ಮಂಡ್ಯ ಜಿಲ್ಲೆಯಲ್ಲಿ ಹೆಣ್ಣುಭ್ರೂಣ ಹತ್ಯೆ ತಡೆಯಲು ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಯೋಜನೆ ಸಿದ್ಧಪಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಸೂಚಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳು ಹಾಗೂ ಮಹಿಳಾ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.
“ಪಿಸಿಪಿಡಿಎನ್ಟಿ ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ, ಸ್ಕ್ಯಾನಿಂಗ್ ಸೆಂಟರ್, ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ಗಳನ್ನು ಅಳವಡಿಸಬೇಕು” ಎಂದು ಹೇಳಿದರು.
“ಡಿಸೆಂಬರ್ 20ರಂದು ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮ ಜಿಲ್ಲಾ, ತಾಲೂಕು ಪಿಹೆಚ್ಸಿ ಮಟ್ಟದಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಲು ದಿನಾಂಕದೊಂದಿಗೆ ಯೋಜನೆ ಸಿದ್ಧವಾಗಬೇಕು. ಜಿಲ್ಲಾ ಮಟ್ಟದಲ್ಲಿ ಡಿಸೆಂಬರ್ 20ರಂದು ನಡೆಯುವ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಬೇಕು” ಎಂದು ಸೂಚನೆ ನೀಡಿದರು.
“ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಆರೋಗ್ಯ ಇಲಾಖೆಯಲ್ಲಿ ಲಭ್ಯವಿರುವ ಐಇಸಿ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಜಿಲ್ಲೆಯಲ್ಲಿರುವ ಮಹಿಳಾ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸ್ಥಳೀಯ ಜನಪ್ರತಿನಿಧಿಗಳನ್ನು ಅರಿವು ಕಾರ್ಯಕ್ರಮಗಳಿಗೆ ಆಹ್ವಾನಿಸಿ” ಎಂದರು.
“ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಹಾಗೂ ಆರೋಗ್ಯ ಇಲಾಖೆಯಿಂದ ನೀಡಲಾಗುವ ಸೇವೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಜಿಲ್ಲಾ ಮಟ್ಟದಲ್ಲಿ ಟೋಲ್ ಫ್ರೀ ಸಹಾಯವಾಣಿ ಸ್ಥಾಪಿಸಲು ಚಿಂತನೆ ನಡೆಸಬೇಕು” ಎಂದು ಸೂಚಿಸಿದರು.
“ಸ್ಕ್ಯಾನಿಂಗ್ ಸೆಂಟರ್ಗಳಿಗೆ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಪಿಸಿಪಿಡಿಎನ್ಟಿ ಸಮಿತಿ ಸ್ಕ್ಯಾನಿಂಗ್ ಸೆಂಟರ್ಗೆ ದಿಢೀರ್ ಭೇಟಿ ನೀಡಿ ವರದಿ ನೀಡಬೇಕಿರುತ್ತದೆ. ಸಮಿತಿ ಇನ್ನೂ ಮುಂದೆ ದಿಢೀರ್ ಭೇಟಿ ನೀಡಿ ವರದಿ ನೀಡಬೇಕು” ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, “ಹೆಣ್ಣುಭ್ರೂಣ ಹತ್ಯೆ ತಡೆಗಟ್ಟಲು ಸಾರ್ವಜನಿಕರೂ ಕೂಡ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು. ಇಂತಹ ಕೃತ್ಯ ಕಂಡುಬಂದಲ್ಲಿ ನೇರವಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಎಎಪಿ ಆಗ್ರಹ
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಆರೋಗ್ಯ ಇಲಾಖೆಯ ಡಾ.ಬೆಟ್ಟಸ್ವಾಮಿ, ಹಿರಿಯ ವಕೀಲೆ ಜಯಲಕ್ಷ್ಮಿ, ಮಹಿಳಾ ಸಂಘಟನೆಯ ಮುಖ್ಯಸ್ಥರುಗಳಾದ ಸುನಂದ ಜಯರಾಂ, ಕುಮಾರಿ ಸೇರಿದಂತೆ ಇತರರು ಇದ್ದರು.