ಮಂಡ್ಯ ಮತ್ತು ಮೈಸೂರು ಜಿಲ್ಲೆಗಳನ್ನು ಕೇಂದ್ರವಾಗಿಟ್ಟುಕೊಂಡು ಸಾವಿರಾರು ಹೆಣ್ಣು ಭ್ರೂಣ ಹತ್ಯೆಗಳನ್ನು ನಡೆಸಿರುವ ದುಷ್ಟರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಮಂಡ್ಯದಲ್ಲಿ ಮಂಗಳವಾರ ಬೃಹತ್ ಪ್ರತಿರೋಧ ಪ್ರತಿಭಟನೆ ನಡೆಸಿವೆ.
ಮಂಡ್ಯ ನಗರದ ಸಂಜಯ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಮಹಿಳಾ ವಿವಿಯ ಡಾ.ಹೇಮಾಲತಾ ಮಾತನಾಡಿ, “ಇಂದಿನ ಯುಗದಲ್ಲಿಯೂ ಇಂತಹ ಹೆಣ್ಣುಭ್ರೂಣ ಹತ್ಯೆ ನಡೆಯುತ್ತಿರುವುದು ಖಂಡನೀಯ. ಅದರಲ್ಲೂ ವಿದ್ಯಾವಂತರಾದ ವೈದ್ಯರೇ, ನರ್ಸ್ ಗಳು ಹಾಗೂ ಪೋಷಕರೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಆತಂಕಕಾರಿಯಾಗಿದೆ” ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಹಾಡ್ಯ ಗ್ರಾಮದಲ್ಲಿ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುವ ಕರಾಳ ದಂಧೆ ನಡೆದಿದ್ದು, ಆದರೂ ಸಹ ಎಚ್ಚೆತ್ತುಕೊಳ್ಳದ ಆರೋಗ್ಯ ಇಲಾಖೆ ಬೇಜವಾಬ್ದಾರಿ ತೋರಿದೆ, ದಂಧೆ ಕೋರರು ಸಾಕ್ಷನಾಶ ಮಾಡಿಕೊಳ್ಳಲು ಅನುಕೂಲವಾಗುವಂತೆ ಅಧಿಕಾರಿಗಳು ವಿಳಂಬವಾಗಿ ಸ್ಥಳಕ್ಕೆ ತೆರಳಿದರು, ಇದನ್ನು ನೋಡಿದರೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ದೂರಿದರು.
ಪ್ರಕರಣವನ್ನು ಸಿ ಐ ಡಿ ತನಿಖೆಗೆ ಒಪ್ಪಿಸಿದ್ದರೂ ಅಪರಾಧಿಗಳಿಗೆ ಜಾಮೀನು ಸಿಕ್ಕಿ ಹೋರ ಬರುತ್ತಿರುವುದು ಸರಿಯಾದ ಕ್ರಮ ಅಲ್ಲ. ಸಾಕ್ಷಿ ನಾಶ ಮಾಡಲು ತಾವೇ ಅವಕಾಶ ಒದಗಿಸಿದಂತೆ ಆಗುತ್ತದೆ. ಇದಕ್ಕೆ ಎಡೆ ಮಾಡಿ ಕೊಡದೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೆಣ್ಣು ಭ್ರೂಣ ಹತ್ಯೆ ಜಾಲ ರಾಜ್ಯದ ಎಲ್ಲೆಡೆ ವಿಸ್ತರಿಸಿದ್ದು, ಉನ್ನತ ಮಟ್ಟದ ತನಿಖೆ ನಡೆಸಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಪತ್ತೆ ನಿಷೇಧ ಕಾಯ್ದೆ ಅನ್ವಯ ಕಾನೂನು ಕ್ರಮ ವಹಿಸಬೇಕು. ಕಾಯ್ದೆ ಉಲ್ಲಂಘಿಸುವ ವೈದ್ಯರು ಮತ್ತು ಸ್ಕ್ಯಾನಿಂಗ್ ಸೆಂಟರ್ ಗಳ ಪರವಾನಗಿ ಶಾಶ್ವತವಾಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರ್ತಿ ಸುನಂದ ಜಯರಾಂ, ಮಹಿಳಾ ಮುನ್ನಡೆ ಪೂರ್ಣಿಮಾ, ಶಿಲ್ಪ,, ವಿಮೋಚನ ಮಹಿಳಾ ಸಂಘಟನೆಯ ಜನಾರ್ಧನ್, ಇಂಪನ, ಸಿಐಟಿಯು ನ ಸಿ ಕುಮಾರಿ, ಜನವಾದಿ ಮಹಿಳಾ ಸಂಘಟನೆಯ ಡಿ.ಕೆ ಲತಾ, ರಾಣಿ ಸುಶೀಲ, ವಕೀಲೆ ಎಚ್ಎಸ್ ನಾಗರತ್ನಮ್ಮ, ಲಕ್ಷ್ಮಿ, ಮುತ್ತಮ್ಮ, ನಾಗಮ್ಮ, ಮಹಾದೇವಮ್ಮ ನೇತೃತ್ವ ವಹಿಸಿದ್ದರು.
- ಹೆಣ್ಣು ಭ್ರೂಣ ಹತ್ಯೆ ಜಾಲ ಬರೀ ನಮ್ಮ ಜಿಲ್ಲೆಗೆ ಮಾತ್ರ ಸಿಮೀತವಾಗದೇ ಬೇರೆ ಬೇರೆ ಜಿಲ್ಲೆಗಳಿಗೆ ಹಾಗೂ ಇತರೇ ರಾಜ್ಯಗಳಲ್ಲಿ ವಿಸ್ತರಿಸುವ ಅನುಮಾನವಿದೆ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ವಹಿಸಿದ್ದರು ಕೂಡ ನಿಷ್ಪಕ್ಷಪಾತ ತನಿಖೆ ನಡೆಸಿ ಪಿಸಿ ಮತ್ತು ಪಿಎನ್’ಡಿಟಿ (PC & PNDT) ಕಾಯ್ದೆ ಅನುಸಾರ ಕಾನೂನು ಕ್ರಮ ಕೈಗೊಳ್ಳಬೇಕು.
- ಜಿಲ್ಲೆಯಲ್ಲಿ ಪದೇ ಪದೇ PC&PNDT ಕಾಯ್ದೆಯನ್ನು ಉಲ್ಲಂಘನೆ ಮಾಡುವ ವೈದ್ಯರ ಮತ್ತು ಸೆಂಟರ್‌ಗಳ ಲೈಸನ್ಸ್ ಶಾಶ್ವತವಾಗಿ ರದ್ದು ಪಡಿಸಬೇಕು.
- ಜಿಲ್ಲಾ PC & PNDT ಖಾತೆಯಲ್ಲಿ ಸಾಕಷ್ಟು ಹಣವಿದ್ದರು ಇಲ್ಲಿಯವರೆಗು ಸಮುದಾಯಕ್ಕೆ ಮತ್ತು ವೈದ್ಯರಿಗೆ ಹೆಣ್ಣು ಮಕ್ಕಳ ಮೌಲ್ಯ ಮತ್ತು ಮಹತ್ವ ಸಾರುವ ಹಾಗೂ ಕಾನೂನು ಸಮರ್ಪಕ ಅನುಷ್ಠಾನದ ಬಗ್ಗೆ ಯಾವುದೇ ಜಾಗೃತಿ ಕಾರ್ಯಕ್ರಮಗಳು ಆಂದೋಲನ ಕಾರ್ಯಕ್ರಮಗಳನ್ನು ಆಯೋಜಿಸಿರುವುದಿಲ್ಲ ಇನ್ನು ಮುಂದೆಯಾದರೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸಬೇಕು.
- ಸಾರ್ವಜನಿಕ ಸ್ಥಳಗಳಲ್ಲಿ PC&PNDT ಕಾಯ್ದೆ ಪ್ರಕಾರ ಶಿಕ್ಷೆ ಮತ್ತು ಹೆಣ್ಣು ಮಕ್ಕಳ ಮೌಲ್ಯ ಮತ್ತು ಮಹತ್ವ ಕುರಿತ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಬೇಕು.
ಹಾಡ್ಯ ಪ್ರಕರಣದಲ್ಲಿ ಮಂಡ್ಯ ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷ ಕಂಡುಬಂದಿರುವ ಕಾರಣ ಸಂಬಂಧ ಪಟ್ಟಿ ಅಧಿಕಾರಿಳನ್ನು ಅಮಾನತುಗೊಳಿಸಬೇಕು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. - ಜಿಲ್ಲೆಯಲ್ಲಿ PC & PNDT ಅಡಿ ದಾಖಲಾಗಿರುವ ಪ್ರಕರಣಗಳ ಅಂಶದಲ್ಲಿ ವಿಚಾರಣೆಯೂ ವಿಳಂಬವಾಗಿದ್ದು ಇದನ್ನು ಸರಿಪಡಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗವಂತೆ ನ್ಯಾಯಾಲಯಗಳ ಹಂತದಲ್ಲೂ ಕಾರ್ಯ ಚುರುಕುಗೊಳ್ಳಬೇಕು.
- ಜಿಲ್ಲಾ ಮಟ್ಟದಲ್ಲಿ ಇರುವ ಮೂರು ಹಂತದ ಸಮಿತಿಯ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು.
- 900 ಕ್ಕಿಂತ ಹೆಚ್ಚು ಭ್ರೂಣಹತ್ಯೆಯಲ್ಲಿ ಭಾಗಿಯಾಗಿರುವ ಕುಟುಂಬದವರು ಮತ್ತು ಸಂಬಂಧಿಕರು ಹಾಗೂ ಏಜೆಂಟ್ ಗಳನ್ನು ಪತ್ತೆ ಹಚ್ಚಿ ಅವರ ಮೇಲೂ ಕೂಡ ಕಾನೂನು ಕ್ರಮ ಕೈಗೊಳ್ಳಬೇಕು.
- ಜಿಲ್ಲಾ ಮಟ್ಟದಲ್ಲಿ ಸ್ವಯಂಸೇವಾ ಸಂಸ್ಥೆಯ ಹಾಗೂ ಪ್ರಗತಿ ಪರ ಸಂಘಟನೆಗಳ ಮುಖಂಡರ ಸಭೆ ಕರೆದು ಸಲಹೆ ಪಡೆಯಬೇಕು.
- ವಿಳಂಬ ನೋಂದಣಿ ಮಾಡಿಸುವ ಗರ್ಭಿಣಿಯರ ಮೇಲೆ ನಿಗಾ ಇಟ್ಟು ಅವರಿಗೆ ಅರಿವು ಮೂಡಿಸಬೇಕು, ಜಿಲ್ಲಾ ಮಟ್ಟದಲ್ಲಿ ಹೆಣ್ಣು ಭ್ರೂಣ ಹತ್ಯೆ ಕುರಿತು ದೂರು ನೀಡಲು ಜಿಲ್ಲಾ ಸಹಾಯವಾಣಿ ಕೇಂದ್ರ ತೆರೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.