ಕಳೆದ ಎರಡು ದಿನಗಳಿಂದ ತಮಿಳುನಾಡಿನ ಚೆನ್ನೈ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಗೆ ಹಾನಿಯುಂಟು ಮಾಡಿದ್ದ ಮಿಚಾಂಗ್ ಚಂಡಮಾರುತ ಇಂದು ಆಂಧ್ರಪ್ರದೇಶಕ್ಕೆ ಅಪ್ಪಳಿಸಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ, ತಿರುಪತಿ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಬಹುತೇಕ ಎಲ್ಲ ಸೇವೆಗಳು ಸ್ಥಗಿತಗೊಂಡಿವೆ. ಆಂಧ್ರದ ಎಲ್ಲ ಮೂರು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಟ್ಟು 51 ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ರೈಲು ಸೇವೆಗಳಿಗೆ ತೊಂದರೆಯುಂಟಾದ ಕಾರಣ 100ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ.
ಮಿಂಚಾಂಗ್‌ನ ತೀವ್ರ ಚಂಡಮಾರುತದಿಂದ ಹಲವು ಕಡೆ ಭೂಕುಸಿತ ಉಂಟಾಗಿದೆ. ಮಳೆಯಿಂದ ಭಾರಿ ಪ್ರವಾಹ ಉಂಟಾಗುವ ಕಾರಣದಿಂದ ನೆಲ್ಲೂರು, ಪ್ರಕಾಶಂ ಮತ್ತು ಬಾಪಟ್ಲಾ ಜಿಲ್ಲೆಗಳಿಂದ ಸುಮಾರು 9,450 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ನಿರಂತರ ಮಳೆಯಿಂದಾಗಿ ತಿರುಪತಿಯ ಎಲ್ಲ 5 ಪ್ರಮುಖ ಅಣೆಕಟ್ಟುಗಳು ಭರ್ತಿಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಹರಿಯುತ್ತವೆ. ಆಂಧ್ರಪ್ರದೇಶ ಸರ್ಕಾರವು ಚಂಡಮಾರುತ ಪೀಡಿತ ಜಿಲ್ಲೆಗಳಿಗೆ ಹಲವಾರು ಹಿರಿಯ ಅಧಿಕಾರಿಗಳನ್ನು ವಿಶೇಷ ಅಧಿಕಾರಿಗಳನ್ನಾಗಿ ನೇಮಿಸಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಚಂಡಮಾರುತದ ಪರಿಣಾಮದ ಬಗ್ಗೆ ಚರ್ಚಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪರಿಶೀಲನಾ ಸಭೆ ನಡೆಸಿದರು. ತೀವ್ರ ಚಂಡಮಾರುತ ಮಿಚಾಂಗ್‌ನಿಂದ ಪೀಡಿತ ಪ್ರದೇಶಗಳಲ್ಲಿ ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ವಿವಿಧ ಜಿಲ್ಲಾ ಅಧಿಕಾರಿಗಳಿಂದ ಏಕಕಾಲದಲ್ಲಿ ಅವಲೋಕನ ಸಭೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಡಿ.6 ರಂದು ನಡೆಯಲಿರುವ ‘ಇಂಡಿಯಾ’ ಸಭೆ ಮುಂದೂಡಿಕೆ
ಚೆನ್ನೈನಲ್ಲಿ 8 ಮಂದಿ ಸಾವು
ಭಾನುವಾರ (ಡಿ.3) ರಾತ್ರಿ ಚಂಡಮಾರುತ ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಿಗೆ ಮಿಚಾಂಗ್ ಅಬ್ಬರಿಸಿದ ಕಾರಣ ಮಹಾನಗರದಾದ್ಯಂತ ಸಾವಿರಾರು ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರ ಆಸ್ತಿ ನಾಶಪಡಿಸಿದೆ. ವಿದ್ಯುತ್ ಸ್ಪರ್ಶ, ಮರ ಬೀಳುವಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಎಂಟು ಮಂದಿ ಸಾವನ್ನಪ್ಪಿದ್ದಾರೆ.
ಸೋಮವಾರ ರಾತ್ರಿ ಮಿಚಾಂಗ್ ಚಂಡಮಾರುತವು ಚೆನ್ನೈ ಕರಾವಳಿಯನ್ನು ದಾಟಿದ ನಂತರವೂ ಅರುಂಬಕ್ಕಂ, ಎಂಎಂಡಿಎ, ಚೂಲೈಮೇಡು, ಅಮಿಂಜಿಕಾರಿ ಸುತ್ತಮುತ್ತಲಿನ ಪ್ರದೇಶಗಳ ವಸತಿ ಪ್ರದೇಶಗಳು ಇನ್ನೂ ಜಲಾವೃತವಾಗಿವೆ. ಕಳೆದ 2 ದಿನಗಳಲ್ಲಿ ನಗರದಲ್ಲಿ 45 ಸೆಂ.ಮೀ ಮಳೆಯಾಗಿದೆ.
ಚೆನ್ನೈನಲ್ಲಿ ಚಂಡಮಾರುತದ ಪರಿಣಾಮದಿಂದ ವಿಪರೀತ ಮಳೆ ಸುರಿದು, ರಸ್ತೆಗಳು ನದಿಯಂತಾಗಿವೆ. ವಾಹನಗಳು ಕೊಚ್ಚಿಕೊಂಡು ಹೋಗುವ ವಿಡಿಯೋಗಳು ವೈರಲ್ ಆಗಿವೆ. ಇದರಿಂದಾಗಿ ಮಳೆ ಅಪಾಯವಿರುವ ಪ್ರದೇಶಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೂ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಮಾಡುವಂತೆ ಸಂಸ್ಥೆಗಳು ಸೂಚಿಸಿದೆ.
ವಿದ್ಯುತ್ ಪೂರೈಕೆ ಮತ್ತು ಇಂಟರ್ನೆಟ್ ಸಂಪರ್ಕದ ವ್ಯತ್ಯಯದಿಂದ ದೈನಂದಿನ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ತೊಡಕಾಗಿದೆ. ಭಾರಿ ಗಾಳಿಯಿಂದಾಗಿ ಮರಗಳು, ಗೋಡೆಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಸರ್ಕಾರಿ ಆಸ್ಪತ್ರೆಗಳಿಗೆ ನೀರು ನುಗ್ಗಿದ್ದರಿಂದ ಆರೋಗ್ಯ ಸೇವೆಗಳಿಗೆ ತಾತ್ಕಾಲಿಕ ತಡೆ ಬಿದ್ದಿದೆ. ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣಗಳಿಗೂ ನೀರು ನುಗ್ಗಿ ಜಲಾವೃತವಾಗಿದೆ.