ಕಾಂತರಾಜ ಆಯೋಗದ ಜಾತಿ ಸಮೀಕ್ಷೆ ವರದಿ ಸ್ವೀಕರಿಸಿ ಹಾಗೂ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ ರಾಯಚೂರು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
“ರಾಜ್ಯದ ಜನರ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಕುರಿತು ಕಾಂಗ್ರೆಸ್ ಸರ್ಕಾರದ ಆದೇಶದಂತೆ ಕಾಂತರಾಜ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗವು ರಾಜ್ಯ ಸರ್ಕಾರ ನೀಡಿದ ಸಂಪನ್ಮೂಲಗಳನ್ನು ಬಳಸಿಕೊಂಡು ಸುಮಾರು 168 ಕೋಟಿ ರೂಪಾಯಿ ಹಣ ಖರ್ಚು ಮಾಡಿ, ತಿಂಗಳುಗಳ ಕಾಲ ಶ್ರಮಿಸಿ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ನೌಕರ ಸಿಬ್ಬಂದಿಗಳ ಸಹಾಯದೊಂದಿಗೆ ಸಮೀಕ್ಷೆ ನಡೆಸಿ ವರದಿ ಸಿದ್ದಪಡಿಸಲಾಗಿದೆ. ಆದರೆ ವರದಿ ಜಾರಿಗೆ ಮುಂದಾಗದೇ ಇರುವುದು ಖಂಡನೀಯ” ಎಂದರು.
“ಆಯೋಗವು ಸುಮಾರು 58 ಅಂಶಗಳ ಒಳಗೊಂಡ ಬುಕ್‌ಲೆಟ್ ತಯಾರಿಸಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಮುಖಾಂತರ, ಸರ್ಕಾರದ ಸಿಬ್ಬಂದಿಗಳ ವಿಶೇಷವಾಗಿ ಶಿಕ್ಷಕರ ಮುಖಾಂತರ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಆರ್ಥಿಕ ರಾಜಕೀಯ ಸ್ಥಿತಿಗಳ ಬಗ್ಗೆ ಸಮೀಕ್ಷೆ ಮಾಡಿಸಿ ವರದಿಯನ್ನು ತಯಾರಿಸಲಾಗಿದೆ. ವರದಿ ತಯಾರಿಸಲು ರಾಜ್ಯದ ಖಜಾನೆಯಿಂದ ಸುಮಾರು 168 ಕೋಟಿ ರೂಪಾಯಿ ಖರ್ಚು ಮಾಡಿದೆ” ಎಂದು ತಿಳಿಸಿದರು.
“ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಮುಂದೆ ಬಂದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವಾಗಲಿ, ಬಿಜೆಪಿ ಸರ್ಕಾರವಾಗಲಿ ಕಾಂತರಾಜ ನೇತೃತ್ವದ ಜಾತಿವಾರು ಸಮೀಕ್ಷೆಯ ವರದಿಯನ್ನು ಸ್ವೀಕರಿಸದೇ ಇರುವುದು ಶೋಷಿತ ಸಮಾಜಗಳಿಗೆ ಮಾಡಿದ ಅನ್ಯಾಯವಾಗಿದೆ” ಎಂದು ಆರೋಪಿಸಿದ್ದು, ಕಾಂತರಾಜ ವರದಿಯನ್ನು ಅಂಗೀಕರಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | 5 ವರ್ಷದಲ್ಲಿ ವಸತಿ ಶಾಲೆಗಳ 92 ಮಂದಿ ವಿದ್ಯಾರ್ಥಿಗಳ ಆತ್ಮಹತ್ಯೆ
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ ಶಾಂತಪ್ಪ, ಕೆ ಕರಿಯಪ್ಪ, ಬಿ ಬಸವರಾಜ, ಕೆ ಹನುಮಂತಪ್ಪ, ವಿಜಯ ಭಾಸ್ಕರ್ ಇಟಗಿ, ಜಿ ಸುರೇಶ, ವೆಂಕಟೇಶ, ಲಕ್ಷ್ಮಿರೆಡ್ಡಿ, ಗಣೇಶ, ಅಮರೇಶ್, ಖಾಜನಗೌಡ, ಸತ್ಯನಾರಾಯಣ ಸೇರಿದಂತೆ ಹಲವು ಸಮಾಜದ ಮುಖಂಡರು ಇದ್ದರು.
ವರದಿ : ಹಫೀಜುಲ್ಲ