ಚಿಂಚೋಳಿ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಗೊಂದು ತೊಗರಿ ಖರೀದಿ ಕೇಂದ್ರ ತೆರೆದು, ಪ್ರತಿ ಕ್ವಿಂಟಾಲ್ ತೊಗರಿಗೆ ಕನಿಷ್ಠ 10 ಸಾವಿರ ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.
ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ನೇತ್ರತ್ವದಲ್ಲಿ ಚಂಚೋಳಿ ತಾಲೂಕು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
“ಚಿಂಚೊಳಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ತಾಲೂಕು, ಹಾಗಾಗಿ ವನ್ಯಜೀವಿ ಧಾಮ, ಜಲಪಾತ ಪ್ರವಾಸಿ ತಾಣವಾಗಿ ಮಾಡಬೇಕು. ಕರ್ನಾಟಕ ಹಾಗೂ ಆಂಧ್ರಪ್ರದೇಶ, ತೆಲಂಗಾಣ ಗಡಿಭಾಗ ಸಮೀಕ್ಷೆ ಮಾಡಬೇಕು. ಪ್ರತಿ ಕ್ವಿಂಟಾಲ್ ತೊಗರಿಗೆ ರಾಜ್ಯ ಸರ್ಕಾರದಿಂದ 1 ಸಾವಿರ ರೂ. ಪ್ರೋತ್ಸಾಹ ಧನ ಒದಗಿಸಿ ಬೆಂಬಲ ಬೆಲೆ ಕಾನೂನು ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.
“ಬೆಳೆ ವಿಮೆ ಹಣ ಕಟ್ಟಿದ್ದ ಎಲ್ಲಾ ರೈತರಿಗೆ ವಿಮೆ ಹಣ ಬಿಡುಗಡೆ, ರೈತರ ಸಾಲ ಮನ್ನಾ, ಬರ ಪರಿಹಾರ ಹಣ ಬಿಡುಗಡೆ ಮಾಡಬೇಕು. ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಕೈಗೊಂಡಿರುವ ಜಲ ಜೀವನ್ ಮಿಷನ್ ಕಾಮಗಾರಿ ಸಂಪೂರ್ಣ ಹದಗೆಟ್ಟು ಹೋಗಿದೆ. ಕಳಪೆ ಮಟ್ಟದ ಕಾಮಗಾರಿ ಮಾಡುತ್ತಿರುವ ಸಂಬಂಧಿಸಿದ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಸದರಿ ಕಾಮಗಾರಿ ಬಿಲ್ ತಡೆ ಹಿಡಿಯಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಎಸಿಸಿ ಸಿಮೆಂಟ್ ಕಾರ್ಖಾನೆ ಇಂಜಿನಿಯರ್ ಆತ್ಮಹತ್ಯೆ
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಹಾಗೂ ಚಿಂಚೋಳಿ ತಾಲೂಕು ಘಟಕದ ಹಣಮಂತ ಪೂಜಾರಿ, ಜಾಫರ್ ಖಾನ್ ಸಾಬ್, ದಿಲೀಪ್ ನಾಗೂರೆ, ಶಂಕ್ರಯ್ಯಾ ಸ್ವಾಮಿ, ಸಿದ್ದಲಿಂಗಯ್ಯ ಸ್ವಾಮಿ ಸೇರಿದಂತೆ ಇತರರಿದ್ದರು.
ವರದಿ ಮಾಹಿತಿ : ಅವಿನಾಶ ರೆಡ್ಡಿ