ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಬಡವರಿಗೆ ಈ ಹಿಂದೆ ಉಚಿತವಾಗಿ ಆರೋಗ್ಯ ಸೇವೆ ನೀಡಲಾಗುತ್ತಿತ್ತು. ಆದರೆ, ಈಗ ಶೇ.50ರಷ್ಟು ಶುಲ್ಕ ವಿಧಿಸಲಾಗುತ್ತಿದೆ. ಶುಲ್ಕ ನಿಗದಿ ಮಾಡಿರುವುದನ್ನು ಹಿಂಪಡೆಯಬೇಕು ಎಂದು ಎಸ್‌ಯುಸಿಐ ಪಕ್ಷವು ಒತ್ತಾಯಿಸಿದೆ.
ಶುಲ್ಕ ವಸೂಲಿ ಬಗ್ಗೆ ಪಕ್ಷದ ಮುಖಂಡ ಶರಣು ಗೋನವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. “ಶುಲ್ಕ ನಿಗದಿ ಮಾಡಿರುವುದನ್ನು ಹಿಂಪಡೆಬೇಕು ಎಂದು ಒತ್ತಾಯಿಸಿ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ್ದ ಅಪರ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದರು. ಅದರಂತೆ ಸಭೆ ನಡೆದಿದ್ದು, ಶುಲ್ಕ ನಿಗದಿ ಹಿಂಪಡೆಯುವ ಬಗ್ಗೆ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.
“ಜಿಲ್ಲಾಸ್ಪತ್ರೆಯಲ್ಲಿ ಬಡವರಿಗೆ ಉಚಿತವಾಗಿದ್ದ ವಿವಿಧ ಪರೀಕ್ಷೆಗಳಿಗೆ ಹೊಸದಾಗಿ ಶೇ.50 ದರಗಳನ್ನು ನಿಗದಿಪಡಿಸಲಾಗಿದೆ. ಜನರು ಈಗಾಗಲೇ ವಿಪರೀತ ಬೆಲೆ ಏರಿಕೆ ಹಾಗೂ ಬರಗಾಲದಿಂದ ಕಂಗೆಟ್ಟಿರುವಾಗ, ಮೂಲಭೂತ ಅವಶ್ಯಕತೆಯಾದ ಆರೋಗ್ಯ ಸೇವೆಯನ್ನು ಪಡೆಯಲು ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ ವಿವಿಧ ಪರೀಕ್ಷೆಗಳಿಗೆ ಶೇ.50 ಕಟ್ಟಬೇಕಾಗಿ ಬಂದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಕೂಡಲೇ ಹೊಸ ಶುಲ್ಕ ಸಂಗ್ರಹಣೆಯನ್ನು ಕೈಬಿಡಬೇಕೆಂದು ಸಭೆಯಲ್ಲಿ ಪಕ್ಷವು ಆಗ್ರಹಿಸಿತ್ತು. ‘ಅನುದಾನದ ಕೊರತೆಯಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳಲು ಜನರಿಂದ ಶುಲ್ಕ ಸಂಗ್ರಹಿಸುವುದು ಅನಿವಾರ್ಯವಾಗಿದೆ. ಶುಲ್ಕ ಹಿಂಪಡೆಯುವ ಬಗ್ಗೆ ಪರಿಶೀಲನೆ ಮಾಡುತ್ತೆವೆ’ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ” ಎಂದಿದ್ದಾರೆ
“ಶುದ್ದ ಕುಡಿಯುವ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು, ಆವರಣದೊಳಗೆ ಸಮರ್ಪಕ ರಸ್ತೆಗಳನ್ನು ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಶೀಘ್ರವೇ ರಸ್ತೆ ನಿರ್ಮಿಸಲಾಗುವುದು. ಅಗತ್ಯ ಇರುವ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಎಸ್‌ಯುಸಿಐ ನಿಯೋಗದ ಲಕ್ಷ್ಮಣ ಜಡಗನ್ನವರ, ಗಂಗಾಧರ ಬಡಿಗೇರ, ದೀಪಾ ಧಾರವಾಡ, ಶರಣು ಗೋನವಾರ, ಭವಾನಿಶಂಕರ್, ಸದಸ್ಯರಾದ ಹಣಮೇಶ ಹುಡೇದ ಭಾಗವಹಿಸಿದ್ದರು.