ಉಡುಪಿಯ ನೇಜಾರಿನಲ್ಲಿ ನಡೆದಿದ್ದ ನಾಲ್ವರ ಬರ್ಬರ ಹತ್ಯೆ ಪ್ರಕರಣದಲ್ಲಿ ಆರೋಪಿಯನ್ನು ಮಹಜರಿಗೆ ಕರೆದೊಯ್ದಿದ್ದಾಗ ನಡೆದಿದ್ದ ಘಟನೆ ಸಂಬಂಧ ಪೊಲೀಸರು 11 ಮಂದಿಗೆ ನೋಟೀಸ್ ನೀಡಿದ್ದಾರೆ. ಇದರಿಂದಾಗಿ, ನೇಜಾರು ಗ್ರಾಮಸ್ಥರು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆತಂಕಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ.
ನವೆಂಬರ್ 12ರಂದು ಹತ್ಯೆ ಆರೋಪಿ ಪ್ರಮೀಣ್ ಚೌಗಲೆ, ತನ್ನ ಸಹೋದ್ಯೋಗಿ ಸೇರಿ ಆಕೆಯ ಕುಟುಂಬದ ನಾಲ್ವರನ್ನು ಹತ್ಯೆಗೈದಿದ್ದ. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ಆತನನ್ನು ನವೆಂಬರ್ 16ರಂದು ಸ್ಥಳ ಮಹಜರು ಮಾಡಲು ನೇಜಾರಿಗೆ ಕರೆದೊಯ್ದಿದ್ದರು. ಈ ವೇಳೆ, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಆರೋಪಿ ಮೇಲೆ ಹಲ್ಲೆಗೆ ಮುಂದಾಗಿದ್ದರು.
ಗ್ರಾಮಸ್ಥರನ್ನು ತಡೆಯಲು ಪೊಲೀಸರು ಲಾಠಿ ಜಾರ್ಜ್ ಕೂಡ ನಡೆಸಿದ್ದರು. ಇದೀಗ, ಆ ಘಟನೆಯ ಸಂಬಂಧ 11 ಮಂದಿಯನ್ನು ಪೊಲೀಸರು ಗುರುತಿಸಿದ್ದು, ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅವರಲ್ಲಿ, ಮೂವರ ವಿರುದ್ಧ ಕೊಲೆ ಯತ್ನ (307) ಆರೋಪದ ಮೇಲೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂಬ ಹೇಳಲಾಗುತ್ತಿದೆ.