ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ವಿಚಾರಣೆಗೆ ಹಾಜರಾಗದೇ ದುಬೈಗೆ ಹೋಗಿ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳ ಸಹಾಯದಿಂದ ಬಂಧಿಸಲಾಗಿದೆ.
ಮಿಥುನ್ ಚಂದ್ರನ್ (31) ಬಂಧಿತ ಆರೋಪಿ. ಈತನ ಮೇಲೆ 2020ರಲ್ಲಿ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಬೆದರಿಕೆ ಸೇರಿದಂತೆ ನಾನಾ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆ, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಜಾಮೀನು ತೆಗೆದುಕೊಂಡು ಹೊರಬಂದ ಆರೋಪಿ ವಿಚಾರಣೆಗೆ ಹಾಜರಾಗದೇ ಬೆಂಗಳೂರು ತೊರೆದು ದುಬೈಗೆ ತೆರಳಿ ಅಲ್ಲಿಯೇ ನೆಲೆಸಿದ್ದನು.
ವಿಚಾರಣೆಗೆ ದೀರ್ಘಾವಧಿ ಗೈರು ಹಾಜರಾದ ಹಿನ್ನೆಲೆ, ಆತನ ಮೇಲೆ ಎಸಿಎಂಎಂ ನ್ಯಾಯಾಲಯವು ಬಂಧನ ವಾರೆಂಟ್ ಜಾರಿಗೊಳಿಸಿದೆ.
ಮಿಥುನ್ ಚಂದ್ರನ್ ಬಂಧನಕ್ಕೆ ಸಿದ್ಧರಾದ ಪೊಲೀಸರು ಆತ ದುಬೈನಲ್ಲಿ ನೆಲೆಸಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಸಿಬಿಐ ಇಂಟರ್‌ಪೋಲ್ ಮೂಲಕ ಆತನ ಮೇಲೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.
ದುಬೈ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಸಿಬಿಐ ಇಂಟರ್‌ಪೋಲ್ ಅಧಿಕಾರಿಗಳ ವಶಕ್ಕೆ ನೀಡಿದ್ದರು. ಬಳಿಕ ಮಹದೇವಪುರ ಇನ್‌ಸ್ಪೆಕ್ಟರ್ ಪ್ರವೀಣ್ ಬಾಬು ನೇತೃತ್ವದ ತಂಡ ದುಬೈಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿಗೆ ಆರೋಪಿಯನ್ನು ಗುರುವಾರ ಕರೆದುಕೊಂಡು ಬಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎರಡಂತಸ್ತಿನ ಕಟ್ಟಡ ಜತೆಗೆ ಧರೆಗುರುಳಿದ ಮೊಬೈಲ್ ಟವರ್
ಏನಿದು ಪ್ರಕರಣ?
ಮಿಥುನ್ ಚಂದ್ರನ್ ಮೂಲತಃ ಕೇರಳದವನು. ಈತ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಯುವತಿಯ ಜತೆಗೆ ಸ್ನೇಹ ಬೆಳೆದಿದೆ. ಬಳಿಕ ಇಬ್ಬರು ಪ್ರೀತಿ ಮಾಡಲು ಆರಂಭಿಸಿದ್ದಾರೆ.
ಬಳಿಕ ಇಬ್ಬರು ಲಿವಿಂಗ್ ಟುಗೆದರ್ ನಲ್ಲಿ ನೆಲೆಸಿದ್ದರು. ಮಿಥುನ್ ಚಂದ್ರನ್ ಯುವತಿಯನ್ನು ಮದುವೆಯಾಗಲು ಹಿಂದೇಟು ಹಾಕಿದ್ದನು. ಕ್ರಮೇಣ ಇಬ್ಬರು ಜಗಳ ಮಾಡಿಕೊಂಡು ದೂರವಾಗಿದ್ದರು. ಇದರಿಂದ ಸಂತ್ರಸ್ತೆ 2020ರ ಫೆಬ್ರವರಿ 1 ರಂದು ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಪ್ರಕರಣದಡಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಮಿಥುನ್ ಚಂದ್ರನ್‌ನನ್ನು ಬಂಧಿಸಿದ್ದರು.