- ರೈತರಿಗೆ ಪರಿಹಾರ ನೀಡದಿದ್ದರೂ ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡುತ್ತಾರಂತೆ ಎಂದು ಟೀಕೆ
- ಕೇಂದ್ರದ ನೆರವಿಗೆ ಕಾಯದೆ ಬರ ಪರಿಹಾರ ವಿತರಣೆಗೆ ಪ್ರತಿಪಕ್ಷದ ನಾಯಕರ ಆಗ್ರಹ
“ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡಲು ಮೀನಮೇಷ ಎಣಿಸುವ ರಾಜ್ಯ ಸರ್ಕಾರ ಮುಸ್ಲಿಮರ ಓಲೈಕೆಗೆ ಹತ್ತು ಸಾವಿರ ಕೋಟಿ ಅನುದಾನ ನೀಡುವುದಾಗಿ ಹೇಳಿರುವುದು ತುಷ್ಟೀಕರಣದ ಪರಮಾವಧಿ” ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ವಿಧಾನಸಭೆ ಕಲಾಪದ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, “ರಾಜ್ಯದ ಇತಿಹಾಸದಲ್ಲೇ ಇಂತಹ ರೈತ ವಿರೋಧಿ ಸರಕಾರವನ್ನು ಕಂಡಿರಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಿಡಸೋಶಿ ಗ್ರಾಮದ ಯುವ ರೈತ ಶಿವಪ್ಪ ಶಿವಲಿಂಗ ಎಂಬಾತ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಬಗ್ಗೆ ಸರಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ. ಅಧಿವೇಶನ ಆರಂಭದ ದಿನ ದುರಂತ ನಡೆದಿದ್ದು, ಇಡೀ ಸರಕಾರಿ ಆಡಳಿತ ಬೆಳಗಾವಿಯಲ್ಲಿ ಇದ್ದರೂ ಯಾರೊಬ್ಬರೂ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ” ಎಂದು ತರಾಟೆಗೆ ತೆಗೆದುಕೊಂಡರು.
“ಮುಂಗಾರು ವೈಫಲ್ಯದ ಬೆನ್ನಲ್ಲೇ ಹಿಂಗಾರು ಕೈಕೊಟ್ಟಿದೆ. ಈ ಬಗ್ಗೆ ಯಾವುದೇ ಸಚಿವ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಮೌಲ್ವಿಗಳ ಕಾರ್ಯಕ್ರಮದಲ್ಲಿ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ನೀಡುವ ಅನುದಾನವನ್ನು ಹತ್ತು ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವುದಾಗಿ ಹೇಳಿದ್ದಾರೆ. ಇವರಿಗೆ ಸಾಯುತ್ತಿರುವ ರೈತರು ಕಣ್ಣಿಗೆ ಕಾಣುತ್ತಿಲ್ಲವೇ?” ಎಂದು ಕಿಡಿಕಾರಿದರು.
“ಈ ಸರ್ಕಾರದ ಪಂಚೇದ್ರಿಯಗಳು ನಿಷ್ಕ್ರಿಯಗೊಂಡಂತಿದೆ. ರೈತರು, ಕೂಲಿ ಕಾರ್ಮಿಕರ ಸಂಕಷ್ಟದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಬರದಿಂದ ಅಸಹಾಯಕ ರಾಗಿ ನೆರವಿನತ್ತ ನೋಡುತ್ತಿರುವವರನ್ನು ನಡು ದಾರಿಯಲ್ಲಿ ಕೈ ಬಿಟ್ಟಿದೆ” ಎಂದು ಕಲಾಪದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
“ಬರ ಪರಿಹಾರದ ವಿಷಯ ಬಂದರೂ ಕೇಂದ್ರದತ್ತ ಬೊಟ್ಟು ಮಾಡುತ್ತಾರೆ. ಕೊಬ್ಬರಿ ಬೆಳೆಗಾರರ ನೆರವಿಗೆ ಮುಂದಾಗಿ ಎಂದರೂ ನಫೆಡ್ ಖರೀದಿಸಲಿ ಎನ್ನುತ್ತಾರೆ. ಎಲ್ಲವನ್ನೂ ಕೇಂದ್ರವೇ ಮಾಡಬೇಕು ಎಂದಾದರೆ ಇವರ ಪಾತ್ರ ಏನು? ಸಂಕಷ್ಟದಲ್ಲಿರುವ ಜನತೆಗೆ ಕಿಂಚಿತ್ತೂ ಸಹಾಯ ಮಾಡಬೇಕು ಎಂಬ ಮಾನವೀಯತೆ ಇಲ್ಲದ ಕಟುಕ ಸರಕಾರ” ಎಂದು ಕಿಡಿಕಾರಿದರು.
ಇದನ್ನು ಓದಿದ್ದೀರಾ? Fact check | ಯತ್ನಾಳ್ ಹೇಳಿದ ಭಾರೀ ಸುಳ್ಳು: ಸಿಎಂ ವಿರುದ್ಧ ಆರೋಪ ಸುಳ್ಳೆಂಬುದಕ್ಕೆ ಇಲ್ಲಿದೆ ಸಾಕ್ಷಿ
“ನಮ್ಮ ತಾಳ್ಮೆಗೂ ಒಂದು ಮಿತಿಯಿದೆ. ಬೆಳಗಾವಿ ಅಧಿವೇಶನದಲ್ಲಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರಕಾರ ಮುಂದಾಗಬೇಕು ಇಲ್ಲವಾದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಕೇಂದ್ರದ ನೆರವು ಯಾವುದೇ ಕಾರಣಕ್ಕೂ ಮಿಸ್ ಆಗುವುದಿಲ್ಲ. ಸಂಬಂಧಿಸಿದ ಸಚಿವಾಲಯಗಳಲ್ಲಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಣ ಬಿಡುಗಡೆ ಆಗುತ್ತದೆ. ಅಲ್ಲಿಯವರೆಗೆ ಕಾಲಾ ಹರಣ ಮಾಡದೆ ರಾಜ್ಯ ಸರ್ಕಾರ ನಾವು ಹಿಂದೆ ನೀಡಿದ್ದಂತೆ ಮಾರ್ಗಸೂಚಿಗಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.