ಚಿತ್ರರಂಗ ಇರುವವರೆಗೆ ಮರೆಯಲು ಸಾಧ್ಯವಾಗದ ಮಟ್ಟಿಗೆ ಲೀಲಾವತಿ ನಮ್ಮ ಪ್ರಜ್ಞೆ, ಮನಸ್ಸುಗಳನ್ನು ಆವರಿಸಿದ್ದಾರೆ. ಅವರು ಈಗಿಲ್ಲ. ಈಗೇನಿದ್ದರೂ ಅವರ ಸಾಧನೆಗಳು ಮುನ್ನೆಲೆಗೆ ಬರುವ ಸಮಯ. ಅವರಿಗೆ ಹನಿ ಕಣ್ಣೀರು, ಕೃತಜ್ಞತಾಪೂರ್ವಕ ನಮನ.
ಸುಮಾರು ಹತ್ತು ವರ್ಷಗಳ ಹಿಂದೆ ಲೀಲಾವತಿಯವರು ಕೆಲ ಕಾಲ ರೆಗ್ಯುಲರ್ ಆಗಿ ಬೆಂಗಳೂರು ಪ್ರೆಸ್ ಕ್ಲಬ್‍ಗೆ ಬರುತ್ತಿದ್ದರು. ಮಗ ವಿನೋದ್‍ರಾಜ್, ಜೊತೆಯಲ್ಲೊಂದು ಬಲವಾದ ನಾಯಿ ಹಿಡಿದುಕೊಂಡು ಊಟದ ಸಮಯಕ್ಕೆ ಹಾಜರಾಗುತ್ತಿದ್ದರು. ಸಾಮಾನ್ಯವಾಗಿ ರಿಸೆಪ್ಷನ್ ಕೌಂಟರ್ ಎದುರಿನ ಓಪನ್ ಹಾಲ್‍ನಲ್ಲಿ ಅವರದೇ ಒಂದು ಜಾಗ. ಆ ಜಾಗಕ್ಕೆ ನಾವು ತಮಾಷೆಯಾಗಿ ‘ಲೀಲಾ ಪ್ಯಾಲೇಸ್’ ಎಂದು ನಾಮಕರಣ ಮಾಡಿದ್ದೆವು! ಆ ಲೀಲಾ ಪ್ಯಾಲೇಸಿನಲ್ಲಿ ಅವರು ಹಲವು ಗಂಟೆಗಳು ಸಾವಕಾಶವಾಗಿ ಕಳೆದು, ಊಟ ಮುಗಿಸಿಕೊಂಡು, ತಮ್ಮನ್ನು ಮಾತನಾಡಿಸಿದವರಿಗೆ ನಸುನಗುತ್ತ ಸಂಕ್ಷಿಪ್ತ ಉತ್ತರ ಕೊಟ್ಟು ಮತ್ತೆ ಹೊರಡುತ್ತಿದ್ದರು. ಇದು ಹೆಚ್ಚೂಕಮ್ಮಿ ನಿತ್ಯದ ವಿದ್ಯಮಾನ.
ಇವರು ಪ್ರೆಸ್ ಕ್ಲಬ್ಬಿನ ಈ ಸಾಧಾರಣ ಊಟದಲ್ಲಿ ಅದೇನು ವಿಶೇಷ ಕಂಡು ಇಲ್ಲಿಗೆ ಹೀಗೆ ಬರುತ್ತಾರೆ, ಪಾಪ ಎಂಥ ಖೊಟ್ಟಿ ನಸೀಬು ಇವರದು ಎಂದು ನಾವು ಲೊಚಗುಟ್ಟುತ್ತಿದ್ದೆವು. ಅವರು ಮೆಟ್ಟಿಲಿಳಿದು ನಿಧಾನವಾಗಿ ಪ್ರೆಸ್ ಕ್ಲಬ್‍ನಿಂದ ಹೊರಡುವುದನ್ನೇ ನೋಡುವಾಗ ನಮಗೆ ಕ್ಲಬ್ಬಿನ ಸರ್ವೇಸಾಧಾರಣ ಆಹಾರದ ಕಾರಣಕ್ಕೇ ‘ಪಾಪದ ಸಂತ್ರಸ್ತೆ’ಯಾಗಿ ಕಾಣುತ್ತಿದ್ದರು! ಹಾಗೆ ನೋಡಿದರೆ ಕನ್ನಡ ಚಿತ್ರರಂಗದ ಆ ಕಾಲದ ಬಹುತೇಕ ಮಹಾನಾಯಕಿಯರು ಸಂತ್ರಸ್ತೆಯರಾಗಿಯೇ ಜೀವನ ಕಳೆದಂತೆ ಕಾಣುತ್ತದೆ. ಮಿನುಗುತಾರೆ ಕಲ್ಪನಾ, ಮಂಜುಳಾ, ಅಭಿನಯ ಶಾರದೆ ಜಯಂತಿ… ತೆರೆಯ ಮೇಲೆ ತಲೆಮಾರುಗಳನ್ನೇ ಆಳಿದ ಈ ನಾಯಕಿಯರು ಜೀವನದ ಅಸಾಧಾರಣ ಏಳುಬೀಳುಗಳಲ್ಲಿ ನಜ್ಜುಗುಜ್ಜಾಗಿ ದುರಂತಮಯ ಪಾಡು ಕಂಡವರೇ. ಹಾಗೆ ನೋಡಿದರೆ ಪಂಡರೀಬಾಯಿಯವರೇ ತುಸು ವಾಸಿ.
ಚಿಕ್ಕವಯಸ್ಸಿನಲ್ಲೇ ತಂದೆ ತಾಯಿ ಕಳೆದುಕೊಂಡು ಅನಾಥೆಯಾದ ಲೀಲಾವತಿಯವರು ಮೂಲತಃ ದಕ್ಷಿಣ ಕನ್ನಡದವರು. ಹುಟ್ಟಿದ್ದು ಲೀಲಾ ಕಿರಣ್ ಆಗಿ- ಬೆಳ್ತಂಗಡಿಯಲ್ಲಿ. ಅಲ್ಲಿಂದ ಬದುಕು ಅರಸಿ ಅವರು ಮೈಸೂರಿಗೆ ಬಂದು ಮಹಾಲಿಂಗ ಭಾಗವತರು ಮತ್ತು ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಸೇರಿಕೊಂಡರು. ಲೀಲಾವತಿಯವರಿಗೆ ಮದುವೆ ಆಗಿದೆಯೇ? ಅವರ ಮಗ ವಿನೋದ್ ರಾಜ್‍ರ ನಿಜವಾದ ತಂದೆ ಯಾರು?- ಇಂಥ ಪ್ರಶ್ನೆಗಳು ದಶಕಗಳ ಕಾಲ ಕನ್ನಡ ಸಿನಿರಸಿಕರ ಮುಂದಿನ ರಸಪ್ರಶ್ನೆಗಳಾಗಿವೆ. ಮತ್ತೊಬ್ಬರ ಜೀವನವನ್ನು ಜಗಿದು ಚಪ್ಪರಿಸುವ ನಮ್ಮೆಲ್ಲರ ಅಗ್ಗದ ರಸಿಕತೆಗೆ ಕವಳವಾಗಿ ಒದಗಿಬಂದಿವೆ, ಇರಲಿ.

ಈಗಾಗಲೇ ಬಹಳಷ್ಟು ಜನಕ್ಕೆ ಗೊತ್ತು- ಲೀಲಾವತಿಯವರ ಪತಿ- ಇದೇ ಮಹಾಲಿಂಗ ಭಾಗವತರು. ನಾಟಕಗಳಲ್ಲಷ್ಟೇ ಅಲ್ಲದೆ ಸಿನಿಮಾಗಳಲ್ಲೂ ಅಭಿನಯಿಸಿದವರು. ಇವರೇ ವಿನೋದ್ ರಾಜ್‍ರ ತಂದೆಯೆಂದು ಸ್ವತಃ ಡಾ. ರಾಜ್ ಆಪ್ತರ ಮುಂದೆ ಹೇಳಿಕೊಂಡಿದ್ದಿದೆ. ಆದರೆ ಈ ವಿಷಯ ಕನ್ನಡ ಬೆಳ್ಳಿಪರದೆಯ ನಿಗೂಢಗಳಲ್ಲೊಂದಾಗಿಯೇ ಉಳಿದುಕೊಂಡಿದೆ. ಲೀಲಾವತಿ ಎಂದೊಡನೆ ಡಾ. ರಾಜಕುಮಾರ್, ವಿನೋದ್ ರಾಜ್ ಎಂಬ ಹೆಸರುಗಳನ್ನೆತ್ತಿಕೊಂಡು ಅಸಭ್ಯ ಊಹೆಗಳಲ್ಲಿ ತೊಡಗುವವರನ್ನು ಸ್ವತಃ ಲೀಲಾವತಿಯವರು ಎಂದೂ ತಡೆಯಲಿಲ್ಲ! ಅಷ್ಟೇಕೆ, ಅವರೇ ಉದ್ದಕ್ಕೂ ಆ ಗುಮಾನಿ, ವದಂತಿಗಳಿಗೆ ಗಾಳಿ ಹಾಕುತ್ತ ಹೋದರು.
ರಾಜ್ ತೀರಿಕೊಂಡಾಗ ಇವರು ಮತ್ತು ವಿನೋದ್‍ರಾಜ್ ಇಬ್ಬರೂ ತಲೆ ಬೋಳಿಸಿಕೊಂಡು ಪ್ರತ್ಯಕ್ಷರಾದ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ… ಒಟ್ಟಿನಲ್ಲಿ ಕನ್ನಡ ಚಿತ್ರರಸಿಕರನ್ನು ದಶಕಗಳ ಕಾಲ ತಮ್ಮ ಸಾಂಪ್ರದಾಯಿಕ ಚೆಲುವು ಮತ್ತು ಅಭಿನಯ ಪ್ರತಿಭೆಗಳಿಂದ ರಂಜಿಸಿದ ಲೀಲಾವತಿ, ನಿರಂತರವಾಗಿ ಅನ್ಯಾಯಕ್ಕೊಳಗಾದ ಹೆಣ್ಣಿನ ಹಾಗೆ ಕಾಣಿಸಿಕೊಂಡರು; ಮತ್ತು ಅದು ಬಹುಶಃ ಉದ್ದೇಶಪೂರ್ವಕವೇ ಇರಬೇಕು!
ಆಗಲಿ, ಅದನ್ನು ಕೂಡ ತಪ್ಪು ಎಂಬ ತೀರ್ಮಾನಕ್ಕೆ ಬರುವುದು ಅಷ್ಟು ಸರಿಯಲ್ಲವೇನೋ. ಹೆಣ್ಣುಮಕ್ಕಳು ಚಿತ್ರರಂಗಕ್ಕೆ ಬರಲು ಹಿಂಜರಿಯುತ್ತಿದ್ದ ಕಾಲದಲ್ಲಿ ಕಾಲಿಟ್ಟು, ಆ ಗಂಡು ಸಾಮ್ರಾಜ್ಯದ ಒತ್ತಡಗಳನ್ನು ನಿಭಾಯಿಸುತ್ತ, ಒಬ್ಬಂಟಿಯಾಗಿ ನಿಂತು ಚಿತ್ರರಂಗದ ಇತಿಹಾಸದಲ್ಲಿ ತಮ್ಮದೇ ಒಂದು ಶಾಶ್ವತ ಸ್ಥಾನ ರೂಢಿಸಿಕೊಂಡ ಲೀಲಾವತಿ ಎಂಬ ಛಲಗಾತಿಯ ಅಸಾಧಾರಣ ಸ್ಥೈರ್ಯ, ಪ್ರತಿಭೆಗಳನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಬಣ್ಣದ ಲೋಕ ಸೃಷ್ಟಿಸುವ ಸುಳ್ಳುಗಳ ಮಾಯಾಲೋಕದಲ್ಲಿ ದಿಕ್ಕೆಡದಂತೆ, ಭ್ರಮೆ ವಾಸ್ತವಗಳ ನಡುವೆ ಎಚ್ಚರ ತಪ್ಪದಂತೆ ಆಕೆ ಬದುಕು ರೂಪಿಸಿಕೊಂಡಿದ್ದು ಸಹ ಸಣ್ಣ ಮಾತಲ್ಲ.
ತಮ್ಮ ಸುದೀರ್ಘ ಸಿನಿಮಾ ಜೀವನದಲ್ಲಿ ಲೀಲಾವತಿ ಸುಮಾರು 600 ಚಿತ್ರಗಳಲ್ಲಿ ಅಭಿನಯಿಸಿದ್ದರೆಂದು ಕೆಲವರು ಅಂಕಿ ಅಂಶಗಳನ್ನು ನೀಡುತ್ತಿದ್ದಾರೆ. ಆದರೆ ಅವರು ನಟಿಸಿದ ಚಿತ್ರಗಳ ಸಂಖ್ಯೆ 300ಕ್ಕಿಂತ ಹೆಚ್ಚಿಲ್ಲವೆಂದು ಮತ್ತೆ ಕೆಲವು ಜ್ಞಾನಿಗಳು ತಿದ್ದುಪಡಿ ಹೇಳುತ್ತಿದ್ದಾರೆ. ಅದು ಹೇಗಾದರೂ ಆಗಲಿ, ಚಿತ್ರರಂಗ ಇರುವವರೆಗೆ ಅವರನ್ನು ಮರೆಯಲು ಸಾಧ್ಯವಾಗದ ಮಟ್ಟಿಗೆ ಲೀಲಾವತಿ ನಮ್ಮ ಪ್ರಜ್ಞೆ, ಮನಸ್ಸುಗಳನ್ನು ಆವರಿಸಿದ್ದಾರೆ. ಅವರು ಈಗಿಲ್ಲ. ಈಗೇನಿದ್ದರೂ ಅವರ ಸಾಧನೆಗಳು ಮುನ್ನೆಲೆಗೆ ಬರುವ ಸಮಯ. ಅವರಿಗೆ ಹನಿ ಕಣ್ಣೀರು, ಕೃತಜ್ಞತಾಪೂರ್ವಕ ನಮನ.

ಎನ್ ಎಸ್ ಶಂಕರ್
ಚಲನಚಿತ್ರ ನಿರ್ದೇಶಕ, ಚಿತ್ರ ವಿಮರ್ಶಕ
Date – 12th Nov 2023
ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಡಾ. ಎಂ. ಲೀಲಾವತಿ ಅವ್ರು ಜಿರೋಯಿಂದ ಹಿರೋಹಿನ್ ವರೆಗಿನ ಅವ್ರ ಜೀವನಗಾಥೆ ಕಲ್ಲು ಕರಗಿಸುವಂತದ್ದು. ದಿವಂಗತ ಲೀಲಾವತಿ ಅವ್ರ ನಿಜಜೀವನ ಕಥೆ ಓದಿ ಆತಂಕ ಉಂಟಾಯ್ತು.
ಎಂ. ಶಿವರಾಂ.
ಹಿರಿಯ ಪತ್ರಕರ್ತ
ಬೆಂಗಳೂರು