ಭದ್ರಾ ನೀರಿನ ತಾಪತ್ರಯದ ನಡುವೆಯೂ ರೈತರು ಬಹಳ ಕಷ್ಟ ಪಟ್ಟು ಭತ್ತ ಬೆಳೆದಿದ್ದರೂ ಭತ್ತದ ಖರೀದಿದಾರರ ಬೆಲೆ ನಿಯಂತ್ರಣ, ಕುತಂತ್ರಗಳಿಂದ ರೈತರು ಸಾಕಷ್ಟು ರೋಸಿ ಹೋಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ರೈತ ಒಕ್ಕೂಟದ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಎಪಿಎಂಸಿ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳು ವ್ಯಾಪಾರಸ್ಥರ, ಖರೀದಿದಾರರ, ದಲಾಲರ ಮತ್ತು ರೈತರ ಸಭೆ ಕರೆದು ಕೂಲಂಕಷವಾಗಿ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸೂಕ್ತ ಪಾರದರ್ಶಕ ಮತ್ತು ನ್ಯಾಯಯುತ ವ್ಯಾಪಾರ ವಹಿವಾಟು ನಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.
ಭತ್ತ ಖರೀದಿ ಮಾಡಿದ ಖರೀದಿದಾರರು ವೇಮೆಂಟ್, ಪೇಮೆಂಟ್ ಅಂತ ಕಂಡಿಷನ್ ಮಾಡಿರುವುದಲ್ಲದೇ, ವಾರಗಟ್ಟಲೆ ಹಣ ನೀಡದೆ ಸತಾಯಿಸುತ್ತಾರೆ. ಇದು ಅಕ್ಷಮ್ಯ ಅಪರಾಧ. ಖರೀದಿದಾರರ ಇಂತಹ ಕುತಂತ್ರ ಧೋರಣೆ ಸಂಪೂರ್ಣ ನಿಲ್ಲಬೇಕು. ವೇಮೆಂಟ್, ಪೇಮೆಂಟ್ ಪದ್ಧತಿ ಬದಲು ಲೋಡಿಂಗ್, ಪೇಮೆಂಟ್ ಅಥವಾ ಸ್ಪಾಟ್ ಪೇಮೆಂಟ್ ಪದ್ಧತಿ ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಲೋಡಿಂಗ್, ಪೇಮೆಂಟ್ ಅಥವಾ ಸ್ಪಾಟ್ ಪೇಮೆಂಟ್ ಪದ್ಧತಿ ಅಂದರೆ ಖರೀದಿಸಿದ ಭತ್ತ ಲೋಡ್ ಮಾಡಿದ ತಕ್ಷಣ ಚೀಲ ಒಂದಕ್ಕೆ 2 ಸಾವಿರ ರೂಪಾಯಿಯಂತೆ ಎಷ್ಟು ಚೀಲ ತುಂಬಿಸಲಾಗಿರುತ್ತದೆಯೋ ಅಷ್ಟು ಚೀಲಗಳಿಗೆ ಲೆಕ್ಕ ಹಾಕಿ ಸ್ಥಳದಲ್ಲೇ ಹಣ ಕೊಡಬೇಕು. ನಂತರ ಲೋಡ್ ಲಾರಿಯನ್ನು ಮುಂದೆ ಹೋಗಲು ಬಿಡ ಬೇಕು. ಇನ್ನುಳಿದ ಹಣವನ್ನು ತೂಕ ವಾದ ನಂತರ ಲೆಕ್ಕ ಹಾಕಿ ಕೊಡಬೇಕು ಎಂದರು. ಖಾಲಿ ಚೀಲ ತೂಕಕ್ಕೆ 1ಕೆಜಿ ಶೂಟ್ ಜೊತೆಗೆ ಇನ್ನೊಂದು ಕೆಜಿ ಹೆಚ್ಚುವರಿಯಾಗಿ ಪಡೆಯುತ್ತಾರೆ. ಇದು ಸರಿಯಲ್ಲ. ಮೋಸ ಮಾಡಲಾಗುತ್ತಿದೆ. ಕಾರಣ ಚೀಲದ ಒಟ್ಟು ತೂಕದಲ್ಲಿ ಕಡಿತಗೊಳಿಸಿ ಲೆಕ್ಕ ಹಾಕಿ ಮೆಂಟ್ ಮಾಡಬೇಕು. ಹಮಾಲರ ಕೂಲಿ ಸಂಪೂರ್ಣ ಖರೀದಿದಾರರೆ ನೀಡಬೇಕು. ರೈತರ ಹಣದಲ್ಲಿ ಕಡಿತಗೊಳಿಸಬಾರದು ಎಂದು ಆಗ್ರಹಿಸಿದರು.
ಹಮಾಲರು ಶ್ಯಾಂಪಲ್ ಕಾಳು ಕೊಡಬೇಕು ಎಂದು ರೈತರನ್ನು ಒತ್ತಾಯಿಸಿ ಪೀಡಿಸಬಾರದು. ರೈತರು ಸಹ ಅವರ ಒತ್ತಾಯಕ್ಕೆ ಮಣಿದು ಒಂದು ಕಾಳನ್ನು ಸಹ ಕೊಡಬಾರದು. ಡಿಸೈಂಟ್ ಪದ್ಧತಿ ಕಡ್ಡಾಯವಾಗಿ ರದ್ದಾಗಬೇಕು. ಭತ್ತದ ಬೆಲೆ ಹೆಚ್ಚಾಗುತ್ತಿರುವುದರಿಂದ ರೈತರು ಖರೀದಿದಾರರ ಕುತಂತ್ರಗಳನ್ನು ಸಮರ್ಥವಾಗಿ ಎದುರಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೈತ ಒಕ್ಕೂಟದ ಮುಖಂಡರಾದ ಕೊಳೇನಹಳ್ಳಿ ಬಿ.ಎಂ.ಸತೀಶ್, ಮಾಜಿ ಮೇಯರ್ ಎಚ್.ಎನ್. ಗುರುನಾಥ್, ವಾಸನ ಬಸವರಾಜ, ಅಣಬೇರು ಶಿವ ಪ್ರಕಾಶ್ ಇತರರು ಇದ್ದರು.