ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಜಾಗೃತಿ ಕಾರ್ಯಕ್ರಮ ನಿಮಿತ್ತ ಧಾರವಾಡ ಜಿಲ್ಲಾಡಳಿತ ಆವರಣದಲ್ಲಿ ಸ್ಥಾಪಿಸಿರುವ ಮತದಾನ ಪ್ರಾತ್ಯಕ್ಷಿಕ ಕೇಂದ್ರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಉದ್ಘಾಟಿಸಿದರು.
ಮತದಾರರಿಗೆ ವಿದ್ಯುನ್ಮಾನ ಮತಯಂತ್ರಗಳ ಹಾಗೂ ಮತದಾನ ಕುರಿತು ಅರಿವು ಮೂಡಿಸಲು ಜಿಲ್ಲಾಡಳಿತ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಪಾಲಿಕೆ ಆವರಣದಲ್ಲಿ ಮತದಾನ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮತದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಕರೆ ನೀಡಿದ್ದಾರೆ.
ಇವಿಎಮ್‍ಗಳು ಸತ್ಯದ ಕನ್ನಡಿ ಇದ್ದ ಹಾಗೆ. ಯಾವುದೇ ರೀತಿಯಲ್ಲಿ ತಿರುಚಲು ಸಾಧ್ಯವಿಲ್ಲ. ಮತದಾರರು ತಾವು ಹಾಕಿದ ಮತವನ್ನು ಖಾತರಿ ಪಡಿಸಿಕೊಳ್ಳಬಹುದಾಗಿದೆಯೆಂದರು.
ಜಿಲ್ಲೆಯ 1,652ಮತದಾನ ಕೇಂದ್ರಗಳಲ್ಲಿ 142ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಿ, ಅವರಿಂದ ಇವಿಎಂ ಪ್ರಾತ್ಯಕ್ಷಿಕೆ ಮಾಡಲಾಗುತ್ತದೆ. ಬಹಳಷ್ಟು ಜನರು ಸೇರುವ ಸ್ಥಳಗಳಲ್ಲಿ ಮೊಬೈಲ್ ವಾಹನ ಮುಖಾಂತರವು ಸಹ ಪ್ರಾತ್ಯಕ್ಷಿಕೆ ಹಾಗೂ ಅರಿವು ಮೂಡಿಸಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಮತ್ತು ಚುನಾವಣಾ ಸಿಬ್ಬಂದಿ ಉಪಸ್ಥಿತರಿದ್ದರು.