ಯುದ್ಧಪೀಡಿತ ಮಯನ್ಮಾರ್ ಮತ್ತು ಗಲಭೆ ಪೀಡಿತ ಮಣಿಪುರದಿಂದ ವಲಸೆ ಬಂದವರಿಗೆ ಆಶ್ರಯ ನೀಡಿದ ಅಂಶ ಚುನಾವಣೆಯಲ್ಲಿ ನೆರವಾಗಬಹುದೆಂಬ ಎಂ.ಎನ್ ಎಫ್. ನಿರೀಕ್ಷೆ ಫಲಿಸಿಲ್ಲ. ಬಿಜೆಪಿ ಎರಡು ಸೀಟು ಗೆದ್ದಿರುವುದು ಮತ್ತೊಂದು ಮಹತ್ವದ ಬೆಳವಣಿಗೆ.
ಮೂವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಇಬ್ಬರೇ ಮುಖ್ಯಮಂತ್ರಿಗಳನ್ನು ನೋಡಿತ್ತು ಮಿಜೋರಾಂ. ಕಾಂಗ್ರೆಸ್ ಪಕ್ಷದ ಲಾಲ್ಥನ್ ಹಾವ್ಲಾ ಮತ್ತು ಮಿಜೋ ನ್ಯಾಶನಲ್ ಫ್ರಂಟ್ ನ ಝೋರಂತಂಗಾ. ಹಾಲಿ ಚುನಾವಣೆಯಲ್ಲಿ ಈ ‘ದ್ವಿಸಾಮ್ಯ’ ಮುರಿದುಬಿದ್ದಿದೆ. ರಾಜಸ್ತಾನದಂತೆ ಮಿಜೋ ಮತದಾರರು ಕೂಡ ಹೆಂಚಿನಲ್ಲಿ ಬೇಯುತ್ತಿದ್ದ ರೊಟ್ಟಿಯನ್ನು ತಪ್ಪದೆ ತಿರುವಿ ಹಾಕುವ ರೂಢಿ ಇಟ್ಟುಕೊಂಡಿದ್ದವರು. ಇದೀಗ ಹೊಸ ರೊಟ್ಟಿಯನ್ನು ಹೆಂಚಿಗೆ ಹಾಕಿದ್ದಾರೆ. ಹೊಸ ತೃತೀಯ ಶಕ್ತಿ ಜೋರಂ ಪೀಪಲ್ಸ್ ಮೂವ್ಮೆಂಟ್ ನ್ನು ದೊಡ್ಡ ಬಹುಮತದಿಂದ ಅಧಿಕಾರಕ್ಕೆ ತಂದಿದ್ದಾರೆ. 40ರ ಪೈಕಿ 27 ಸೀಟುಗಳನ್ನು ಜೋರಂ ಪೀಪಲ್ಸ್ ಮೂವ್ಮೆಂಟ್ (ZPM) ಗೆದ್ದುಕೊಂಡಿದೆ. ಮೂರು ಸಲ ಮುಖ್ಯಮಂತ್ರಿಯಾಗಿದ್ದ ಜೋರಂತಂಗಾ ಪಕ್ಷ ಮಾತ್ರವಲ್ಲ, ಖುದ್ದು ತಾವೂ ಸೋತಿದ್ದಾರೆ.
ಜಡ್.ಪಿ.ಎಂ.ನ ಮುಖ್ಯಸ್ಥ ಲಾಲ್ಡುಹೋಮ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ನಿಶ್ಚಿತ. ಕ್ರೈಸ್ತ ಬಹುಸಂಖ್ಯಾತರಿರುವ ಈ ರಾಜ್ಯಕ್ಕೆ ಹಿಂದುತ್ವ ನುಸುಳುತ್ತಿರುವ ಅಪಾಯವನ್ನು ಪ್ರೊಜೆಕ್ಟ್ ಮಾಡಿತ್ತು ಕಾಂಗ್ರೆಸ್. ಈ ಎರಡೂ ಪಾರ್ಟಿಗಳ ಕುರಿತು ಮಿಜೋಗಳು ಬೇಸತ್ತಿದ್ದಾರೆ. ತನಗೆ ಗೆಲುವು ಖಚಿತ ಎಂಬ ಜಡ್.ಪಿ.ಎಂ. ನಿರೀಕ್ಷೆ ನಿಜವಾಗಿದೆ. 79 ವರ್ಷ ವಯಸ್ಸಿನ ಝೋರಂತಂಗಾ ಅವರ ಪಾಲಿಗೆ ಪ್ರಾಯಶಃ ಇದು ಕಡೆಯ ಚುನಾವಣೆ.
ಲಾಲ್ಥನ್ ಹಾವ್ಲಾ ಕಳೆದ ಚುನಾವಣೆಯ ನಂತರ ನಿವೃತ್ತಿ ಘೋಷಿಸಿದ್ದರು. 2017ರಲ್ಲಿ ಮಿಜೋರಾಂನ ಮಾರಾ ಡೆಮಾಕ್ರಟಿಕ್ ಫ್ರಂಟ್ ಬಿಜೆಪಿಯಲ್ಲಿ ವಿಲೀನಗೊಂಡಿತ್ತು. ಹೀಗಾಗಿ ಮಿಜೋರಾಂನ ಎರಡನೆಯ ಬಹುಸಂಖ್ಯಾತ ಮಾರಾ ಸಮುದಾಯ ಬಿಜೆಪಿಯ ಬೆನ್ನಿಗಿದೆ. ಆದರೆ ಚಾಕ್ಮಾ ಸಮುದಾಯ ಈ ಸಲ ಬಿಜೆಪಿಯ ಕೈಬಿಟ್ಟಿದೆ. ಚಾಕ್ಮಾಗಳ ತಲೆಯಾಳು ಬುದ್ಧಾ ಧಾನ್ ಚಕ್ಮಾ ಅವರ ರಾಜಕೀಯ ನಿವೃತ್ತಿ ಈ ಬೆಳವಣಿಗೆಯ ಹಿನ್ನೆಲೆ ಯುದ್ಧಪೀಡಿತ ಮಯನ್ಮಾರ್ ಮತ್ತು ಗಲಭೆ ಪೀಡಿತ ಮಣಿಪುರದಿಂದ ವಲಸೆ ಬಂದವರಿಗೆ ಆಶ್ರಯ ನೀಡಿದ ಅಂಶ ಚುನಾವಣೆಯಲ್ಲಿ ನೆರವಾಗಬಹುದೆಂಬ ಎಂ.ಎನ್ ಎಫ್. ನಿರೀಕ್ಷೆ ಫಲಿಸಿಲ್ಲ. ಬಿಜೆಪಿ ಎರಡು ಸೀಟು ಗೆದ್ದಿರುವುದು ಮತ್ತೊಂದು ಮಹತ್ವದ ಬೆಳವಣಿಗೆ. ಸೈಹಾ ಮತ್ತು ಪಲಕ್ ಎಂಬ ಈ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಜನಾಂಗೀಯ ಅಲ್ಪಸಂಖ್ಯಾತರದೇ ದೊಡ್ಡ ಸಂಖ್ಯೆ.
ನೆರೆಯ ಮಣಿಪುರದ ಕುಕಿ-ಝೋಮಿ ಮತ್ತು ಮಿಜೋ ಬುಡಕಟ್ಟುಗಳ ಮೂಲ ಬುಡಕಟ್ಟು ಝೋ. ಮಣಿಪುರದ ಮೈತೇಯಿ- ಕುಕಿ ಘರ್ಷಣೆಗಳ ಹಿಂಸೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಲಿಪಶುಗಳಾದವರು ಕುಕಿ ಮತ್ತು ಝೋಮಿ ಬುಡಕಟ್ಟುಗಳ ಜನ. ಹೀಗಾಗಿ ಮಿಜೋಗಳ ಸಹಾನುಭೂತಿ ಈ ಬುಡಕಟ್ಟುಗಳ ಮೇಲಿದ್ದುದು ಸ್ವಾಭಾವಿಕ. ಮಣಿಪುರವನ್ನು ಮೋದಿಯವರ ಬಿಜೆಪಿಯೇ ಆಳುತ್ತಿದೆ. ಆದರೆ ಹಿಂಸಾಚಾರ, ಸಾವುನೋವು, ಅತ್ಯಾಚಾರಗಳ ನಂತರ ಅವರು ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಮಿಜೋಗಳ ಆಕ್ರೋಶ ಅವರಿಗೆ ತಿಳಿದಿತ್ತು.
ಪರಿಣಾಮವಾಗಿ ಮಿಜೋರಾಂ ಚುನಾವಣಾ ಪ್ರವಾಸವನ್ನೇ ರದ್ದು ಮಾಡಿದ್ದರು. ಮೋದಿಯವರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಜೋರಂತಂಗಾ ಅವರ ಎಂ.ಎನ್.ಎಫ್. ಪಕ್ಷ ಮಿಜೋಗಳ ಮೂಗಿಗೆ ತುಪ್ಪ ಒರೆಸಿತೇ ವಿನಾ ಬಿಜೆಪಿಯೊಂದಿಗೆ ಮೈತ್ರಿಯನ್ನು ಕಡಿದುಕೊಳ್ಳಲಿಲ್ಲ. ಬದಲಿಗೆ ಮಣಿಪುರದ ಹಿಂಸಾಚಾರ ಎಲ್ಲ ಝೋ ಜನಾಂಗಗಳಿಗೂ ಬಹುಮುಖ್ಯ ಎಂದು ಮಿಜೋ ರಾಷ್ಟ್ರೀಯತೆಯನ್ನು ಬಲವಾಗಿ ಎತ್ತಿ ಹಿಡಿದಿತ್ತು ಹೊಸ ಪಕ್ಷ ಝಡ್ ಪಿ ಎಂ.
ಮಿಜೋರಾಂ ಬಿಜೆಪಿ ಅಧ್ಯಕ್ಷ ವನ್ಲಾಲ್ಮೌಕ ಅವರು ನೀಡಿರುವ ಹೇಳಿಕೆಯ ಪ್ರಕಾರ ಝಡ್ ಪಿ ಎಂ ನ ಹೊಸ ಸರ್ಕಾರವನ್ನು ಬಿಜೆಪಿ ಸೇರಲಿದೆಯಂತೆ. ಮಿಜೋ ಆಡಳಿತ ಮಿಜೋರಾಂನಿಂದಲೇ ವಿನಾ ದೆಹಲಿಯಿಂದ ಅಲ್ಲ ಎಂದು ಎಂ.ಎನ್.ಎಫ್ ಮತ್ತು ಕಾಂಗ್ರೆಸ್ಸನ್ನು ಹಂಗಿಸಿದ್ದರು ಲಾಲ್ಡುಹೋಮ. ಎಂ.ಎನ್.ಎಫ್ ಮತ್ತು ಬಿಜೆಪಿ ಗೆಳೆತನವನ್ನು ವಿರೋಧಿಸಿದ್ದರು. ಬಿಜೆಪಿ ಹೊಸ ಸರ್ಕಾರವನ್ನು ಸೇರಿದರೆ ತಾವು ಉಗುಳಿದ್ದನ್ನು ಮರಳಿ ನುಂಗಬೇಕಿರುವುದು ಬಹುದೊಡ್ಡ ವಿಡಂಬನೆ.
ಚುನಾವಣೆಯಿಂದ ಚುನಾವಣೆಗೆ ಕೆಳಜಾರುತ್ತಲೇ ಇರುವ ಕಾಂಗ್ರೆಸ್ ಪಕ್ಷದ ಶಾಸಕ ಸಂಖ್ಯೆ ಈ ಚುನಾವಣೆಯಲ್ಲಿ ಕೇವಲ ಒಂದಕ್ಕೆ ಇಳಿದಿದೆ. ಒಂದು ಕಾಲದಲ್ಲಿ ಈಶಾನ್ಯ ಭಾರತ ಸೀಮೆಯ ಮೇಲೆ ಬಿಗಿಹಿಡಿತ ಹೊಂದಿದ್ದ ಪಕ್ಷವಿದು. ಇದೇ ವರ್ಷದ ಆರಂಭದಲ್ಲಿ ನಡೆದ ತ್ರಿಪುರ, ನಾಗಾಲ್ಯಾಂಡ್ ಹಾಗೂ ಮೇಘಾಲಯದ ಚುನಾವಣೆಗಳಲ್ಲೂ ಈ ಪಕ್ಷದ್ದು ಅತ್ಯಂತ ಕಳಪೆ ಸಾಧನೆಯಾಗಿತ್ತು. ಮೇಘಾಲಯದಲ್ಲಿ ಖಾತೆಯನ್ನೇ ತೆರೆಯಲಿಲ್ಲ. ತ್ರಿಪುರದ 60 ಸೀಟುಗಳ ಪೈಕಿ 13ಕ್ಕೆ ಹುರಿಯಾಳುಗಳನ್ನು ಇಳಿಸಿ ಕೇವಲ ಮೂರನ್ನು ಗೆದ್ದಿತ್ತು.
2018ರ ಚುನಾವಣೆಯಲ್ಲಿ ಈ ಪಕ್ಷದ ಸಾಧನೆ ಶೂನ್ಯ. ಮೇಘಾಲಯದಲ್ಲೂ ಒಟ್ಟು 60 ಸೀಟುಗಳ ಪೈಕಿ 23ಕ್ಕೆ ಮಾತ್ರ ಅಭ್ಯರ್ಥಿಗಳನ್ನು ಹೂಡಿತ್ತು. ಖಾತೆಯನ್ನೇ ತೆರೆಯಲಿಲ್ಲ. ನಾಗಾಲ್ಯಾಂಡ್ ನಲ್ಲಿ ಸತತ ಎರಡನೆಯ ಸಲ ಖಾತೆ ತೆರೆಯದೆ ಹೋಗಿತ್ತು. ತ್ರಿಪುರ ಮತ್ತು ನಾಗಲ್ಯಾಂಡ್ ನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮರಳಿ ಅಧಿಕಾರ ಹಿಡಿದವು. ಒಂದಾನೊಮ್ಮೆ ಈಶಾನ್ಯ ಭಾರತದಲ್ಲಿ ಅಸ್ತಿತ್ವವೇ ಇರದಿದ್ದ ಬಿಜೆಪಿ ಈ ಮೇಘಗಳ ನಾಡಿನಲ್ಲಿ ಐದು ಸೀಟುಗಳನ್ನು ಗೆದ್ದಿತ್ತು. ಈಶಾನ್ಯದ ಎಂಟು ರಾಜ್ಯಗಳ ಪೈಕಿ ಏಳರಲ್ಲಿ ಬಿಜೆಪಿ ಪ್ರತ್ಯಕ್ಷ-ಪರೋಕ್ಷವಾಗಿ ಅಧಿಕಾರ ಹಿಡಿದಿದೆ. ಕಾಂಗ್ರೆಸ್ ನ ಅವನತಿಗೆ ಹೋಲಿಸಿದರೆ ಉನ್ನತಿಯ ತನ್ನ ಹೆಜ್ಜೆ ಗುರುತುಗಳನ್ನು ಮತ್ತಷ್ಟು ದೃಢವಾಗಿ ಮೂಡಿಸತೊಡಗಿದೆ. ತ್ರಿಪುರದಲ್ಲಿ ಎಡರಂಗ ಸರ್ಕಾರವನ್ನು ಕೆಡವಿ ಎರಡನೆಯ ಸಲ ಅಧಿಕಾರಕ್ಕೆ ಬಂದಿದೆ.
2014ರಿಂದ ಬಿಜೆಪಿಯ ಆಕ್ರಮಣಶೀಲ ಚುನಾವಣಾ ವ್ಯೂಹರಚನೆಯ ಮುಂದೆ ಮಂಕಾಗಿ ಮರೆಯಾಗತೊಡಗಿದೆ ದೇಶದ ಅತ್ಯಂತ ಹಳೆಯ ಪಕ್ಷ. ಕಳೆದಕೊಂಡಿರುವ ಗೆಲುವಿನ ದಾರಿಯನ್ನು ಮರಳಿ ಹುಡುಕಬೇಕಿದೆ. ಅದಕ್ಕೆ ಅಗತ್ಯವಿರುವ ಪರಿಶ್ರಮ ಸಾಲದು ಎಂಬ ಅಂಶ ಮೇಲ್ನೋಟಕ್ಕೆ ತಿಳಿಯುವಂತಹುದು.
