ಗಾಯ ಗಾರುಡಿ | ನಾನು ಕ್ಲಾಸಿಗೆ ಹೋಗದಿದ್ದರೆ ಕೆಲವು ಅಧ್ಯಾಪಕರಿಗೆ ಖುಷಿಯಾಗುತ್ತಿತ್ತು!

Date:

Advertisements


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)

ಅವೈಜ್ಞಾನಿಕ ಶುಲ್ಕ ಏರಿಕೆ ಖಂಡಿಸಿ ಕೊಂಗಾಡಿಯಪ್ಪ ಕಾಲೇಜು ಗೇಟು ಮುಚ್ಚಿಸಿ ಧಿಕ್ಕಾರ ಕೂಗಿದೆವು. ನಾನಿದರ ಮುಂದಾಳತ್ವ ವಹಿಸಿದ್ದನ್ನು ಕಂಡ ಪ್ರಿನ್ಸಿಪಾಲರು, “ದ್ರೋಹಿ… ನಿನ್ನ ಫೀಝು ಕಟ್ಟಿದ್ದೇನೆ; ನೀನು ನೋಡಿದ್ರೆ ಗಲಾಟೆ ಮಾಡ್ತಿದಿಯಾ?” ಅಂದರು. ಆಗ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಲೋಕೇಶ್ವರ್, “ಭವಿಷ್ಯ ಹಾಳು ಮಾಡ್ಕೊತೀಯ,” ಅಂತ ಬುದ್ಧಿ ಹೇಳಿದರು. ಆದರೆ…

ಕೊಂಗಾಡಿಯಪ್ಪ ಕಾಲೇಜಿನಲ್ಲಿ ಬಿಎ ಓದಲು ಸೇರಿದ್ದಕ್ಕೆ ಮುಖ್ಯ ಕಾರಣ – ಅಲ್ಲಿ ಸರ್ಕಾರಿ ಕಾಲೇಜಿನಷ್ಟೇ ಶುಲ್ಕ ಇದ್ದುದು; ಮತ್ತು ಆಗ ಡಿಗ್ರಿ ಓದಲು ಸರ್ಕಾರಿ ಕಾಲೇಜು ಬಿಟ್ಟರೆ ಇದೊಂದೇ ಕಾಲೇಜು ಇದ್ದದ್ದು. ಹವಾಯಿ ಚಪ್ಪಲಿ ಹಾಕಿಕೊಂಡು ಓಡಾಡುತ್ತಿದ್ದವನಿಗೆ ಕಾಲೇಜು ಸೇರುವ ದಿನ ನಮ್ಮಪ್ಪ ದೊಡ್ಡಬಳ್ಳಾಪುರ ಬಸ್ಟಾಂಡಿನಲ್ಲಿ ನೂರಾ ಮೂವತ್ತು ರೂಪಾಯಿ ಬೆಲೆ ಬಾಳುವ, ಆ ಕಾಲಕ್ಕೆ ಟ್ರೆಂಡ್ ಆಗಿದ್ದ ಚಪ್ಪಲಿ ಕೊಡಿಸಿ, ಕಾಲೇಜಿಗೆ ಕರೆದುಕೊಂಡು ಬಂದು ಸೇರಿಸಿದ್ದರು. ನನ್ನ ವಿದ್ಯಾಭ್ಯಾಸಕ್ಕೆಂದು ಅದೇ ಕೊನೆಯ ಸಲ ಅಪ್ಪ ನನ್ನ ಜೊತೆ ಬಂದಿದ್ದು. ಆ ನಂತರ ನಾನೂ ನಮ್ಮಪ್ಪನನ್ನು ಒಂದು ಕಾಸೂ ಕೇಳಲಿಲ್ಲ. ಅವರಿಗೂ ನಿರಾಳವಾಗಿತ್ತು. ನಮ್ಮಪ್ಪನನ್ನು ಹೆತ್ತು ಮಕ್ಕಳಿಲ್ಲದ ತನ್ನಕ್ಕನಿಗೆ ಸಾಕಲು ಕೊಟ್ಟು ಬೆಂಗಳೂರು ಸೇರಿದ್ದ ನನ್ನಜ್ಜಿ ಚೆನ್ನಮ್ಮ ಸಾಯುವ ಗಳಿಗೆಯಲ್ಲಿ ಊರಿಗೆ ಬಂದರು. ನನ್ನೊಂದಿಗೆ ಆಗಾಗ ಊರಿಗೆ ಬರುತ್ತಿದ್ದ ನಂದಾ ಅಜ್ಜಿಯ ಮನಸ್ಸಿನಲ್ಲಿ ಉಳಿದುಬಿಟ್ಟಳು. “ಮದುವೆ ಅಂತ ಆದ್ರೆ ನಮ್ ಜಾತಿ ಹುಡುಗಿ ಬ್ಯಾಡ ಕಣಪ್ಪ; ಉತ್ತಮರ ಹುಡ್ಗಿನೇ ಮದ್ವೆ ಆಗು,” ಅನ್ನುತ್ತಿದ್ದ ಅಪ್ಪನ ಸಲಹೆಗೆ ಇಂಬು ನೀಡುವಂತೆ, ಅಜ್ಜಿಯ ಸಾವಾದಾಗ ನಂದಾ ಹಣ ಕೊಟ್ಟಳು. ಅಜ್ಜಿ ಸಾಯುವ ವಾರಕ್ಕೆ ಮೊದಲು, “ನಂದಮ್ಮನ್ನ ಕರ್ಕಂಡು ಬಾರೋ… ನೋಡ್ಬೇಕು,” ಅಂದಿತ್ತು.

ಅಷ್ಟರಲ್ಲಾಗಲೇ ನಾನು ಎಲ್ಲ ವಿಷಯಗಳಿಗೂ ನಂದಾಳನ್ನು ಆಶ್ರಯಿಸಿದ್ದೆ. ನಾನು ಎರಡನೇ ವರ್ಷದ ಬಿ.ಎ.ಗೆ ಬಂದಾಗ ನಂದಾ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಕಾಂ ಸೇರಿದಳು. ಆಗ ಕೊಂಗಾಡಿಯಪ್ಪ ಕಾಲೇಜಿನ ಆಡಳಿತ ಮಂಡಳಿ ಕಾಲೇಜು ಶುಲ್ಕವನ್ನು ಶೇಕಡ ಐವತ್ತಕ್ಕಿಂತ ಹೆಚ್ಚೇ ಏರಿಸಿತು. ಅಷ್ಟು ಫೀಝು ಕಟ್ಟಲು ಹಣವಿಲ್ಲದೆ ಪ್ರಾಂಶುಪಾಲರ ಚೇಂಬರಿನಲ್ಲಿ ಕೈಕಟ್ಟಿ ನಿಂತಿದ್ದ ನನ್ನನ್ನು ಮೇಷ್ಟ್ರು ಎಂ ಜಿ ಚಂದ್ರಶೇಖರಯ್ಯ ವಿಚಾರಿಸಿ ಹಣ ಕಟ್ಟಲು ಮುಂದಾದರು. ಅದನ್ನು ಕಂಡ ಪ್ರಾಂಶುಪಾಲ ಬಿ ಆರ್ ಶ್ರೀನಿವಾಸ್ ಅವರು ತಾವೇ ಫೀಝು ಕಟ್ಟಿ, “ಚೆನ್ನಾಗಿ ಓದು,” ಎಂದರು. ಆದರೆ, ನನ್ನ ಹಾಗೆ ಕಾಲೇಜು ಶುಲ್ಕ ಕಟ್ಟಲು ಸಾಧ್ಯವಾಗದ ವಿದ್ಯಾರ್ಥಿಗಳು ಆತಂಕಗೊಂಡರು. ಆಗ ‘ಜನಧ್ವನಿ ಯುವ ವೇದಿಕೆ’ಯಿಂದ ಕಾಲೇಜು ಆಡಳಿತ ಮಂಡಳಿ ವಿರುದ್ಧ ಶುಲ್ಕ ಇಳಿಸುವಂತೆ ಪ್ರತಿಭಟನೆ ಆಯೋಜಿಸಿದೆವು. ಸ್ಥಳೀಯ ದಲಿತ ಸಂಘಟನೆಗಳನ್ನು ಸಂಘಟಿಸಿ ನೂರಾರು ವಿದ್ಯಾರ್ಥಿಗಳನ್ನು ಸೇರಿಸಿ ಕಾಲೇಜು ಗೇಟು ಮುಚ್ಚಿಸಿ ಧಿಕ್ಕಾರ ಕೂಗಿದೆವು. ನಾನು ಪ್ರತಿಭಟನೆ ಮುಂದಾಳತ್ವ ವಹಿಸಿದ್ದನ್ನು ಕಂಡ ಪ್ರಿನ್ಸಿಪಾಲರು, “ದ್ರೋಹಿ… ನಿನ್ನ ಫೀಝು ಕಟ್ಟಿದ್ದೇನೆ; ನೀನು ನೋಡಿದ್ರೆ ಹುಡುಗ್ರನ್ನ ಕಟ್ಟಿಕೊಂಡು ಗಲಾಟೆ ಮಾಡ್ತಿದಿಯಾ,” ಅಂದರು. ಆವತ್ತಿನಿಂದ ನನ್ನನ್ನು ಕಂಡರೆ ಕೋಪಗೊಳ್ಳುತ್ತಿದ್ದರು. ಈ ಪ್ರತಿಭಟನೆಗೆ ಹೆದರಿದ ಕಾಲೇಜು ಆಡಳಿತ ಮಂಡಳಿ, ಪೋಲೀಸರನ್ನು ಬಳಸಿಕೊಂಡು ನಮ್ಮನ್ನು ಹಣಿಯಲು ನೋಡಿತು. ಆಗ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಲೋಕೇಶ್ವರ್ ನನ್ನನ್ನು ಕರೆದು, “ಬಡತನದ ಕುಟುಂಬದಿಂದ ಬಂದಿದಿಯಾ… ನಿನ್ನ ಪಾಡಿಗೆ ನೀನು ಓದ್ಕೋ. ಹಿಂಗೆಲ್ಲಾ ಮುಂದೆ ನಿಂತು ಪ್ರತಿಭಟನೆ ಮಾಡಿದ್ರೆ ಭವಿಷ್ಯ ಹಾಳು ಮಾಡ್ಕೊತೀಯ,” ಅಂತ ಬುದ್ಧಿ ಹೇಳಿದರು. ನನ್ನೂರಿನ ಹೋಬಳಿಯಾಗಿದ್ದ ದೊಡ್ಡಬೆಲವಂಗಲ ಠಾಣೆಯ ಪೋಲೀಸರನ್ನು ನಮ್ಮ ಮನೆಗೆ ಕಳಿಸಿ, ಅಮ್ಮ-ಅಪ್ಪನನ್ನು ಹೆದರಿಸಲು ನೋಡಿದರು. ಪ್ರತಿಭಟನೆಗೆ ಸಿಕ್ಕಿದ ವಿದ್ಯಾರ್ಥಿ-ಸಂಘಟನೆಗಳ ಬೆಂಬಲ ನನ್ನನ್ನು ಹಿಂದಕ್ಕೆ ಸರಿಯಲು ಬಿಡಲಿಲ್ಲ. ಸಂಸ್ಥೆಯ ಕಾರ್ಯದರ್ಶಿ ಬಸವರಾಜಪ್ಪ ಅನಿವಾರ್ಯವಾಗಿ ಶುಲ್ಕ ಇಳಿಸಬೇಕಾಯಿತು. ನಮ್ಮ ಜೊತೆ ಬಂದಿದ್ದ ಕೆಲವು ಹೋರಾಟಗಾರರು ಪ್ರತಿಭಟನೆ ಸಂದರ್ಭದಲ್ಲಿ ಬಸವರಾಜಪ್ಪನವರ ವಿರುದ್ಧ ಕೆಟ್ಟ ಶಬ್ದಗಳನ್ನು ಬಳಸಿದ್ದಕ್ಕಾಗಿ ನಾವು ಬಹಿರಂಗವಾಗಿ ಕ್ಷಮೆ ಕೇಳಿದ್ದು ನಮ್ಮ ಅಧ್ಯಾಪಕರಿಗೆ ಖುಷಿಯಾದರೂ ಪ್ರಿನ್ಸಿಪಾಲರ ಕೋಪ ತಣ್ಣಗಾಗಲಿಲ್ಲ.

ಎಬಿವಿಪಿ ಮತ್ತು ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಒಂದಿಬ್ಬರು ವಿದ್ಯಾರ್ಥಿಗಳು, ‘ಆರ್ಯರು ಹೊರಗಿನವರಲ್ಲ’ ಎಂದು ಲೇಖನ ಬರೆದು ಕಾಲೇಜಿನ ನೋಟಿಸ್ ಬೋರ್ಡಿನಲ್ಲಿ ಹಾಕಲು ಮುಂದಾದಾಗ ನಾವು ಗಲಾಟೆ ಮಾಡಿ ತೆಗೆಸಿದೆವು. ಈ ವಿಷಯಕ್ಕೆ ಪ್ರಗತಿಪರ ಅಧ್ಯಾಪಕರಿಗೆ ನಮ್ಮ ಮೇಲೆ ಒಳಗೇ ಪ್ರೀತಿಯಿತ್ತು. ಅಲ್ಲಿವರೆಗೆ ಪ್ರೇಮ, ರೌಡಿಸಂ ಕಾರಣಕ್ಕೆ ಕುಖ್ಯಾತಿ ಗಳಿಸಿದ್ದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಸೈದ್ಧಾಂತಿಕ ಜಗಳಗಳಾಗಲು ಶುರುವಾದದ್ದು ಅವರಿಗೆ ಹಿಡಿಸಿತ್ತು. ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರಕ್ಕೆ ಮೂರು ಕಿಲೋಮೀಟರ್ ದೂರದಲ್ಲಿರುವ ಮೇಷ್ಟ್ರು ಮನೆ ಕ್ರಾಸ್ ಬಳಿ ಟೆಂಪೋದಲ್ಲಿ ಹಸು ಸಾಗಿಸುತ್ತಿದ್ದವರ ಮೇಲೆ ಹಲ್ಲೆಯಾಯಿತು. ಹಲ್ಲೆ ಮಾಡಿದವರಲ್ಲಿ ನಮ್ಮ ಕಾಲೇಜಿನ ಹುಡುಗರೂ ಇದ್ದರು. ಇದರ ವಿರುದ್ಧ ನಮ್ಮ ಪ್ರತಿಭಟನೆಗೆ ಹೆದರಿ ಆ ಹುಡುಗರು ಕಾಲೇಜು ಕಡೆ ಸುಳಿಯಲಿಲ್ಲ.

ತುಮಕೂರಿನ ಕಡೆಯಿಂದ ದೊಡ್ಡಬಳ್ಳಾಪುರ ಬಸ್ಟಾಂಡಿಗೆ ಬರುತ್ತಿದ್ದ ಬಸ್ಸುಗಳು ಟೋಲ್‌ಗೇಟ್ ಹಾದುಹೋಗಬೇಕಿತ್ತು. ಕೊಂಗಾಡಿಯಪ್ಪ ಕಾಲೇಜಿಗೆ ಆ ಕಡೆಯಿಂದ ಬರುವ ವಿದ್ಯಾರ್ಥಿಗಳು ಅಲ್ಲಿಳಿದು ಒಂದು ಕಿಲೋಮೀಟರ್ ನಡೆಯಬೇಕಿತ್ತು. ಮಳೆ ಬಂದರೆ ಕೆಸರುಗದ್ದೆ ಆಗುತ್ತಿದ್ದ ಆ ರಸ್ತೆಗೆ ಟಾರ್ ಹಾಕುವಂತೆ ದೊಡ್ಡ ಮೆರವಣಿಗೆ ಮಾಡಿದೆವು. ಟಾರ್ ಬಂತು. ಸರ್ಕಾರಿ ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ಇರಲಿಲ್ಲ; ಕಾಂಪೌಂಡ್ ಇಲ್ಲದೆ ಬಣಗುಡುತ್ತಿತ್ತು. ಮುನ್ನೂರು ವಿದ್ಯಾರ್ಥಿಗಳನ್ನು ರಸ್ತೆಗಿಳಿಸಿ, ಪ್ಲಕಾರ್ಡ್ ಹಿಡಿದು ಕಾಲೇಜಿನಿಂದ ಬಸ್ಟಾಂಡಿನವರೆಗೂ ಪ್ರತಿಭಟನಾ ಮೆರವಣಿಗೆ ಮಾಡಿದೆವು. ಈ ಪ್ರತಿಭಟನೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳೂ ಭಾಗವಹಿಸಿದ್ದು ವಿಶೇಷ. ಕಾಂಪೌಂಡ್, ಶೌಚಾಲಯ ಬಂದವು. ಆಗಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ದೊಡ್ಡಬಳ್ಳಾಪುರಕ್ಕೆ ಬಂದಾಗ, ಎಸ್ಸಿ-ಎಸ್ಟಿ ಹಾಸ್ಟೆಲ್ ಬೇಕೆಂದು ಮನವಿ ಪತ್ರ ಹಿಡಿದು ಪೋಲೀಸರನ್ನು ಬೇಧಿಸಿ ಒಳಗೆ ನುಗ್ಗಿದೆವು. ಹಾಸ್ಟೆಲ್ ಸ್ಯಾಂಕ್ಷನ್ ಆಯಿತು. ದೊಡ್ಡಬಳ್ಳಾಪುರದಿಂದ ದಾಬಸ್‍ಪೇಟೆ ನಡುವೆ ಇದ್ದ ಸಾವಿರಾರು ಮರಗಳನ್ನು ರಸ್ತೆ ಅಗಲೀಕರಣಕ್ಕೆಂದು ಕಡಿಯಲು ಮುಂದಾದರು. ಸೈಕಲ್ ಜಾಥಾ ಮಾಡಿ ಎಚ್ಚರಿಸಿದೆವು; ಮರಗಳು ಉಳಿದವು. ಅನಿವಾರ್ಯವಾಗಿ ಕಡಿಯಲೇಬೇಕಿದ್ದ ಮರಗಳ ಜಾಗದಲ್ಲಿ ಸಸಿ ನೆಡಲಾಯಿತು. ರೈತ ಸಂಘದೊಂದಿಗೆ ಸೇರಿ ಕೆಎಂಎಫ್ ಘಟಕಕ್ಕೆ ಮತ್ತು ಕೆಪಿಟಿಸಿಎಲ್ ಕಚೇರಿಗೆ ಮುತ್ತಿಗೆ ಹಾಕಿದಾಗ ಎಂ ಡಿ ನಂಜುಂಡಸ್ವಾಮಿ ಅವರನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ಅವರು ನಮ್ಮ ಹಾಡು ಕೇಳಿ ಖುಷಿಯಾದರು. ಯಶವಂತಪುರದಲ್ಲಿದ್ದ ಮಾನ್ಸಾಂಟೋ ಬೀಜ ಕಂಪನಿಗೆ ಮುತ್ತಿಗೆ ಹಾಕಲು ನೂರಾರು ರೈತ ಕಾರ್ಯಕರ್ತರ ಜೊತೆ ಅರದೇಶಹಳ್ಳಿಯ ಶಾಲೆಯೊಂದರಲ್ಲಿ ಉಳಿದುಕೊಂಡೆವು. ಸ್ಥಳೀಯರು ಚಿತ್ರಾನ್ನ ಮಾಡಿಕೊಟ್ಟರು. ಬೆಳಗಿನ ಜಾವ ಘೋಷಣೆ ಕೂಗುತ್ತ ಕಂಪನಿಗೆ ಮುತ್ತಿಗೆ ಹಾಕಬೇಕು ಅನ್ನುವುದನ್ನು ನಾವು ಸಣ್ಣವರು ಊಹಿಸಿಕೊಂಡೇ ಪುಳಕಗೊಂಡಿದ್ದೆವು. ಆದರೆ, ಅದು ಹೇಗೋ ಪೊಲೀಸರಿಗೆ ವಿಷಯ ಗೊತ್ತಾಗಿ, ‘ಆಪರೇಷನ್ ಫೇಲ್’ ಆದದ್ದು ತುಂಬಾ ಬೇಸರವಾಯಿತು. ಕೋಡಿಹಳ್ಳಿ ಚಂದ್ರಶೇಖರ್ ಹೆಸರು ಕೇಳಿದಾಗೆಲ್ಲ ಆ ದಿನ ಅವರು ಆ ಶಾಲೆಯ ನೆಲದ ಮೇಲೆ ಹಾಸಲು ಇಲ್ಲದಿದ್ದರೂ ಕುತ್ತಿಗೆಯಿಂದ ಹಸಿರು ಶಾಲು ತೆಗೆಯದೆ ಗೂಡರಿಸಿಕೊಂಡು ನನ್ನ ಪಕ್ಕದಲ್ಲೇ ಮಲಗಿದ್ದದ್ದು ನೆನಪಾಗುತ್ತದೆ. ಈಗವರಿಗೆ ಇದೆಲ್ಲ ನೆನಪಾಗುವುದಿಲ್ಲ ಅನ್ನಿಸುತ್ತದೆ.

ನನ್ನ ಕಾಲೇಜಿನ ಕೊನೆ ದಿನಗಳಲ್ಲಿ ಕಾಲೇಜಿಗೆ ಪ್ರವೇಶ ನಿಷೇಧಿಸಿದ್ದ ಪ್ರಿನ್ಸಿಪಾಲರಾದ ಬಿ ಆರ್ ಶ್ರೀನಿವಾಸ್ ಅವರು ಇತ್ತೀಚೆಗೆ ಸ್ನಾನದ ಮನೆಯಲ್ಲಿ ಜಾರಿ ಬಿದ್ದು ಪ್ರಾಣ ಬಿಟ್ಟರು. ಅತಿ ವೇಗವಾಗಿ, ಯಾರಿಗೂ ಅರ್ಥವಾಗದಂತೆ ಮಾತಾಡುತ್ತಿದ್ದ ಅವರು ವ್ಯಕ್ತಿಗತವಾಗಿ ಉತ್ತಮ ಮನುಷ್ಯ.

ನಾನು ಕಾಲೇಜಿನೊಳಗೆ ಕಲಿತದ್ದು ಕಮ್ಮಿ. ಊಟಕ್ಕಾಗಿ ಮಧ್ಯಾಹ್ನ ಕಾಲೇಜಿಗೆ ಹೋಗುತ್ತಿದ್ದವನು ಶನಿವಾರ ಎನ್‍ಎಸ್‍ಎಸ್ ಇಂದ ದೋಸೆ ಸಿಗುವ ಆಸೆಗೆ ತಪ್ಪಿಸುತ್ತಿರಲಿಲ್ಲ. ಎಂಜಿಸಿ ಕ್ಲಾಸಿಗೆ ಮಾತ್ರ ಮಿಸ್ ಮಾಡುತ್ತಿರಲಿಲ್ಲ. ಕೆಲವು ಅಧ್ಯಾಪಕರು ನಾನು ಕ್ಲಾಸಿಗೆ ಹೋಗದಿದ್ದರೆ ಖುಷಿಯಾಗಿರುತ್ತಿದ್ದರು. ನಾನು ಹೋಗದಿದ್ದರೆ ಅವರಿಗೆ ಯಾಕೆ ಖುಶಿಯಾಗುತ್ತಿತ್ತು ಅನ್ನುವುದನ್ನು ಮುಂದಿನ ಕಂತುಗಳಲ್ಲಿ ಬರೆಯುವೆ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹುಲಿಕುಂಟೆ ಮೂರ್ತಿ
ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯವರು. ಕನ್ನಡ ಮೇಷ್ಟ್ರು. ಸಮಕಾಲೀನ ಚಳವಳಿಗಳ ಸಂದರ್ಭದಲ್ಲಿ ತಪ್ಪದೆ ಕಾಣಿಸಿಕೊಳ್ಳುವ ಹೆಸರು. ಸಾಮಾಜಿಕ ಅನ್ಯಾಯಗಳನ್ನು ಕಂಡರೆ ಸಿಡಿದೇಳುವ ಸ್ವಭಾವದ ಮೂರ್ತಿ ಅವರಿಗೆ, ಕವಿತೆಗಳು ಅಚ್ಚುಮೆಚ್ಚು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ಪ್ಯಾರಿಸ್‌ ಒಪ್ಪಂದದ ಗುರಿ ಸಾಧನೆ: ಒತ್ತಾಸೆಯಾಗಬೇಕಿದೆ ಪ್ರಜಾಪ್ರಭುತ್ವದ ಸ್ತಂಭಗಳು

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಬಲಪಡಿಸುವುದು ಎಂದರೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನಿರ್ಣಯವನರಿಯದ ಮನ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಸುತ್ತಾಟ | ಆಸ್ಟ್ರೇಲಿಯಾದ ಕೋಸಿಯಸ್ಕೋ ಪರ್ವತ ಚಾರಣ

ಆಸ್ಟ್ರೇಲಿಯಾದಲ್ಲಿ ಎತ್ತರದ ಪರ್ವತಗಳಿಲ್ಲ ಎಂಬ ಭಾವನೆ ಅನೇಕ ಮಂದಿಯ ಮನಸ್ಸಿನಲ್ಲಿ ನೆಲೆಗೊಂಡಿರಬಹುದು,...

Download Eedina App Android / iOS

X