- ಇಬ್ಬರು ಮಹಾನುಭಾವರಿಂದ ಕರ್ನಾಟಕದಲ್ಲಿ ಬಿಜೆಪಿಗೆ ಈ ಪರಿಸ್ಥಿತಿ ಬಂದಿದೆ
- ವಿಪಕ್ಷ ಉಪನಾಯಕನಿಗೆ ಯಾವ ಅಧಿಕಾರ ಇದೆ: ಬಸನಗೌಡ ಪಾಟೀಲ ಯತ್ನಾಳ
ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಕೆಲ ಬಿಜೆಪಿ ಶಾಸಕರು ದೆಹಲಿ ವರಿಷ್ಠರನ್ನು ಭೇಟಿಯಾಗಲು ಸಜ್ಜಾಗಿದ್ದಾರೆ.
ಸ್ವಪಕ್ಷಕ್ಕೆ ವಿಪಕ್ಷದವರಂತೆ ನಡೆದುಕೊಳ್ಳುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಸರು ಈ ಪಟ್ಟಿಯಲ್ಲಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಪ್ರತಿಕ್ರಿಯಿಸಿದ ಯತ್ನಾಳ್, “ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ. ಆದರೆ, ಉಚಿತ ಮಾತ್ರ ಅಲ್ಲ, ಹಣ ಕೊಟ್ಟು ಟಿಕೆಟ್ ಪಡೆದು ಹೋಗಬೇಕು” ಎಂದು ತಿಳಿಸಿದರು.
“ದೆಹಲಿಗೆ ನಾನಾಗಿಯೇ ಹೋಗಬೇಕು ಎಂದುಕೊಂಡಿಲ್ಲ. ಕರೆ ಬಂದ ಮೇಲೆ ಹೋಗುತ್ತೇನೆ. ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರಿಗೆ ಹೇಳಿರಬಹುದು. ಇಬ್ಬರು ಮಹಾನುಭಾವರಿಂದ ಕರ್ನಾಟಕದಲ್ಲಿ ಈ ಪರಿಸ್ಥಿತಿ ಬಂದಿದೆ. ದೆಹಲಿಯ ಒಬ್ಬರು, ಕರ್ನಾಟಕ ಒಬ್ಬರು ಇದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ವಿಪಕ್ಷ ಉಪನಾಯಕನಾಗಿ ಅರವಿಂದ ಬೆಲ್ಲದ ಆಯ್ಕೆ ವಿಚಾರದ ಬಗ್ಗೆ ಮಾತನಾಡಿ, “ವಿಧಾನಸಭೆ ವಿಪಕ್ಷ ಉಪನಾಯಕನಿಗೆ ಯಾವ ಅಧಿಕಾರ ಇದೆ? ಕೊಡಬೇಕೆಂದು ಕೊಡುತ್ತಿರಬೇಕು ಅಷ್ಟೇ” ಎಂದರು.
ಸಿದ್ಧಗಂಗಾ ಮಠದಲ್ಲಿ ಗುರುಭವನ ಉದ್ಘಾಟನಾ ಕಾರ್ಯಕ್ರಮ ಮುಗಿದ ಬಳಿಕ ಮಾಜಿ ಸಚಿವ ವಿ ಸೋಮಣ್ಣ ಜೊತೆ ಕೆಲ ಅಸಮಾಧಾನಿತ ಶಾಸಕರು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ, ವಿ ಸೋಮಣ್ಣ, ಅರವಿಂದ ಬೆಲ್ಲದ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜತೆ ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ.