ಈ ದಿನ ಸಂಪಾದಕೀಯ | ಹೆಚ್ಚುತ್ತಲೇ ಇವೆ ಮಹಿಳೆಯರ ಮೇಲಿನ ಅಪರಾಧಗಳು; ಬೇಟಿಯರು ಬಚಾವ್‌ ಆಗೋದೆಂದಿಗೆ ಮೋದಿಯವರೇ?

Date:

ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಪ್ರಮಾಣ 2021ಕ್ಕೆ ಹೋಲಿಸಿದರೆ 2022ರಲ್ಲಿ ಶೇ 4ರಷ್ಟು ಏರಿಕೆಯಾಗಿವೆ. 2022ರಲ್ಲಿ 4,45,256 ಪ್ರಕರಣಗಳು ದಾಖಲಾಗಿದ್ದವು ಎಂದು National Crime Records Bureau – NCRB  ವರದಿ ಹೇಳಿದೆ

 

ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಹಳ್ಳಿಗಳನ್ನು ಇಬ್ಭಾಗಿಸುವಂತೆ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿವೆ. ಹಳ್ಳಿಗರಿಗೆ ಈಗ ನಗರ ದೂರದ ಊರಲ್ಲ. ಗಗನಚುಂಬಿ ಕಟ್ಟಡಗಳು ಸದಾ ಝಗಮಗಿಸುವ ನಗರಗಳಲ್ಲಿ ಯಾರ ಭಯವೂ ಇಲ್ಲದೇ ತಡ ರಾತ್ರಿಯವರೆಗೂ ಹೆಣ್ಣುಮಕ್ಕಳು ಕೆಲಸ ಮಾಡಬಹುದು. ಮುಸ್ಸಂಜೆಗೆ ಮಗಳು ಮನೆಗೆ ಬಂದಿಲ್ಲ ಎಂದು ಹೆದರುವ ಪರಿಸ್ಥಿತಿ ಈಗ ಇಲ್ಲ. ನಿಮಿಷ ನಿಮಿಷಕ್ಕೂ ಓಡಾಡುವ ಬಸ್ಸು, ರೈಲು, ಉಬರ್‌ಓಲಾ ಟ್ಯಾಕ್ಸಿ ಸೌಲಭ್ಯಗಳು ಮೊಬೈಲ್‌ನಲ್ಲೆ ಸಿಕ್ಕಿಬಿಡುತ್ತಿವೆ. ಹೆಣ್ಣುಮಕ್ಕಳು ಹೆಚ್ಚು ಹೆಚ್ಚು ಸುಶಿಕ್ಷಿತರಾಗುತ್ತಿದ್ದಾರೆ. ಈ ದೇಶದ ಕಾನೂನುಗಳೂ ಹೆಣ್ಣುಮಕ್ಕಳ ಪರವಾಗಿವೆ. ವರದಕ್ಷಿಣೆ ಕಿರುಕುಳಕ್ಕೆ ದೂರು ಕೊಟ್ಟ ತಕ್ಷಣ ಆರೋಪಿಗಳನ್ನು ಬಂಧಿಸಬಹುದು, ಅತ್ಯಾಚಾರ ಆರೋಪಿಗೆ ಜೀವಾವಧಿ ಶಿಕ್ಷೆ ಖಂಡಿತ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ‘ಪೋಕ್ಸೋ’ ಅಡಿ ಕಠಿಣ ಶಿಕ್ಷೆಯ ಅವಕಾಶವಿದೆ’ ಎಂದೆಲ್ಲ ನಾವು ಸಮಾಧಾನಪಟ್ಟುಕೊಳ್ಳಬೇಕಷ್ಟೇ.

ಈ ದಾವೆಗಳು ನಿಜವೇ ಆಗಿದ್ದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಮಾಣ ಕಡಿಮೆಯಾಗಬೇಕಲ್ಲವೇ? ವಾಸ್ತವಾಂಶಗಳು ಬೇರೆಯೇ ಚಿತ್ರವನ್ನು ಬಿಡಿಸುತ್ತಿವೆ. ಹಸಿವಿನ ಸೂಚ್ಯಂಕ, ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ, ಅಭಿವ್ಯಕ್ತಿ ಸ್ವಾತಂತ್ರ್ಯವೇ ಮುಂತಾದ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ನಡೆಯುತ್ತಿದೆ ಎಂಬ ಅಂತಾರಾಷ್ಟ್ರೀಯ ವರದಿಗಳನ್ನು ತನ್ನ ವಿರುದ್ಧದ ಷಡ್ಯಂತ್ರ ಎಂದು ತಿರಸ್ಕರಿಸುತ್ತಿದೆ ಮೋದಿ ಸರ್ಕಾರ.

ಕಳೆದ ವಾರ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau – NCRB)2022ರ ವರದಿಯೇ ಈ ಮಾತಿಗೆ ಸಾಕ್ಷಿ. ಭಾರತ ಸರ್ಕಾರದ ಗೃಹಮಂತ್ರಾಲಯದ ಅಧೀನದಲ್ಲಿ ಕೆಲಸ ಮಾಡುವ ಸಂಸ್ಥೆಯಿದು. ಮೋದಿಯವರ ಬಲಗೈ ಎಂದೇ ಬಣ್ಣಿಸಲಾಗುವ ಅಮಿತ್ ಶಾ ಅವರು ದೇಶದ ಗೃಹಮಂತ್ರಿ ಎಂಬುದನ್ನು ಗಮನಿಸಬೇಕು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2021ಕ್ಕೆ ಹೋಲಿಸಿದರೆ ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಶೇ 4ರಷ್ಟು ಏರಿಕೆಯಾಗಿವೆ. 2022ರಲ್ಲಿ 4,45,256 ಪ್ರಕರಣಗಳು ದಾಖಲಾಗಿದ್ದವು ಎಂದು ವರದಿ ಬಹಿರಂಗಪಡಿಸಿದೆ. ಈ ಲೆಕ್ಕದಲ್ಲಿ ತಾಸಿಗೆ 51 ಎಫ್‌ಐಆರ್‌ಗಳು ದಾಖಲಾಗಿವೆ. ನಮ್ಮ ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗುವುದು ಅಷ್ಟು ಸಲೀಸಲ್ಲ. ದೂರುಗಳನ್ನೇ ಸ್ವೀಕರಿಸದೆ ಮಹಿಳೆಯರನ್ನು ಹೊರಗಟ್ಟುವ ಠಾಣೆಗಳ ಉದಾಹರಣೆಗಳು ಅಸಂಖ್ಯ. ಹಾಗಾಗಿ ಇವು ದಾಖಲಾದ ಪ್ರಕರಣಗಳ ಲೆಕ್ಕ ಅಷ್ಟೇ.

ಮಹಿಳೆಯರನ್ನು ಕಾಲಕಸದಂತೆ ಕಂಡು ಸ್ತ್ರೀದ್ವೇಷವನ್ನು ಸಾರುವ ಮನುಸ್ಮೃತಿಯನ್ನು ಎದೆಗೆ ಅಪ್ಪಿಕೊಂಡಿರುವ ದೇಶವಿದು. ಈ ಹಿನ್ನೆಲೆಯಲ್ಲಿ ಗಣನೀಯ ಸಂಖ್ಯೆಯ ಅಪರಾಧಗಳು (ಶೇ.31.4) ಕುಟುಂಬದ ಚೌಕಟ್ಟಿನ ಒಳಗೇ ನಡೆಯುವಂತಹವು, ಗಂಡ ಅಥವಾ ಅವನ ಸಂಬಂಧಿಗಳಿಂದ ಜರುಗುವ ಕ್ರೌರ್ಯಗಳು. ಅಪಹರಣಗಳ ಪ್ರಮಾಣ ಶೇ.19.20. ಆಕೆಯ ಮೇಲೆ ಅತ್ಯಾಚಾರ ನಡೆಸುವ ಉದ್ದೇಶದಿಂದಲೇ ನಡೆಯುವ ಹಲ್ಲೆಗಳ ಪ್ರಮಾಣ ಶೇ.18.7.

ದೇಶದ ರಾಜಧಾನಿ ದೆಹಲಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ನಗರ ಎಂಬ ಕುಖ್ಯಾತಿ ಗಳಿಸಿದೆ. ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ನೇರವಾಗಿ ಕೇಂದ್ರ ಗೃಹಮಂತ್ರಾಲಯದ ಸುಪರ್ದಿನಲ್ಲಿದೆ. ದೆಹಲಿ ಪೊಲೀಸರು ವರದಿ ಮಾಡಿಕೊಳ್ಳುವುದು ಅಮಿತ್ ಶಾ ಅವರಿಗೇ ವಿನಾ ಕೇಜ್ರೀವಾಲ್ ಅವರಿಗಲ್ಲ.

ಮಹಿಳೆಯರ ಮೇಲಿನ ಅತ್ಯಾಚಾರ, ಹಿಂಸೆ, ಕೊಲೆಯಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಮತ್ತು ರಾಜಸ್ಥಾನ ಇವೆ. 2022ರಲ್ಲಿ ದಿನವೊಂದಕ್ಕೆ ಸರಾಸರಿ ಮೂರು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದಿದೆ ಎನ್.ಸಿ.ಆರ್.ಬಿ. ವರದಿ.

ಮಹಿಳೆಯರ ವಿರುದ್ಧದ ಅಪರಾಧದ ಪ್ರಮಾಣ (1 ಲಕ್ಷ ಜನಸಂಖ್ಯೆಗೆ ಘಟನೆಗಳ ಸಂಖ್ಯೆಯ ಅನುಪಾತದಲ್ಲಿ) 2021ರಲ್ಲಿ ಶೇ 64.5 ದಿಂದ ಒಂದೇ ವರ್ಷದಲ್ಲಿ ಶೇ.66 ಕ್ಕೆ ಏರಿದೆ. 2022ರಲ್ಲಿ 19 ಮಹಾನಗರಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಒಟ್ಟು 48,755 ಪ್ರಕರಣಗಳು ದಾಖಲಾಗಿವೆ. 2021ಕ್ಕೆ ಹೋಲಿಸಿದರೆ 12.3% ಹೆಚ್ಚಳವಿದು.

ಸುಶಿಕ್ಷಿತರೂ, ಅಧಿಕಾರದ ಚುಕ್ಕಾಣಿ ಹಿಡಿದವರೂ, ಸ್ವಾವಲಂಬನೆಯ ಬದುಕು ನಡೆಸುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿದೆ. ಆದರೂ ಅವರ ಮೇಲಿನ ದೌರ್ಜನ್ಯ ತಗ್ಗಿಲ್ಲ. ತಡೆಯುವುದು ಕಾನೂನಿಗೂ ಆಗಿಲ್ಲ, ಕಾನೂನು ಜಾರಿ ಮಾಡುವವರಿಂದಲೂ ಆಗಿಲ್ಲ ಎಂಬುದು ಸ್ಪಷ್ಟ. ಕುಟುಂಬದವರಿಂದಲೇ ದೌರ್ಜನ್ಯದ ಪ್ರಮಾಣ ಹೆಚ್ಚಿದೆ ಎಂದರೆ ಅದಕ್ಕೆ ಹೆಣ್ಣಿನ ಮೇಲೆ ಅಧಿಕಾರ ಚಲಾಯಿಸುವ ದಬ್ಬಾಳಿಕೆ ನಡೆಸುವ, ಆಕೆಯನ್ನು ಅಡಿಯಾಳು ಎಂದು ಭಾವಿಸುವ ಪುರುಷಾಹಂಕಾರ ಕಾರಣ.

ಗಂಡನ ಕುಟುಂಬದವರ ಹಣದ ದಾಹಕ್ಕೆ ಹೆಣ್ಣುಮಕ್ಕಳು ಈಗಲೂ ಬಲಿಯಾಗುತ್ತಿದ್ದಾರೆ. ನಿನ್ನೆಯಷ್ಟೇ ಕೇರಳದ ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣ ಪ್ರೀತಿಸಿ ಮದುವೆಯಾಗಲಿದ್ದ ಯುವಕ ಐಷಾರಾಮಿ ಕಾರು, ಹದಿನೈದು ಎಕರೆ ಜಮೀನು, ಒಂದು ಕೇಜಿ ಚಿನ್ನಕ್ಕೆ ಬೇಡಿಕೆ ಇಟ್ಟು, ಮದುವೆಯನ್ನು ತಿರಸ್ಕರಿಸಿದ್ದ. ಎರಡು ತಿಂಗಳ ಹಿಂದೆ ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿಯರ್ ಯುವತಿಯೊಬ್ಬರು ಗಂಡನ ಮನೆಯ ಹಣದ ದಾಹಕ್ಕೆ ಮತ್ತು ಅನುಮಾನದ ರೋಗಕ್ಕೆ ಬಲಿಯಾದರು.

ಇನ್ನು ʼಕಾನೂನಿನ ಮುಂದೆ ಎಲ್ಲರೂ ಸಮಾನರುʼ ಎಂಬ ಮಾತುಗಳೆಲ್ಲ ಅರ್ಥ ಕಳೆದುಕೊಂಡು ಅದೆಷ್ಟೋ ಕಾಲ ಉರುಳಿದೆ. ರಾಜ್ಯದಲ್ಲಿ ಕಳೆದ ವರ್ಷ ಭಾರೀ ಸುದ್ದಿ ಮಾಡಿದ್ದ ಇಡೀ ಸಂತ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಕುಮಾರಸ್ವಾಮಿಯ ಪ್ರಕರಣ, ಪೋಕ್ಸೋದಂತಹ ಕಠಿಣ ಕಾನೂನು ಕೂಡ ದೊಡ್ಡವರ ಮುಂದೆ ಶರಣಾಗುತ್ತದೆ ಎಂಬುದಕ್ಕೆ ಉದಾಹರಣೆಯಷ್ಟೇ. ಹದಿನಾಲ್ಕು ತಿಂಗಳ ಜೈಲುವಾಸದಿಂದ ಬಿಡುಗಡೆಗೊಂಡು ಹೊರ ಬಂದಾಗ ಭಕ್ತರು, ರಾಜಕೀಯ ಮುಖಂಡರು ಅತ್ಯಾಚಾರದ ಆರೋಪಿಗೆ ಮೊದಲಿನಂತೆಯೇ ಗೌರವಾದರ ತೋರಿಸಿ, ಹಾರ ಹಾಕಿ ಸ್ವಾಗತಿಸಿ ಪಾದಪೂಜೆ ಮಾಡಿ ಬರಮಾಡಿಕೊಂಡದ್ದು ಇಡೀ ಸಮಾಜ ತಲೆ ತಗ್ಗಿಸುವ ವಿಚಾರ. ಕಾನೂನು ಇಷ್ಟು ದುರ್ಬಲವಾದರೆ, ಸಮಾಜ ಇಷ್ಟು ನಿರ್ಲಜ್ಜವಾದರೆ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಬೀಳುವುದು ಕನಸಿನ ಮಾತೇ ಸರಿ.

ದೇಶದ 19 ನಗರಗಳ ಪೈಕಿ ರಾಷ್ಟ್ರ ರಾಜಧಾನಿ ದೆಹಲಿ ಹೆಣ್ಣುಮಕ್ಕಳಿಗೆ ಅಸುರಕ್ಷಿತ ನಗರ ಎಂದು ವರದಿ ಹೇಳಿದೆ. ಈ ವರ್ಷ ಆರಂಭದಲ್ಲಿ ಕುಸ್ತಿಪಟುಗಳು ಕುಸ್ತಿ ಫೆಡರೇಷನ್‌ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ ಭೂಷಣನ ವಿರುದ್ಧ ಲೈಂಗಿಕ ಕಿರುಕುಳದ ದೂರು ಕೊಟ್ಟಾಗ ಪೊಲೀಸರು ನಡೆದುಕೊಂಡ ರೀತಿ ಮತ್ತು ಅದಕ್ಕಾಗಿ ಅವರು ಧರಣಿ ಕುಳಿತಾಗ ಪ್ರಭುತ್ವ ಅದೆಷ್ಟು ನಿರ್ಲಕ್ಷ್ಯ ಮಾಡಿತ್ತು ಎಂದು ನೋಡಿದ್ದೇವೆ. ಒಲಿಂಪಿಕ್‌ನಲ್ಲಿ ಪದಕ ಗೆದ್ದಾಗ ಕರೆದು ಟೀ ಕೊಟ್ಟು ಫೋಟೋ ಶೂಟ್‌ ಮಾಡಿಕೊಂಡಿದ್ದ ಪ್ರಧಾನಿ ಮೋದಿ ಕುಸ್ತಿಪಟುಗಳ ನೋವನ್ನು ಆಲಿಸುವ ಅಥವಾ ಕನಿಷ್ಠ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಮಾಡಿಲ್ಲ. ಮಹಿಳಾ ಮಂತ್ರಿಗಳು ಅವರ ಮಾತುಗಳಿಗೆ ಕಿವಿಗೊಡುವ ಸೌಜನ್ಯವನ್ನೂ ತೋರಿಲ್ಲ.

ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ, ಬೆತ್ತಲೆ ಮೆರವಣಿಗೆ ವಿಡಿಯೋ ಹರಿದಾಡಿ ದೇಶದ ಮಾನ ವಿಶ್ವಮಟ್ಟದಲ್ಲಿ ಹರಾಜಾಗಿದೆ. ಆದರೂ ಡಬಲ್‌ ಎಂಜಿನ್‌ ಸರ್ಕಾರ ಮೌನ ಮುರಿಯಲಿಲ್ಲ. ಮೋದಿಜಿ ಇದುವರೆಗೂ ಮಣಿಪುರದ ಹೆಣ್ಣುಮಕ್ಕಳಿಗೆ ಸಾಂತ್ವನ ಹೇಳಿಲ್ಲ. ಅಚ್ಚರಿಯೆಂದರೆ ಮೊನ್ನೆ ನಡೆದ ಚುನಾವಣೆಯಲ್ಲಿ ಮಣಿಪುರದ ನಿರಾಶ್ರಿತ ಕುಕಿಗಳಿಗೆ ಆಶ್ರಯ ನೀಡಿದ್ದ ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡು ಬಿಜೆಪಿ ಅಧಿಕಾರ ಹಿಡಿದಿದೆ! ಅಪ್ಪಟ ದುರಾಡಳಿತಕ್ಕೂ ಜನ ಬೆಂಬಲ ಸಿಗುತ್ತಿದೆ.

ಈ ವರದಿಗಳು ನಮ್ಮ ಸರ್ಕಾರಗಳು, ರಾಜಕೀಯ ಪಕ್ಷಗಳು, ಮುಖಂಡರನ್ನು ಆತಂಕಕ್ಕೀಡು ಮಾಡಬೇಕು. ಕಾನೂನಿನ ಕುಣಿಕೆಯನ್ನು ಬಿಗಿ ಮಾಡಬೇಕು, ಸಮಾಜದ ಆತ್ಮಸಾಕ್ಷಿ ಎಚ್ಚೆತ್ತುಕೊಳ್ಳಬೇಕು. ಇಲ್ಲದೆ ಹೋದರೆ ಮಹಿಳೆಯರ ಮೇಲಿನ ಶೋಷಣೆಗೆ ಕೊನೆಯಿಲ್ಲ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ನಿರ್ಮಲಾ ಸೀತಾರಾಮನ್‌ ಮುಕ್ತಮನಸ್ಸಿನಿಂದ ಚರ್ಚೆಯಲ್ಲಿ ಭಾಗವಹಿಸುವರೇ ?

ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದ ಪ್ರಜ್ಞಾವಂತರು ಸಿದ್ದಪಡಿಸಿರುವ ವೇದಿಕೆಗೆ ಬಂದು ಮುಕ್ತ...

ಈ ದಿನ ಸಂಪಾದಕೀಯ | ಬರಗಾಲಕ್ಕೆ ಬರಲಿಲ್ಲ, ಪರಿಹಾರ ಕೊಡಲಿಲ್ಲ, ಓಡೋಡಿ ಬರುತ್ತಿದ್ದಾರೆ ಓಟಿಗಾಗಿ!

ರಾಜ್ಯ ಬರಗಾಲಕ್ಕೆ ತುತ್ತಾಗಿದೆ. ಸರ್ಕಾರ ಆರು ತಿಂಗಳಿನಿಂದ ಲೆಕ್ಕವಿಲ್ಲದಷ್ಟು ಮನವಿ ಮಾಡಿದೆ....

ಈ ದಿನ ಸಂಪಾದಕೀಯ | ಮೈತ್ರಿ ಕಷ್ಟ; ಅದೇ ಇಷ್ಟ ಎಂದದ್ದೇಕೆ ಕುಮಾರಸ್ವಾಮಿ?

ಕುಮಾರಸ್ವಾಮಿಯವರು ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅದು...