಿಗದಿತ ಸೌಲಭ್ಯ ಕೊಡುತ್ತಿಲ್ಲ. ಯೋಜನೆಯ ಸೌಲಭ್ಯ ಪಡೆಯಲು ಅರ್ಹವಾಗಿದ್ದರೂ ಹೆಚ್ಚುವರಿ ಮೊತ್ತವನ್ನು ರೋಗಿಗಳಿಂದಲೇ ಪಡೆಯಲಾಗುತ್ತಿದೆ ಎಂಬ ಆರೋಪ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಳಿಬಂದಿದೆ.
ಈ ಸಂಬಂಧ ಕಳೆದ ಮಾರ್ಚ್‌ನಿಂದ ಇಲ್ಲಿಯವರೆಗೆ ಒಟ್ಟು 16 ದೂರುಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್.ಎಂ.ಪಿ ಅವರು ನಡೆಸಿದ ಆಯುಷ್ಮಾನ್ ಯೋಜನೆಯ ಕುಂದು ಕೊರತೆ ನಿವಾರಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಆಯುಷ್ಮಾನ್ ಭಾರತ್ ಯೋಜನೆಯಡಿ ದಾಖಲಾದ ರೋಗಿಗಳಿಗೆ ಯೋಜನೆಯಡಿ ಬರುವ ಎಲ್ಲ ಸೌಲಭ್ಯಗಳು ಆಸ್ಪತ್ರೆಗಳು ಒದಗಿಸಲೇಬೇಕು. ಅದೇ ರೀತಿ ಸರ್ಕಾರ ನಿಗದಿಪಡಿಸಿದ ಮೊತ್ತವನ್ನೇ ಪಡೆಯಬೇಕು. ಹೆಚ್ಚುವರಿ ಮೊತ್ತ ಪಡೆಯುವಂತಿಲ್ಲ” ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ ತಿಳಿಸಿದ್ದಾರೆ.
“ಆದರೂ, ನಿಯಮ ಮೀರಿ ರೋಗಿಗಳಿಂದ ಹಣ ಪಡೆಯಲಾಗಿದೆ. ಈ ಸಂಬಂಧ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ವಿರುದ್ಧ ಒಟ್ಟು 16 ದೂರುಗಳು ಬಂದಿವೆ. ಈ ಪೈಕಿ 9 ಪ್ರಕರಣವನ್ನು ಜಿಲ್ಲಾ ಆರೋಗ್ಯಧಿಕಾರಿ ಹಂತದಲ್ಲಿ ಇತ್ಯರ್ಥ ಮಾಡಲಾಗಿದೆ” ಎಂದು ಅವರು ಹೇಳಿದ್ದಾರೆ.
“ಆಯುಷ್ಮಾನ್ ಯೋಜನೆಯಡಿ ರೋಗಿಗಳಿಗೆ ಸಮರ್ಪಕ ಸೇವೆ ಆಸ್ಪತ್ರೆಗಳು ನೀಡಬೇಕು. ಯಾವುದೇ ದೂರುಗಳು ಬಾರದಂತೆ ರೋಗಿಗಳೊಂದಿಗೆ ವ್ಯವಹರಿಸಬೇಕು” ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಮುಕುಲ್ ಜೈನ್, ಆಯುಷ್ಮಾನ್ ಭಾರತ್ ನೋಡಲ್ ಅಧಿಕಾರಿ ಡಾ.ಸುದರ್ಶನ್, ಪ್ರಾದೇಶಿಕ ಸಮನ್ವಯ ಅಧಿಕಾರಿಗಳಾದt ಡಾ.ಯಶಸ್ವಿನಿ, ಡಾ.ನೌಷಾದ್ ಮತ್ತಿತರರು ಇದ್ದರು.