ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಮೇ ತಿಂಗಳಲ್ಲಿ ಉರುಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತೆ ಪುನರುಚ್ಚರಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಕ್ಷೇತ್ರದ ಬೆಳತೂರು ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತಾಡಿದ ಅವರು, “ರಾಜ್ಯದ ಅಭಿವೃದ್ಧಿಗೆ ಹಣ ಹೊಂದಿಸಲು ಹರಸಾಹಸ ಪಡುತ್ತಿರುವ ಈ ಸರಕಾರ ಲೋಕಸಭಾ ಚುನಾವಣೆ ನಂತರ ಖಂಡಿತವಾಗಿಯೂ ಬಿದ್ದುಹೋಗಲಿದೆ” ಎಂದರು.
ಈ ಮೂಲಕ ಸಿದ್ದರಾಮಯ್ಯ ಸರ್ಕಾರ ಉರುಳಲಿದೆ ಎಂದು ಹೇಳುವುದನ್ನು ಕುಮಾರಸ್ವಾಮಿ ಮುಂದುವರಿಸಿದ್ದಾರೆ. “ಸ್ವಲ್ಪ ದಿನ ಕಾಯಿರಿ, ರಾಜ್ಯದ 6.5 ಕೋಟಿ ಜನರ ಕಷ್ಟ ಸುಖವನ್ನು ಅರಿತು ಕೆಲಸ ಮಾಡುವ ಸರಕಾರ ಬರಲಿದೆ. ಜಿಲ್ಲೆಯಿಂದ ಜೆಡಿಎಸ್ ಪಕ್ಷದ ಏಕೈಕ ಶಾಸಕರಾಗಿರುವ ಹೆಚ್ ಟಿ ಮಂಜು ಮೇಲೆ ಪ್ರೀತಿ ವಿಶ್ವಾಸವಿಟ್ಟು ಗೆಲ್ಲಿಸಿರುವುದಕ್ಕೆ ಜನತೆಗೆ ಧನ್ಯವಾದಗಳು” ಎಂದು ಹೇಳಿದರು.
“ಇವರಿಗೆ ಗ್ಯಾರಂಟಿಗಳ ಬಗ್ಗೆ ಇರುವ ಚಿಂತೆ ಜನಸಾಮಾನ್ಯರ ಮೇಲೆ ಇಲ್ಲ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸರಕಾರಿ ನೌಕರರಿಗೆ ವೇತನ ನೀಡಲೂ ಹಣವಿರುವುದಿಲ್ಲ” ಎಂದು ಟೀಕಿಸಿದರು.
ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲಿ
“ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ ಒಂದು ವಾರದಿಂದಲೂ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ ಉನ್ನತ ಶಿಕ್ಷಣ ಸಚಿವರು ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿ ಈಡಿಗರ ಒಗ್ಗಟ್ಟು ಪ್ರದರ್ಶನ; ಸಾಗರೋಪಾದಿಯಲ್ಲಿ ಜನ ಭಾಗಿ
ಸಮುದಾಯ ಭವನಕ್ಕೆ ಅನುದಾನ
”ದೇವೇಗೌಡರ ಬಗ್ಗೆ ನೀವುಗಳು ಇಟ್ಟಿರುವ ಅಭಿಮಾನ, ಪ್ರೀತಿಗಾಗಿ ಬೆಳತೂರು ಗ್ರಾಮದ ಕೋಟೆ ರಂಗನಾಥಸ್ವಾಮಿ ಸನ್ನಿದಿಯಲ್ಲಿ ಸಮುದಾಯ ಭವನ ನಿರ್ಮಿಸಲು ರಾಜ್ಯಸಭಾ ಸದಸ್ಯರ ನಿಧಿಯಿಂದ 25 ಲಕ್ಷ ರೂ. ಹಣ ಒದಗಿಸಲಾಗುವುದು,” ಎಂದು ಘೋಷಿಸಿದರು.
ಎಚ್.ಡಿ. ದೇವೇಗೌಡ ಅಭಿಮಾನಿ ಬಳಗದವರು, ”ತಾಲೂಕಿನಲ್ಲಿ ಹಾದುಹೋಗಿರುವ ಜಲಸೂರು-ಬೆಂಗಳೂರು ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ನೀಡಿಲ್ಲ. ಕೆಲವರಿಗೆ ಒಂದು ಗುಂಟೆಗೆ 14,000 ರೂ. ನೀಡಿದ್ದರೆ ಇನ್ನೊಬ್ಬರಿಗೆ 2,40,000 ರೂ ನೀಡಲಾಗಿದೆ. ಇದನ್ನು ಸರಕಾರದ ಗಮನಕ್ಕೆ ತಂದು ರೈತರಿಗೆ ನ್ಯಾಯ ಒದಗಿಸಬೇಕು,” ಎಂದು ಮನವಿ ನೀಡಿದರು.