ಎಂಎಲ್‌ಸಿ ಸಿ.ಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರ ಮೃತದೇಹ ಮಂಗಳವಾರ ಚಾಮರಾಜನಗರ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಅವರ ಸಾವಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ, ಮಹದೇವಯ್ಯ ಅವರ ಪರಿಚಿತರೇ ಅವರನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ.
ಮಹದೇವಯ್ಯ ಅವರನ್ನು ಪರಿಚಿತರೇ ಅಪಹರಿಸಿ ಕೊಂದಿರುಬಹುದು ಎಂಬ ಅನುಮಾನಗಳು ದಟ್ಟವಾಗಿವೆ. ಅದಕ್ಕೆ ಪೂರಕವೆಂಬಂತೆ, ಮಹದೇವಯ್ಯ ನಾಪತ್ತೆಯಾಗಿದ್ದ ಚನ್ನಪಟ್ಟಣದ ತೋಟದ ಮನೆಯಲ್ಲಿ ಪರಿಶೀಲನೆ ನಡೆಸಿದಾಗ, ಅಪಹರಣದ ವೇಳೆ ಮಹದೇವಯ್ಯ ಪ್ರತಿರೋಧ ವ್ಯಕ್ತಪಡಿಸಿಲ್ಲ ಎಂಬುದು ಕಂಡುಬಂದಿದೆ ಎನ್ನಲಾಗಿದೆ.
ಅಲ್ಲದೆ, ತೋಟದ ಮನೆಯ ಕಪಾಟಿನಲ್ಲಿದ್ದ ಹಲವಾರು ದಾಖಲೆ ಪತ್ರಗಳು ಹಾಗೂ ನಗದು ಕೂಡ ಕಾಣೆಯಾಗಿವೆ. ಹೀಗಾಗಿ, ಮಹದೇವಯ್ಯ ಅವರನ್ನು ಪರಿಚಿತರೇ ಅಪಹರಿಸಿ ಕೊಂದಿದ್ದಾರೆ ಎಂಬ ಗುಮಾನಿ ಹೆಚ್ಚಾಗಿದೆ.
ಪೊಲೀಸರು ಮಹದೇವಯ್ಯ ಅವರ ಕುಟುಂಬಸ್ಥರನ್ನು ವಿಚಾರಣೆ ಒಳಪಡಿಸಿ, ಹಲವಾರು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.