ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಈ ಹಿಂದೆಯೂ ಹಲವು ಬಾರಿ ಜಿಲ್ಲೆಯಲ್ಲಿ ಭೂಮಿ ಕಂಪನದ ಅನುಭವವಾಗಿತ್ತು. ಆದರೆ, ಕಳೆದ ಕೆಲ ತಿಂಗಳಿಂದ ಭೂಕಂಪನ ಆಗಿರಲಿಲ್ಲ. ಆದರೆ, ಇದೀಗ ಮತ್ತೆ ಜಿಲ್ಲೆಯಲ್ಲಿ ಭೂಕಂಪನದ ಅನುಭವವಾಗಿದ್ದು ಜನರ ನಿದ್ದಗೇಡಿಸಿದೆ.
ಜಿಲ್ಲೆಯ ಉಕುಮನಾಳ ಗ್ರಾಮದಲ್ಲಿ ಡಿ.8ರಂದು ಬೆಳಗ್ಗೆ 6.52ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.1 ರಷ್ಟು ತೀವ್ರತೆ ದಾಖಲಾಗಿದೆ ಎಂದು ಕೆಎಸ್ಎನ್‌ಡಿಎಂಸಿ ಅಧಿಕಾರಿಗಳು ದೃಢೀಕರಿಸಿದ್ದಾರೆ.
ಇನ್ನು ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಭೂಕಂಪವಾಗುತ್ತಲೆ ಇದ್ದು ಜನರು ಆತಂಕದಲ್ಲಿ ಜೀವನ ಕಳೆಯುವಂತಾಗಿದೆ. ಜಿಲ್ಲೆಯಲ್ಲಿ ಭೂಕಂಪನದ ಸದ್ದು ಆಗಾಗ ಆಗುತ್ತಿದ್ದು ಇದರಿಂದ ಜನರಲ್ಲಿ ಆತಂಕ ಎದುರಾಗಿದೆ. ರಾತ್ರಿ, ಮಧ್ಯರಾತ್ರಿ ಸಮಯದಲ್ಲಿ ಏಕಾಏಕಿ ಶಬ್ದದೊಂದಿಗೆ ಭೂಮಿ ನಡುಗುತ್ತಿರುವುದು ಜನತೆ ನಿದ್ದೆಗೆಡುವಂತೆ ಮಾಡಿದೆ.
ವಿಜಯಪುರ ಭಾಗದಲ್ಲಿ 2010ರಲ್ಲಿ 24 ಬಾರಿ ಭೂಮಿ ಕಂಪಿಸಿತ್ತು. ನಂತರ 2011ರಲ್ಲಿ ಒಂದು ಬಾರಿ ಕಂಪಿಸಿತ್ತು. ಇದಾದನಂತರ 2011ರಿಂದ 2021ರವರೆಗೆ ಭೂಕಂಪನದ ಸದ್ದೇ ಇರಲಿಲ್ಲ. 2021ರಿಂದ ಮತ್ತೆ ಭೂಕಂಪನ ಸಂಭವಿಸುತ್ತಿದ್ದು ಜನತೆಯಲ್ಲಿ ಆತಂಕ ಮೂಡಿಸಿದೆ.
2010ರಲ್ಲಿ ತಳೆವಾಡ, ಕಲಗುರ್ಕಿ, ಮಲಘಾಣ, ಹುಣಶ್ಯಾಳ ಭಾಗದಲ್ಲಿ ಪದೆ ಪದೇ ಭೂಕಂಪನಗಳು ಸಂಭವಿಸಿದ ಕಾರಣ ಅಲ್ಲಿ ಭೂಕಂಪ ನಿರೀಕ್ಷಣಾ ಯಂತ್ರಗಳನ್ನು ಅಳವಡಿಸಲಾಗಿತ್ತು. ಅಲ್ಲಿ ದಾಖಲಾದ ಭೂಕಂಪನಗಳನ್ನು ಅವಲೋಕಿಸಿದಾಗ ಸಾಮಾನ್ಯವಾಗಿ 1.2 ಕಡಿಮೆ ತೀವ್ರತೆಯ ಭೂಕಂಪ ದಾಖಲಾಗಿದ್ದರೆ, ಒಂದು ಬಾರಿ ಮಾತ್ರ (29-01-2010)ರಲ್ಲಿ 3.1 ತೀವ್ರತೆ ದಾಖಲಾಗಿತ್ತು. ಇದನ್ನು ಹೊರತು ಪಡಿಸಿ ಉಳಿದೆಲ್ಲವೂ ಕಡಿಮೆ ತೀವ್ರತೆಯ ಭೂಕಂಪನಗಳು ಸಂಭವಿಸಿದ್ದವು. ಕಲಗುರ್ಕಿ ಗ್ರಾಮದಲ್ಲಿ ಅತೀ ಹೆಚ್ಚು ಬಾರಿ ಭೂಮಿ ಕಂಪಿಸಿದೆ.