ಕಾರಂಜಾ ಜಲಾಶಯಕ್ಕಾಗಿ ಜಮೀನು ಕಳೆದುಕೊಂಡ ಸಂತ್ರಸ್ತ ರೈತರಿಗೆ ವೈಜ್ಞಾನಿಕ ಪರಿಹಾರಕ್ಕೆ ಒತ್ತಾಯಿಸಿ 2018 ರಿಂದ ಹೋರಾಟ ನಡೆಸಲಾಗುತ್ತಿದ್ದು, ಕಳೆದ 525 ದಿನಗಳಿಂದ ಬೀದರ್ ನಗರದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆದರೂ ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆಯವರ ಕಚೇರಿ ಎದುರು ನಡೆಸಿದ ಸಾಂಕೇತಿಕ ಧರಣಿ ಉದ್ದೇಶಿಸಿ ಮಾತನಾಡಿ, “ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಾರಂಜಾ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ನೀಡುವ ಕುರಿತು ಸದನದಲ್ಲಿ ಚರ್ಚಿಸಿ ಸೂಕ್ತ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಒತ್ತಡ ತರುವಂತೆ ಜಿಲ್ಲೆಯ ಎಲ್ಲ ಶಾಸಕರು, ಸಚಿವರ ಕಚೇರಿಯ ಆವರಣದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ” ಎಂದರು.
“ಡಿ.2 ರಂದು ಮುಖ್ಯಮಂತ್ರಿಗಳು ಬೀದರ್ ಜಿಲ್ಲೆಗೆ ಆಗಮಿಸಿದ ವೇಳೆ ಕಾರಂಜಾ ಸಂತ್ರಸ್ತ ರೈತರ ಬೇಡಿಕೆ ಕುರಿತು ತಿಳಿಸಿದರು. ಕಾರಂಜಾ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿದ ಸಿಎಂ, ನಿಯೋಗವನ್ನು ಬೆಂಗಳೂರಿಗೆ ಕರೆಸಿ ಸಮಸ್ಯೆಗಳ ಕುರಿತು ಚರ್ಚಿಸಿ ಬಗೆಹರಿಸಲಾಗುವುದು ಎಂದು ನಿಯೋಗಕ್ಕೆ ಮೌಖಿಕ ಭರವಸೆ ನೀಡಿದ್ದರು. ಅದನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಬೇಕೆಂದು” ಸಮಿತಿಯ ನಿರ್ದೇಶಕ ವೀರಭ್ರದ್ರಪ್ಪ ಉಪ್ಪಿನ ಸರಕಾರಕ್ಕೆ ಒತ್ತಾಯಿಸಿದರು.
ರೈತ ರಾಜಪ್ಪ ಕಮಾಲಾಪುರೆ ಮಾತನಾಡಿ, “ಕಾರಂಜಾ ಜಲಾಶಯದಲ್ಲಿ ಜಮೀನು ಕಳೆದುಕೊಂಡು ನೂರಾರು ಹಿರಿಯರು, ವೃದ್ಧರು, ಹಾಗೂ ಮಹಿಳಾ ಸಂತ್ರಸ್ತರು ಒಂದುವರೆ ವರ್ಷದಿಂದ ನಗರದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರಕಾರವಾಗಲಿ, ಜನಪ್ರತಿನಿಧಿಗಳಾಗಲಿ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಸ ರೊಟ್ಟಿಯನು ಹೆಂಚಿಗೆ ಹಾಕಿದ ಮಿಜೋ ಮತದಾರರು
ಈ ಸಂದರ್ಭದಲ್ಲಿ ಸಂತಸ್ತ ರೈತರಾದ ಪ್ರಭಾವತಿ, ಕಮಲಾಬಾಯಿ, ವಿದ್ಯಾವತಿ, ಲಕ್ಷ್ಮಿ ಕೌದಿ, ಸಂಗಮ್ಮ, ಚಂಪಾವತಿ, ಚಂದ್ರಮ್ಮ, ಹೇಮಾವತಿ, ರುಕ್ಮಿಣಿ, ಭಾಗಮ್ಮ, ಲಲಿತಾಬಾಯಿ, ರಾಚಮ್ಮ, ತೇಜಮ್ಮ, ಕಾಂತಮ್ಮ, ಶಂಕ್ರಪ್ಪ, ಮಹೇಶ್, ಈಶ್ವರಯ್ಯ ಸ್ವಾಮಿ, ಶಬ್ಬೀರ್ ಮಿಯ, ಪ್ರೇಮದಾಸ, ಯೂಸುಫ್, ರಾಮಕೃಷ್ಣ ಜಮಾದಾರ್, ಮೋಹನರಾವ್ ಬಿರಾದಾರ್, ಮಾದಪ್ಪ ಕೌದಿ, ಲೋಕೇಶ್ ಕನೆರಿ ಮುಂತಾದವರು ಭಾಗವಹಿಸಿದ್ದರು.