ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಅವರು ಸೋಮವಾರ ಲೋಕಸಭೆಯಿಂದ ಪ್ರಶ್ನೆಗಾಗಿ ಕಾಸು ಪ್ರಕರಣದಲ್ಲಿ ಉಚ್ಚಾಟನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಗೌತಮ್ ಅದಾನಿ ಜೊತೆಗಿನ ಸಂಬಂಧದ ಪ್ರಶ್ನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳಿ ಅವರಿಗೆ ಇರಿಸುಮುರಿಸು ಉಂಟುಮಾಡಲು ಉದ್ಯಮಿಯೊಬ್ಬರಿಂದ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆಂದು ಮಹುವಾ ಮೊಯಿತ್ರಾ ವಿರುದ್ಧ ಆರೋಪಿಸಲಾಗಿತ್ತು. ಅದನ್ನು ಸಂಸತ್ತಿನ ನೈತಿಕ ಸಮಿತಿಗೆ ವಹಿಸಲಾಗಿತ್ತು.
ನೈತಿಕ ಸಮಿತಿಯು ಮಹುವಾ ತಪ್ಪಿತಸ್ಥರೆಂದು ಪರಿಗಣಿಸಿ, ಲೋಕಸಭೆಯಿಂದ ಅವರನ್ನು ಉಚ್ಚಾಟಿಸಬೇಕೆಂದು ಶಿಫಾರಸು ಮಾಡಿತ್ತು. ಸಮಿತಿಯ ವರದಿಯನ್ನು ಸದನವು ಅಂಗೀಕರಿಸಿದ ನಂತರ ಮಹುವಾ ಅವರನ್ನು ಶುಕ್ರವಾರ ಲೋಕಸಭೆಯಿಂದ ಹೊರಹಾಕಲಾಯಿತು.
ಮೊಯಿತ್ರಾ ಅವರ ‘ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಕ್ರಿಮಿನಲ್ ನಡವಳಿಕೆ’ಯನ್ನು ಗಮನದಲ್ಲಿಟ್ಟುಕೊಂಡು, ಕಠಿಣ ಕಾನೂನು ಜಾರಿ ಮತ್ತು ಸಾಂಸ್ಥಿಕ ತನಿಖೆಯನ್ನು ಸರ್ಕಾರವು ಕಾಲಮಿತಿಯಲ್ಲಿ ಪ್ರಾರಂಭಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿತ್ತು.