ವಿಜಯಪುರ ನಗರದ ಸಂತ ಜೋಸೆಫರ ಆರೋಗ್ಯ ಮತ್ತು ಸಮುದಾಯ ಭವನದಲ್ಲಿ ವಿಶ್ವ ಏಡ್ಸ್ ನಿರ್ಮೂಲನಾ ದಿನಾಚರಣೆ ಹಾಗೂ ಕ್ರಿಸ್‌ಮಸ್ ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ. ಶಿವಾನಂದ ಮಾಸ್ತಿಹೊಳಿ ಮಾತನಾಡಿ, ಎಚ್ಐವಿ ಸೋಂಕಿತರು ಯಾವುದೇ ಭಯಪಡಬೇಕಾಗಿಲ್ಲ. ಅವರು ಸರಿಯಾದ ಜೀವನ ಕ್ರಮ ಮತ್ತು ಸದೃಢ ಮನೋಭಾವನೆ ಬೆಳೆಸಿಕೊಂಡರೆ ಅವರು ಕೂಡ ಜನ ಸಾಮಾನ್ಯರ ಹಾಗೆ ಬದುಕಬಹುದು. ಎಚ್‌ಐವಿ ಪೀಡಿತರಿಗೆ ಇರುವ ಚಿಕಿತ್ಸೆ ಸಂಪೂರ್ಣ ಉಚಿತವಾಗಿ ದೊರೆಯುತ್ತಿದೆ. ಸುಮಾರು ಶೇ.95ರಷ್ಟು ಜನರು ಎಚ್‌ಐವಿ ಸ್ಥಿತಿಗತಿ ಬಗ್ಗೆ ತಿಳಿದುಕೊಂಡಿದ್ದಾರೆ. ಕಾಲ ಕಾಲಕ್ಕೆ ಅವರಿಗೆ ಪರೀಕ್ಷೆ ಹಾಗೂ ಆಪ್ತಸಮಾಲೋಚನೆ ನೀಡಲಾಗುತ್ತಿದೆ.
ಇನ್ನು ಹೆಚ್ಚಿನ ಯಾವುದೇ ತೊಂದರೆ ಇದ್ದರೂ ಅವರು ದೃತಿಗೆಡಬಾರದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಏನೇ ತೊಂದರೆಯಾದರೂ ಅಥವಾ ಯಾವುದೇ ಸಹಾಯ ಬೇಕಾದರೆ ನನ್ನನ್ನು ಸಂಪರ್ಕಿಸಿ, ಮೊದಲ ಆದ್ಯತೆ ನೀಡಿ ಸ್ಪಂದಿಸುತ್ತೇವೆ ಎಂದು ಎಲ್ಲ ಎಚ್‌ಐವಿ ಪೀಡಿತರಿಗೆ ಭರವಸೆ ನೀಡಿದರು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ಉಪನಿರ್ದೇಶಕ ಕೆ.ಕೆ. ಚವ್ಹಾಣ ಮಾತನಾಡಿ, ಎಚ್‌ಐವಿ ಪೀಡಿತರು ಸ್ವಾಭಿಮಾನದ ಬದುಕು ಕಟ್ಟಿಕೊಂಡು ಜೀವನ ಸಾಗಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಆಯೋಜಿಸಿದೆ. ಪ್ರತೀ ವರ್ಷ 35 ರಿಂದ 40 ಮಹಿಳೆಯರಿಗೆ ಧನಶ್ರೀ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಅದ್ದರಿಂದ ಮಹಿಳೆಯರು ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಲ್ಲದೆ, ಪ್ರತಿ ಎಚ್‌ಐವಿ ಪೀಡಿತ ಮಕ್ಕಳಿಗೆ ಪ್ರತಿ ತಿಂಗಳು ವಿಶೇಷ ಪಾಲನಾ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನ ಕೂಡ ನೀಡಲಾಗುತ್ತಿದೆ. ಇಂತ ಎಲ್ಲ ಸೌಲಭ್ಯಗಳು ಪಡೆದು ಅವರು ಜನ ಸಾಮಾನ್ಯರಂತೆ ಘನತೆ ಬದುಕು ಸಾಗಿಸಲಿ ಎಂದು ಹಾರೈಸಿದರು.
ವಿಜಯಪುರ ಜಿಲ್ಲಾ ಸಂಘ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಮಾತನಾಡಿ, ಮಾನವನ ಸೇವೆಯೆ ದೇವರ ಸೇವೆಯಾಗಿದೆ. ಸರ್ಕಾರ ಸಂಘ ಸಂಸ್ಥೆಗಳು ಅವುಗಳಿಗೆ ಬದ್ಧವಾಗಿದೆ. ಎಲ್ಲ ಸಮುದಾಯಗಳು ಕೈಗೂಡಿಸಿ ಕಾರ್ಯ ಮಾಡುವುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಾಟಿಯೋಲ್ ಮಚಾದೊ ಮಾತನಾಡಿ, ನಾವು ನಮ್ಮಷ್ಟಕ್ಕೆ ಬದುಕುವುದರ ಜೊತೆಗೆ ಇನ್ನೊಬ್ಬರ ಬದುಕಲ್ಲಿ ಭರವಸೆ ನೀಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಅದಕ್ಕೆ ನಾವೆಲ್ಲರೂ ಈ ವರ್ಷದ ಘೋಷವಾಕ್ಯ ‘ಸಮುದಾಯಗಳು ಮುನ್ನಡೆಸಲಿ’ ಎಂಬಂತೆ ನಾವು ನೀವು ಕೂಡಿ ಸಾಕಾರ ಮಾಡುವುದಾಗಿದೆ ಮತ್ತು ಅದು ಯೇಸು ಕ್ರಿಸ್ತರ ಆಶಯವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ವಿಜಯಪುರ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸಂತ ಜೋಸೆಫರ ಆರೋಗ್ಯ ಮತ್ತು ಸಮುದಾಯ ಕೇಂದ್ರದ ಮುಖ್ಯಸ್ಥ ಸಿ.ಶಾಂತಿ ಮೇರಿ, ಸದಸಾನಿದ್ಯ ಮಕ್ಕಳು ಹಾಗೂ ಸಂತ ಜೋಸೆಪ್ ಮನೆಯ ಮಕ್ಕಳು ಕ್ರಿಸ್‌ಮಸ್ ಹಾಡು, ನೃತ್ಯ ಮಾಡಿ ಗಮನ ಸೆಳೆದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಸಂಯೋಜಕರಾದ ಭಾರತಿ ಪಾಟಲ್ ಹಾಗೂ ಡ್ಯಾಲ್ಯೂ ಜಿಲ್ಲಾ ಸಂಯೋಜಕ ಬಾಬುರಾದ ತಳವಾರ ಹಾಗೂ ವಿಜಯ ಕಾಂಬಳೆ, ಗಂಗಯ್ಯ, ಮಲ್ಲು, ಶಬ್ಬಿರ ಕಾಗಜಕೋಟ ಇತರರು ಇದ್ದರು.