ತೆಲಂಗಾಣ | ಅಂದು ಗನ್ ಹಿಡಿದಿದ್ದ ನಕ್ಸಲೈಟ್, ಇಂದು ಕ್ಯಾಬಿನೆಟ್ ಮಿನಿಸ್ಟರ್; ಸೀತಕ್ಕನ ರೋಚಕ ಪಯಣ

Date:

Advertisements

ಆದಿವಾಸಿ ಸಮುದಾಯದಲ್ಲಿ ಹುಟ್ಟಿ, ಹೈಸ್ಕೂಲ್‌ನಲ್ಲಿದ್ದಾಗಲೇ ಗನ್ ಹಿಡಿದು ನಕ್ಸಲ್ ಆಗಿದ್ದ ಸೀತಕ್ಕ, ಅದೇ ಹಾದಿಯಲ್ಲಿ ತನ್ನ ಗಂಡ ಮತ್ತು ಸಹೋದರನನ್ನು ಕಳೆದುಕೊಂಡರು. ಒಂದೂವರೆ ದಶಕ ಕಾಲ ಮಾವೋಯಿಸ್ಟ್ ಆಗಿ ಇವರು ಚಳವಳಿಯಲ್ಲಿ ಅಪಾರ ಕಷ್ಟ ನಷ್ಟ ನೋವು ಸಂಕಟ ಅನುಭವಿಸಿದರು. ರಾಜಕೀಯಕ್ಕೆ ಬಂದ ಮೇಲೂ ತೀವ್ರ ವಿರೋಧಗಳನ್ನು ಎದುರಿಸಿದರು. ಹಲವು ಸೋಲು ಕಂಡರು. ಇವರು ಈಗ ತನ್ನ ರಾಖಿ ಬ್ರದರ್ ರೇವಂತ್ ರೆಡ್ಡಿ ಸಂಪುಟದಲ್ಲಿ ಸಚಿವೆಯಾಗಿದ್ದಾರೆ.

1996ರ ಏಪ್ರಿಲ್‌ನಲ್ಲಿ ತೆಲಂಗಾಣದ ವಾರಂಗಲ್‌ನಲ್ಲಿ ಪೊಲೀಸರು ನಕ್ಸಲ್ ಗುಂಪೊಂದರ ಬೆನ್ನು ಹತ್ತಿದ್ದರು. ಅವತ್ತು ಪೊಲೀಸ್-ನಕ್ಸಲ್ ಮುಖಾಮುಖಿಯಲ್ಲಿ ಇನ್ನೇನು ಕೈಗೆ ಸಿಕ್ಕೇಬಿಟ್ಟರು ಎನ್ನುವಂತಿದ್ದ ನಕ್ಸಲರು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದರು. ಅವತ್ತು ಆ ನಕ್ಸಲ್ ಗುಂಪಿನ ನೇತೃತ್ವ ವಹಿಸಿದ್ದವರು ಸೀತಕ್ಕ.

27 ವರ್ಷಗಳ ನಂತರ, ಅದೇ ಸೀತಕ್ಕ, ಇಂದು ತೆಲಂಗಾಣದ ಸಂಪುಟ ದರ್ಜೆಯ ಮಂತ್ರಿ, ಮೊನ್ನೆ ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಸೀತಕ್ಕನ ಹೆಸರು ಕೂಗಿದಾಗ ನೆರೆದಿದ್ದ ಜನಸ್ತೋಮದಲ್ಲಿ ಕೇಕೆ, ಚಪ್ಪಾಳೆ, ಹರ್ಷೋದ್ಗಾರಗಳು ಮುಗಿಲು ಮುಟ್ಟಿದ್ದವು. ಸೀತಕ್ಕನ ಜನಪ್ರಿಯತೆಯನ್ನು ಕಂಡು ನಗುತ್ತಲೇ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಗದ್ದಲದ ನಡುವೆಯೆ ಪ್ರಮಾಣ ವಚನ ಬೋಧಿಸಿದರು. ಸೀತಕ್ಕ ತಮ್ಮ ಸ್ಫಟಿಕದಂಥ ನುಡಿಯಲ್ಲಿ ನಿರರ್ಗಳವಾಗಿ ಪ್ರತಿಜ್ಞಾ ವಿಧಿ ಓದಿದರು. ಮೂರು ಬಾರಿಯ ಎಂಎಲ್‌ಎ, 52 ವರ್ಷದ ಸೀತಕ್ಕ ತೆಲಂಗಾಣದ ಪಂಚಾಯತ್‌ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವೆಯಾದರು.

Advertisements

ಸೀತಕ್ಕ ತೆಲಂಗಾಣ ಗಡಿಭಾಗದ ಮುಲುಗು ಕ್ಷೇತ್ರದ ಶಾಸಕಿ. ಇವರು ಕೋಯಾ ಆದಿವಾಸಿ ಸಮುದಾಯಕ್ಕೆ ಸೇರಿದವರು. ಕೋಯಾ ಆದಿವಾಸಿಗಳ ಮೂಲ ನೆಲೆ ಛತ್ತೀಸಗಢ. ಬದುಕು ನಡೆಸಲು ಮತ್ತು ದಶಕಗಳ ಹಿಂದೆ ಛತ್ತೀಸಗಢದಲ್ಲಿ ನಕ್ಸಲರು ಮತ್ತು ಸರ್ಕಾರಿ ಬೆಂಬಲಿತ ಮಿಲಿಟೆಂಟ್ ಸಂಘಟನೆಯಾದ ಸಲ್ವಾಂ ಜುಡುಂ ನಡುವೆ ಸಂಘರ್ಷ ತೀವ್ರಗೊಂಡಾಗ ಸಾವಿರಾರು ಕೋಯಾ ಆದಿವಾಸಿ ಕುಟುಂಬಗಳು ನೆರೆಯ ತೆಲಂಗಾಣಕ್ಕೆ ವಲಸೆ ಬಂದವು. ಹಾಗೆ ಬಂದ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದವರು ಸೀತಕ್ಕ. ಹೆತ್ತವರು ಈಕೆಗೆ ಇಟ್ಟ ಹೆಸರು ದನಸರಿ ಅನಸೂಯ.

ಸೀತಕ್ಕ

ಅನಕ್ಷರತೆ, ಬಡತನ ಬೆನ್ನಿಗಂಟಿಸಿಕೊಂಡು ಬದುಕುವವರು ಕೋಯಾಗಳು. ಅಂಥ ಕುಟುಂಬದಲ್ಲಿ ಹುಟ್ಟಿದ ಕಾರಣಕ್ಕೋ ಏನೋ, ಅನಸೂಯಗೆ ಚಿಕ್ಕಂದಿನಿಂದಲೇ ಅನ್ಯಾಯ, ಶೋಷಣೆ, ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸುವ ಸ್ವಭಾವ ಮೈಗೂಡಿತ್ತು. ಮನೆಯಲ್ಲಿ ಅನುಕೂಲ ಇಲ್ಲದೇ ಇದ್ದಾಗ ಹಾಸ್ಟೆಲ್ ಸೇರಿ ವಿದ್ಯಾಭ್ಯಾಸ ಮುಂದುವರೆಸಿದ್ದರು ಅನಸೂಯ. ಹಾಸ್ಟೆಲ್‌ ಮೇಲೆ ಕಳ್ಳರು, ಪುಂಡರು ದಾಳಿ ಮಾಡಿದರೆ, ಅವರನ್ನು ಸದೆಬಡಿಯುವುದು, ಊಟ ಸರಿಯಿಲ್ಲದೇ ಇದ್ದಾಗ ಪ್ರತಿಭಟನೆ ಮಾಡುವುದು, 1986ರಲ್ಲಿ ತೆಲಂಗಾಣದಲ್ಲಿ ಭೀಕರ ಪ್ರವಾಹ ಬಂದಾಗ ಅದಕ್ಕಾಗಿ ವಂತಿಗೆ ಸಂಗ್ರಹಿಸುವುದು ಮುಂತಾದ ಚಟುವಟಿಕೆಗಳಲ್ಲಿ ಅನಸೂಯ ಮುಂದಾಳತ್ವ ವಹಿಸಿದ್ದರು.

ಆಗ ತೆಲಂಗಾಣದ ಹಳ್ಳಿಗಳಲ್ಲಿ ನಕ್ಸಲ್‌ಗಳ ಓಡಾಟ ಕಾಮನ್ ಆಗಿಬಿಟ್ಟಿತ್ತು. ಸಹಜವಾಗಿಯೇ ಅದರ ಪ್ರಭಾವ ಅನಸೂಯ ಮೇಲಾಯಿತು. ಅಷ್ಟೊತ್ತಿಗಾಗಲೇ ಇವರ ಸೋದರ ಮಾವ ರಾಮು ಕೂಡ ನಕ್ಸಲ್ ಚಳವಳಿ ಸೇರಿದ್ದರು. ಅವರ ಒತ್ತಾಸೆ ಮೇರೆಗೆ ಅನಸೂಯ ಕೂಡ 1988ರಲ್ಲಿ ಗನ್ ಕೈಗೆತ್ತಿಕೊಂಡು ನಕ್ಸಲ್ ಚಳವಳಿ ಪ್ರವೇಶಿಸಿದರು. ಆಗಿನ್ನೂ ಇವರು ಹೈಸ್ಕೂಲು ಓದುತ್ತಿದ್ದರು. ಹಳ್ಳಿಗಳಲ್ಲಿ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಯ ವಿದ್ಯೆಗಳನ್ನು ಹೇಳಿಕೊಡುವುದು, ಭೂಮಾಲೀಕರ ದೌರ್ಜನ್ಯಗಳ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದು, ರಾತ್ರಿ ಹಗಲೆನ್ನದೆ ಕಾಡು ಮೇಡು ಹಳ್ಳಿ ಅಲೆಯುವುದು… ಹೀಗೆ ಶೋಷಣೆಯ ವಿರುದ್ಧ ಹೋರಾಡುತ್ತಾ, ಜನರ ಪಾಲಿಗೆ ನೆಚ್ಚಿನ ಸೀತಕ್ಕನಾಗಿ ಬದಲಾದರು. ಒಮ್ಮೆಯಂತೂ ಬಡ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಗಂಡಸೊಬ್ಬನ ಪುರುಷಾಂಗವನ್ನೇ ಕತ್ತರಿಸಿದ್ದರು.

ಸೀತಕ್ಕ

ನಕ್ಸಲ್ ಆಗಿ ಭೂಗತರಾಗಿದ್ದಾಗಲೇ ಅವರು ತನ್ನ ಸೋದರ ಮಾವ ರಾಮುವನ್ನು ವಿವಾಹವಾದರು. ಗರ್ಭಿಣಿಯಾಗಿದ್ದಾಗ ಅನಸೂಯ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಜೈಲಿನಲ್ಲಿದ್ದಾಗ ಹತ್ತನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣರಾದ ಇವರು, ಜೈಲಿನಿಂದ ಹೊರಬರುತ್ತಲೇ ತನ್ನ ಮೂರು ತಿಂಗಳ ಮಗನನ್ನು ಬಂಧುಗಳಿಗೊಪ್ಪಿಸಿ ಮತ್ತೆ ಗನ್ ಹಿಡಿದು ಕಾಡು ಸೇರಿದರು. ಹೀಗೆ ಸುಮಾರು 15 ವರ್ಷ ಭೂಗತರಾಗಿಯೇ ಉಳಿದ ಸೀತಕ್ಕನಿಗೆ ಒಂದು ಹಂತಕ್ಕೆ ನಕ್ಸಲ್ ಚಳವಳಿ ಬಗ್ಗೆ ಭ್ರಮನಿರಸನ ಉಂಟಾಯಿತು. ಪಕ್ಷವು ಹಲವು ಗುಂಪುಗಳಾಗಿ ಒಡೆದಿದ್ದು ಸೀತಕ್ಕನ ನಿರಾಶೆಗೆ ಕಾರಣವಾಗಿತ್ತು. ಅಷ್ಟೊತ್ತಿಗೆ ಗಂಡನಿಂದ ದೂರವಾಗಿದ್ದ ಇವರು ಕಾಡು ತೊರೆದು ನ್ಯಾಯಾಧೀಶರ ಮುಂದೆ ಶರಣಾಗುವ ಮೂಲಕ ಮುಖ್ಯವಾಹಿನಿಗೆ ವಾಪಸ್ ಆದರು.

ಹಾಗೆ ಬಂದವರು ಒಂದು ಸರ್ಕಾರೇತರ ಸಂಸ್ಥೆಯಲ್ಲಿ ಸೇರಿಕೊಂಡು ಕೆಲಸ ಮಾಡತೊಡಗಿದರು. ಜೊತೆಗೆ ತನ್ನ ವಿದ್ಯಾಭ್ಯಾಸ ಮುಂದುವರೆಸಿ, ಕಾನೂನು ಪದವಿ ಪಡೆದರು. ವರಂಗಲ್‌ನ ಕೋರ್ಟ್‌ನಲ್ಲಿ ವಕೀಲಿಕೆಯನ್ನೂ ಆರಂಭಿಸಿದರು.

ಸೀತಕ್ಕ

ಅದಾದ ನಂತರ ರಾಜಕೀಯಕ್ಕೂ ಬಂದ ಇವರು, 2004ರಲ್ಲಿ ಮೊದಲ ಬಾರಿಗೆ ತೆಲುಗು ದೇಶಂ ಪಕ್ಷದಿಂದ ಚುನಾವಣೆಗೆ ಮುಲುಗು ಕ್ಷೇತ್ರದಲ್ಲಿ ಸ್ಪರ್ಧಿಸಿದರು. ಮೊದಲ ಚುನಾವಣೆಯಲ್ಲಿ ಸೋತರೂ, 2009ರ ಚುನಾವಣೆಯಲ್ಲಿ ಗೆದ್ದರು. ಮತ್ತೆ 2013ರಲ್ಲಿ ಸೋತ ಇವರು, 2017ರಲ್ಲಿ ಟಿಡಿಪಿ ಬಿಟ್ಟು ರೇವಂತ್ ರೆಡ್ಡಿ ಜೊತೆ ಕಾಂಗ್ರೆಸ್‌ ಸೇರಿದರು. 2018ರ ಚುನಾವಣೆಯಲ್ಲಿ ಮತ್ತೆ ಮುಲುಗು ಕ್ಷೇತ್ರದಿಂದ ಗೆದ್ದರು.

ಸೀತಕ್ಕ ತೆಲಂಗಾಣದಾದ್ಯಂತ ಜನಪ್ರಿಯರಾಗಿದ್ದು ಕೋವಿಡ್ ಕಾಲದಲ್ಲಿ. ಲಾಕ್‌ಡೌನ್‌ನ ಸಂಕಷ್ಟದ ಸ್ಥಿತಿಯಲ್ಲಿ ಕುಗ್ರಾಮಗಳನ್ನೂ ತಲುಪುವ ಮೂಲಕ ಇವರು ಕೈಗೊಂಡ ಜನಹಿತದ ಕೆಲಸಗಳು ವ್ಯಾಪಕ ಪ್ರಚಾರ ಪಡೆದವು. ಕಾಡಿನೊಳಗಿರುವ, ದೂರದ ಊರುಗಳಿಗೆ ನಡೆದೇ ಸಾಗುತ್ತಿದ್ದ ಶಾಸಕಿ ಸೀತಕ್ಕ, ಅಗತ್ಯ ವಸ್ತುಗಳನ್ನು ತನ್ನ ಬೆನ್ನ ಮೇಲೆ ಹೊತ್ತು ಮೈಲುಗಟ್ಟಲೇ ನಡೆದರು. ಅವನ್ನು ಜನರಿಗೆ ಮುಟ್ಟಿಸಿದರು. ತಾನು ಮಾವೋವಾದಿಯಾಗಿದ್ದಾಗ ಗನ್ ಹಿಡಿದು ಯಾವ ಕಾಡಿನಲ್ಲಿ ಭೂಗತ ಚಟುವಟಿಕೆಗಳನ್ನು ನಡೆಸಿದ್ದರೋ ಶಾಸಕಿಯಾದ ನಂತರ ಅದೇ ಕಾಡಿನಲ್ಲಿ ಸಂಚರಿಸಿ ಜನರಿಗೆ ಅಗತ್ಯ ಸಾಮಗ್ರಿ ಮುಟ್ಟಿಸಿದ್ದರು.

ವಕೀಲಿಕೆ ಮಾಡುತ್ತಿದ್ದಾಗಲೂ, ರಾಜಕೀಯ ಸೇರಿದ ಮೇಲೂ ತನ್ನ ಅಧ್ಯಯನ ಮುಂದುವರೆಸಿದ ಸೀತಕ್ಕ, ಕೋಯಾ ಆದಿವಾಸಿಗಳ ರಾಜಕೀಯ ಒಳಗೊಳ್ಳುವಿಕೆಯ ಬಗ್ಗೆ ಉನ್ನತ ಅಧ್ಯಯನ ಮಾಡಿ, ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಪಿಎಚ್‌ಡಿ ಪೂರೈಸಿ ಡಾ. ಅನಸೂಯ ಆದರು.

ಆಗ ಸೀತಕ್ಕ ಹೇಳಿದ್ದ ಮಾತೊಂದು ಇವರ ಬದುಕಿಗೆ ಬರೆದ ಭಾಷ್ಯದಂತಿತ್ತು:

‘ನನ್ನ ಬಾಲ್ಯದಲ್ಲಿ ನಾನು ನಕ್ಸಲೈಟ್ ಆಗುತ್ತೇನೆ ಎಂದುಕೊಂಡಿರಲಿಲ್ಲ. ನಕ್ಸಲೈಟ್ ಆಗಿದ್ದಾಗ ನಾನೆಂದೂ ವಕೀಲೆಯಾಗುತ್ತಾನೆ ಅಂದುಕೊಂಡಿರಲಿಲ್ಲ. ವಕೀಲೆಯಾದ ಮೇಲೆ ನಾನು ಶಾಸಕಿಯಾಗುತ್ತೇನೆ ಎಂದು ಯಾವತ್ತೂ ಕನಸಿರಲಿಲ್ಲ. ಎಂಎಲ್‌ಎ ಆದ ನಂತರ ಪಿಎಚ್‌ಡಿ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಈಗ ನೀವು ನನ್ನನ್ನು ಡಾ. ಅನಸೂಯ ಸೀತಕ್ಕ ಎಂದು ಕರೆಯಬಹುದು.’

ಈ ಸುದ್ದಿ ಓದಿದ್ದೀರಾ: ತೆಲಂಗಾಣ: ಎಬಿವಿಪಿಯಿಂದ ಫೈರ್ ಬ್ರಾಂಡ್ ನಾಯಕನವರೆಗೆ; ರೇವಂತ್ ರೆಡ್ಡಿ ನಡೆದುಬಂದ ಹಾದಿ

ಸೀತಕ್ಕ ನಕ್ಸಲ್‌ಗಳಾಗಿದ್ದ ತನ್ನ ಗಂಡ ಮತ್ತು ಸಹೋದರನನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಕಳೆದುಕೊಂಡರು. ಒಂದೂವರೆ ದಶಕ ಕಾಲ ಮಾವೋಯಿಸ್ಟ್ ಆಗಿ ಇವರು ಚಳವಳಿಯಲ್ಲಿ ಅಪಾರ ಕಷ್ಟ ನಷ್ಟ ನೋವು ಸಂಕಟ ಅನುಭವಿಸಿದರು. ರಾಜಕೀಯಕ್ಕೆ ಬಂದ ಮೇಲೂ ತೀವ್ರ ವಿರೋಧಗಳನ್ನು ಎದುರಿಸಿದರು.

ಸೀತಕ್ಕ

ಇವರು ಈಗ ತನ್ನ ರಾಖಿ ಬ್ರದರ್ ರೇವಂತ್ ರೆಡ್ಡಿ ಸಂಪುಟದಲ್ಲಿ ಸಚಿವೆಯಾಗಿದ್ದಾರೆ. ಕೆಸಿಆರ್ ಇವರನ್ನು ಸೋಲಿಸಲು 200 ಕೋಟಿ ರೂಪಾಯಿ ಖರ್ಚು ಮಾಡಿದ್ದರಂತೆ. ಆದರೆ, ಜನರ ಪ್ರೀತಿ ಇರುವವರೆಗೂ ಯಾರು ಎಷ್ಟು ಖರ್ಚು ಮಾಡಿದರೂ ತನ್ನನ್ನು ಸೋಲಿಸಲಾಗದು ಎನ್ನುವುದು ಇವರ ದಿಟ್ಟ ನುಡಿ. ನನ್ನ ಕೊನೆಯ ಉಸಿರಿರುವವರೆಗೂ ನಾನು ಜನರ ಕೆಲಸಗಳನ್ನು ಮಾಡುತ್ತೇನೆ ಎಂದು ಶಪಥ ತೊಟ್ಟಿರುವ ಸೀತಕ್ಕ, ತೆಲಂಗಾಣ ಕಾಂಗ್ರೆಸ್‌ನ ಮುಂದಿನ ಸಿಎಂ ಮೆಟೀರಿಯಲ್ ಕೂಡ ಹೌದು. ಇದು ಪ್ರಜಾಪ್ರಭುತ್ವದ ವಿಸ್ಮಯ ಮತ್ತು ಸೌಂದರ್ಯ.

ಸೀತಕ್ಕನ ಮಗ ಸೂರ್ಯ ಈಗ ಅಮ್ಮನೊಂದಿಗೇ ಇದ್ದಾನೆ. ಎಂಟೆಕ್ ಮಾಡಿರುವ ಆತ ಕೂಡ ಅಮ್ಮನ ಜೊತೆ ಚುನಾವಣೆ, ರಾಜಕೀಯ ಕೆಲಸಗಳಲ್ಲಿ ತೊಡಗಿಕೊಂಡಿದ್ದಾನೆ.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಚೇತೊಹಾರಿ ಮತ್ತು ಸ್ಪೂರ್ತಿದಾಯಕ. ಈ ಹೆಣ್ಣುಮಗಳ ಜೀವನದ ಗಟನೆಗಳು ವಿವರವಾಗಿ ಪರಿಚಯಿಸಿದ್ದಾಗಿ ಧನ್ಯವಾದಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X