ರಕ್ಷಣೆ ಮಾಡುವ ಪೊಲೀಸ್ ಇಲಾಖೆಯೇ ಭ್ರಷ್ಟಾಚಾರದಲ್ಲಿ ತೊಡಗಿದರೆ, ಅದು ದೊಡ್ಡ ಕಳಂಕವೆಂದು ಎಡಿಜಿಪಿ (ತರಬೇತಿ) ಅಲೋಕ್ ಕುಮಾರ್ ಹೇಳಿದ್ದಾರೆ.
ಕೊಪ್ಪಳದಲ್ಲಿ ನಡೆದ ಜಿಲ್ಲಾ ಪೊಲೀಸ್ ಪಥ ಸಂಚಲನದಲ್ಲಿ ಅವರು ಮಾತನಾಡಿದರು. “ಪೊಲೀಸರು ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಭ್ರಷ್ಟಾಚಾರದಲ್ಲಿ ತೊಡಗಬಾರದು. ರಕ್ಷಣೆ ಮಾಡುವ ಪೊಲೀಸ್ ಇಲಾಖೆಯಲ್ಲೇ ಭ್ರಷ್ಟಾಚಾರ ನಡೆದರೆ, ಅದು ದೊಡ್ಡ ಕಳಂಕ. ಬೇಗನೆ ಸಿರಿವಂತರಾಗಬೇಕು ದುರಾಸೆ ಹೊಂದಿರುವ ಪೊಲೀಸರೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಪೊಲೀಸರು ಮಾಡುವ ಅಪರಾಧ ಕ್ರಿಮಿನಲ್ ಪ್ರಕರಣಕ್ಕಿಂತಲೂ ದೊಡ್ಡದು” ಎಂದು ಹೇಳಿದರು.
“ತಂತ್ರಜ್ಞಾನ ಬೆಳೆದಂತೆಲ್ಲ ಅಪರಾಧಗಳ ಸ್ವರೂಪವೂ ಬದಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದ್ವೇಷ, ಅವಹೇಳನಕಾರಿಯಾಗಿ ಪೋಸ್ಟ್‌ಗಳನ್ನು ಹಾಕುವುದರಿಂದ ಸಮಾಜದ ಶಾಂತಿಗೆ ಧಕ್ಕೆ ಉಂಟಾಗುತ್ತಿದೆ. ಅಂತಹ ಪೋಸ್ಟ್‌ಗಳ ಮೇಲೆ ತಾಲೂಕು ಹಂತದಲ್ಲೇ ನಿಗಾ ವಹಿಸಬೇಕು” ಎಂದರು.
“2022ರಲ್ಲಿ ದೇಶಾದ್ಯಂತ 1,68,391 ಮಂದಿ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಪ್ರತಿ ಗಂಟೆಗೆ 30ಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ. ಅಪಘಾತಗಳ ಪ್ರಕರಣಕ್ಕೆ ಕಡಿವಾಣ ಹಾಕಲು ಕ್ರಮ ಜರುಗಿಸಬೇಕು” ಎಂದು ತಿಳಿಸಿದರು.