ಗರ್ಭಾವಸ್ಥೆಯಲ್ಲಿ ಪೌಷ್ಠಿಕತೆ ಮತ್ತು ದೈಹಿಕ, ಸುಸ್ಥಿರತೆಯ ಜ್ಞಾನ ಪ್ರತಿಯೊಬ್ಬರ ಮನೆಯಿಂದಲೇ ಪ್ರಾರಂಭವಾಗಬೇಕು. ಸಮಾಜದಲ್ಲಿ ಮಹಿಳೆಯು ಶೋಷಣೆಗೆ ಒಳಗಾಗದಂತೆ ಸದೃಢಳಾಗಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಜಿಲ್ಲಾ ಪಂಚಾಯತ ಆವರಣದಲ್ಲಿ ಸಂಜೀವಿನಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಸಹಯೋಗದಲ್ಲಿ ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆಯನ್ನು ತೋರುವುದರ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕರಾಗಿ ಸಬಲರಾಗಬೇಕು, ಒಬ್ಬರಿಗೊಬ್ಬರು ಸಹಾಯಕ್ಕೆ ನಿಲ್ಲಬೇಕು. ಎಲ್ಲಾ ರೀತಿಯ ದೌರ್ಜನ್ಯವನ್ನು ತಡೆದು, ದೌರ್ಜನ್ಯ ಮುಕ್ತ ಜಿಲ್ಲೆಯನ್ನಾಗಿಸೋಣ ಎಂದು ಅವರು ಹೇಳಿದರು.
ನಿಸರ್ಗದಲ್ಲಿ ಮಾನವರನ್ನು ಸಮಾನವಾಗಿಯೇ ಸೃಷ್ಟಿಸಲಾಗಿದೆ. ಆದರೆ, ಮಾನವ ಸಮಾಜದಲ್ಲಿ ಮಾನವರೆಲ್ಲರೂ ಸಮಾನರಾಗಿಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಅಸಮಾನತೆ ಕಂಡು ಬರುತ್ತದೆ.
ಮಹಿಳೆಯರು ದೌರ್ಜನ್ಯದ ವಿರುದ್ಧ, ಬಾಲ್ಯವಿವಾಹದ ವಿರುದ್ಧ, ಅಪೌಷ್ಟೀಕತೆ, ಲಿಂಗ ತಾರತಮ್ಯವನ್ನು ಧ್ವನಿವೆತ್ತುವುದರ ಮೂಲಕ ತಡೆಗಟ್ಟಬೇಕು. ಮಹಿಳೆಯರಿಗೆ ಸಮಾನವೇತನ ನೀಡುವುದರ ಮೂಲಕ ಲಿಂಗತ್ವ ಸಮಾನತೆಯನ್ನು ಹಣಕಾಸಿನ ವ್ಯವಹಾರದಲ್ಲಿಯೂ ಕೂಡ ಪಾಲಿಸಬೇಕೆಂದು ತಿಳಿಸಿದರು.
ಇದೇ ವೇಳೆ ಮತದಾರರ ನೋಂದಣಿ ಅಭಿಯಾನ ಜಾಥಾಕ್ಕೆ ಚಾಲನೆ ನೀಡಿದ ಅವರು, ಗ್ರಾಮೀಣ ಪ್ರದೇಶದ ನಾಗರಿಕರು ಹಾಗೂ ಯುವಕರು ಮತದಾನ ಮಾಡುವಂತೆ ಪ್ರೇರೆಪಿಸಬೇಕು, ಮತದಾರರ ನೊಂದಣಿಯನ್ನು ಚುನಾವಣಾ ಅಧಿಕಾರಿಗಳ ಸಹಯೋಗದೊಂದಿಗೆ ಎಲ್ಲ ಸಂಜೀವಿನಿ ಸಿಬ್ಬಂದಿಗಳು ಮನೆಮನೆಗೆ ತಲುಪಿ ಯುವ ಮತದಾರರನ್ನು ಜಾಗೃತಿಗೊಳಿಸಬೇಕೆಂದು ಸಿಇಒ ಸ್ವರೂಪ ಟಿ.ಕೆ ಅವರು ಹೇಳಿದರು.
ಮತದಾರರ ಪಟ್ಟಿ ಪರೀಕ್ಷಣೆಗಾಗಿ ಆಯಾ ಬೂತ್ ಮಟ್ಟಗಳಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದು, ತಪ್ಪದೇ ಸಾರ್ವಜನಿಕರು ಹಾಗೂ ಯುವ ಮತದಾರರು ಇದನ್ನು ಸದುಪಯೋಗ ಪಡೆದುಕೊಳ್ಳಿ. ಮತದಾನದ ಹಕ್ಕು ಎಷ್ಟು ಮಹತ್ವ ಎಂದು ತಿಳಿಯಬೇಕು, 18 ವರ್ಷ ಪೂರೈಸಿದ ಪ್ರತಿಯೊಬ್ಬರು ಸಹ ಹೆಸರು ನೋಂದಣಿ ಮಾಡಿಕೊಳ್ಳಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದನವು ಬಹಳ ಜವಾಬ್ದಾರಿಯುತ ಕಾರ್ಯವಾಗಿದೆ, ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಅವರು ಹೇಳಿದರು. ಯಾವುದೇ ಆಶೆ, ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಬೇಕು, ಸದೃಢ ಭಾರತದ ನಿರ್ಮಾಣಕ್ಕಾಗಿ ಎಲ್ಲರೂ ಕೆಲಸ ಮಾಡಬೇಕೆಂದು ತಿಳಿಸಿದರು.
ಧಾರವಾಡ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಅವರು ಮಾತನಾಡಿ, ಮತದಾರರ ನೋಂದಣಿಗೆ ಬೇಕಾಗಿರುವ ಅವಶ್ಯ ದಾಖಲೆಗಳಾದ ಆಧಾರ್ ಕಾರ್ಡ್, ಭಾವಚಿತ್ರ ಮತ್ತು ಪಡಿತರ ಚೀಟಿಯ ನಕಲು ಪ್ರತಿಗಳನ್ನು ಸಲ್ಲಿಸುವುದರ ಮೂಲಕ ನೋಂದಣಿ ಮಾಡಿಸಲು ತಿಳಿಸಿದರು. ನಮೂನೆ-6 ಹೊಸ ಮತದಾರರ ನೋಂದಣಿಗಾಗಿ, ನಮೂನೆ-7 ಮತದಾರರ ವಿವರಗಳ ತಿದ್ದುಪಡಿಗಾಗಿ ಮತ್ತು ನಮೂನೆ-8 ಮತದಾರರ ಪಟ್ಟಿಯಿಂದ ಹೊರಗುಳಿಯಲು ಇರುವಂತಹ ನಿಯಮಗಳನ್ನು ತಿಳಿಸಿದರು.
ದಿನಾಂಕ 03.02.2023 ಹಾಗೂ 02.03.2023 ದಿನಗಳಂದು ನೂತನ ಮತದಾರರ ಸೇರ್ಪಡೆ ಅಭಿಯಾನದ ಅಂಗವಾಗಿ ಎಲ್ಲಾ ಭೂತಮಟ್ಟದಲ್ಲಿ ಬಿಎಲ್ಒ ಗಳಿಂದ ವಿಶೇಷ ಹೆಸರು ಸೇರ್ಪಡೆ ಮಾಡಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಭರತ ಚಂದನಕರ ಉಪಸ್ಥಿತರಿದ್ದರು. ಕಿರು ಬೀದಿನಾಟಕದ ಮೂಲಕ ಜಾಗೃತಿ ಮೂಡಿಸಿದರು.