ಪ್ರತಿ ವರ್ಷ ಡಿಸೆಂಬರ್ 12 ರಂದು ಶಿವಶರಣ ಮಾದರ ಚನ್ನಯ್ಯನವರ ಜಯಂತಿಯನ್ನು ಸಮುದಾಯದ ಸಹಕಾರದೊಂದಿಗೆ ರಾಜ್ಯ ಸರ್ಕಾರವೇ ಆಚರಿಸಬೇಕು ಎಂದು ಶಿವಶರಣ ಮಾದರ ಚೆನ್ನಯ್ಯ ಜನಜಾಗೃತಿ ವೇದಿಕೆ ಒತ್ತಾಯಿಸಿದೆ.
ಕಲಬುರಗಿಯಲ್ಲಿ ಸಮಾಜದ ಮುಖಂಡರು ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ರಾಜ್ಯ ಸರ್ಕಾರದಿಂದ ಜಯಂತಿ ಆಚರಿಸಲು ಮುಂದಾಗಬೇಕೆಂದು ಆಗ್ರಹಿಸಿದರು.
“ಸಮುದಾಯದ ಅಭಿವೃದ್ಧಿಯ ಹಿತದೃಷ್ಟಿಯಿಂದಾಗಿ ಹಾಗೂ ಶರಣ ಮಾದರ ಚನ್ನಯ್ಯರವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸಮಾಜಕ್ಕೆ ತಿಳಿಸಲು ಮತ್ತು ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಮಾದಾರ ಚನ್ನಯ್ಯರವರ ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಆದೇಶಿಸಬೇಕು. ಈ ಹಿಂದಿನ ಅನೇಕ ಸರಕಾರದಲ್ಲಿಯೂ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದೇ ನಿರ್ಲಕ್ಷವಹಿಸಿವೆ” ಎಂದು ಸಚಿವರಿಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ದೇಶದಲ್ಲೇ ಅಗ್ರಸ್ಥಾನ ಪಡೆದ ಬೆಂಗಳೂರು: ಕಳೆದ ವರ್ಷ ಅತಿ ಹೆಚ್ಚು ಆ್ಯಸಿಡ್ ದಾಳಿ ಪ್ರಕರಣ ದಾಖಲು
ಈ ಸಂದರ್ಭದಲ್ಲಿ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಸವರಾಜ ಕಾಳಗಿಕರ್, ಸಮಾಜದ ಹಿರಿಯ ಮುಖಂಡರಾದ ಶಂಭುಲಿಂಗ ನಾಟಿಕರ್, ಈರಪ್ಪ ಗುಂಡಗುರ್ತಿ, ಈಶ್ವರ ಹಳ್ಳಿ, ಕಾಶಿನಾಥ್ ನಾಟಿಕರ್, ಅರ್ಜುನ್ ಮೇತ್ರಿ, ಜಗನ್ನಾಥ್ ಬಿಜನಹಳ್ಳಿ, ಸಾಬು ರಾಜೋಳಿ, ದೊಡ್ಡಪ್ಪ ಮುಗಟಿ, ಮರಿಯಪ್ಪ ದೊಣಗಾವ್ ಇದ್ದರು.