ದ್ವೇಷ ರಾಜಕಾರಣಕ್ಕೆ ಮಕ್ಕಳು, ಮಹಿಳೆಯರು ಬಲಿ: ಎಸ್‌.ಜಿ.ಸಿದ್ದರಾಮಯ್ಯ

Date:

Advertisements

ಆಹಾರ, ಆರೋಗ್ಯ, ಶಿಕ್ಷಣ- ಒಂದು ದೇಶದ ಅಭಿವೃದ್ಧಿಗೆ ಅಡಿಗಲ್ಲು. ಇವು ಗಟ್ಟಿಯಾಗಿಲ್ಲದಿದ್ದರೆ ಮರಳು ಸೌಧವನ್ನು ನಿರ್ಮಿಸುತ್ತೇವೆ. ಅದು ಮರಣ ಸೌಧವೂ ಆಗಿರುತ್ತದೆ

“ದ್ವೇಷ ರಾಜಕಾರಣಕ್ಕೆ ಮಕ್ಕಳು ಮತ್ತು ಮಹಿಳೆಯರು ಬಲಿಯಾಗುತ್ತಿದ್ದಾರೆ. ಕೇಂದ್ರ ಸರ್ಕಾರ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ” ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಐಸಿಡಿಎಸ್‌‌, ಎಂಡಿಎಂ, ಎನ್‌ಎಚ್‌ಎಂ, ಐಸಿಪಿಎಸ್‌, ಎನ್‌ಆರ್‌ಎಲ್‌ಎಂ, ಪೋಷಣ್ ಅಭಿಯಾನ, ನರೇಗಾ ಯೋಜನೆಗಳಲ್ಲಿರುವ ನೌಕರರ ಸಂಘಟನೆಗಳು ಸೋಮವಾರ ಬೆಂಗಳೂರಿನ ಪುರಭವನದಲ್ಲಿ ಆಯೋಜಿಸಿದ್ದ ’ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿ ಇರುವ ಕೇಂದ್ರ ಪುರಸ್ಕೃತ ಯೋಜನೆಗಳು- ನೌಕರರ ಸ್ಥಿತಿಗತಿಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

Advertisements

ಪ್ರಜಾಪ್ರಭುತ್ವ ಅವನತಿ ಕಡೆಗೆ ಹೆಜ್ಜೆ ಇಡುತ್ತಿರುವುದನ್ನು ನೋಡುತ್ತಿದ್ದೇವೆ. ದೇಶ ಮತ್ತು ಜನ ದೊಡ್ಡವರು ಎಂಬ ಅರಿವು ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳಲ್ಲಿ ಇರಬೇಕು. ದುರಾದೃಷ್ಟವಶಾತ್‌ ದ್ವೇಷದ ರಾಜಕಾರಣ ಮತ್ತು ತಮ್ಮದೇ ಅಜೆಂಡಾಗಳ ಮೂಲಕ ದೇಶವನ್ನು ಇವರು ಆಳುತ್ತಿದ್ದಾರೆ ಎಂದು ವಿಷಾದಿಸಿದರು.

ಆಹಾರ, ಆರೋಗ್ಯ, ಶಿಕ್ಷಣ- ಒಂದು ದೇಶದ ಅಭಿವೃದ್ಧಿಗೆ ಅಡಿಗಲ್ಲು. ಅಡಿಪಾಯ ಸರಿ ಇದ್ದರೆ ಸುಭದ್ರ ದೇಶ ಕಟ್ಟಬಹುದು. ಇವು ಗಟ್ಟಿಯಾಗಿಲ್ಲದಿದ್ದರೆ ಮರಳು ಸೌಧವನ್ನು ನಿರ್ಮಿಸುತ್ತೇವೆ. ಅದು ಮರಣ ಸೌಧವೂ ಆಗಿರುತ್ತದೆ ಎಂದು ಎಚ್ಚರಿದರು.

ರಾಜ್ಯ ರಾಜ್ಯಗಳ ನಡುವೆ ದ್ವೇಷವನ್ನು ಬಿತ್ತಿದರೆ ಬಲಿಯಾಗುವುದು ಮಕ್ಕಳು ಮತ್ತು ಮಹಿಳೆಯರು. ಮಕ್ಕಳ ಶಿಕ್ಷಣ, ಆಹಾರಕ್ಕೆ ಕೊಡಬೇಕಾದ ಅನುದಾನವನ್ನು ಕಡಿತಗೊಳಿಸಿ ಮಾಡುತ್ತಿರುವ ದ್ವೇಷ ರಾಜಕಾರಣ ಬಿಡಬೇಕು. ಮಕ್ಕಳ ಹೊಣೆ ನಮ್ಮದೂ ಎಂಬುದನ್ನು ಕೇಂದ್ರ ಸರ್ಕಾರ ಅರಿಯಬೇಕು ಎಂದು ಮನವಿ ಮಾಡಿದರು.

ನಮ್ಮ ದೇಶ ಅಸಮಾನತೆಯ ಆಗರದಿಂದ ಕೂಡಿದೆ. ಹೀಗಾಗಿ ಸ್ವಾತಂತ್ರ್ಯ ಪಡೆದು ಸರ್ಕಾರ ರಚಿಸಿಕೊಂಡ ನಂತರದಲ್ಲಿ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ಅಸಮಾನತೆಯನ್ನು ಹೋಗಲಾಡಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಪಂಚವಾರ್ಷಿಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಯಿತು. ವಿರೋಧ ಪಕ್ಷಗಳು ಇದಕ್ಕೆ ಪೂರಕವಾಗಿದ್ದವು. ಆಳುವ ಪಕ್ಷಗಳ ತಪ್ಪು ಹೆಜ್ಜೆಗಳನ್ನು ಖಂಡಿಸುತ್ತಲೇ, ತಿದ್ದುವ ಕೆಲಸವನ್ನೂ ಮಾಡುತ್ತಿದ್ದರು. ಲೋಹಿಯಾ ಅಂಥವರು ಆರೋಗ್ಯಕರವಾಗಿ ಚರ್ಚೆಗಳನ್ನು ನಡೆಸುತ್ತಿದ್ದರು. ಒಳ್ಳೆಯ ಸಂಗತಿಗಳ ಬೆಳವಣಿಗೆಗೆ ಸಹಕರಿಸುತ್ತಿದ್ದರು. ಉಚಿತ ಶಿಕ್ಷಣ, ಕಡ್ಡಾಯ ಶಿಕ್ಷಣ ನೀಡಲಾಯಿತು. ಇಂದು ನಮ್ಮ ಶಿಕ್ಷಣ, ಆಹಾರ, ಆರೋಗ್ಯ ಕ್ಷೇತ್ರಗಳು ದ್ವೇಷ ರಾಜಕಾರಣಕ್ಕೆ ಬಲಿಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ದಕ್ಷಿಣದ ರಾಜ್ಯಗಳಿಂದ ಹರಿಯುವ ಜಿಎಸ್‌ಟಿ ಎಷ್ಟು, ಪಾಪಸ್ ಬರುವುದೆಷ್ಟು? ನಮ್ಮ ಹಕ್ಕನ್ನು ಕಸಿಯಲಾಗುತ್ತಿದೆ. ಒಕ್ಕೂಟ ವ್ಯವಸ್ಥೆ ಉಳಿಸುವ ರಾಜಕಾರಣ ಇದಲ್ಲ. ಮಹಿಳೆಯರನ್ನು ಪೂಜಿಸಿ ಎಂದು ಮಾತನಾಡುತ್ತಾರೆ. ಮಕ್ಕಳ ಅಭಿವೃದ್ಧಿ ಬಗ್ಗೆ ಹೇಳುತ್ತಾರೆ. ನಿಜವಾದ ಕಾಳಜಿ ಇದ್ದರೆ ಇಬ್ಬರ ಅಭಿವೃದ್ಧಿಗೆ ಮೀನಮೇಷ ಎಣಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ದೇಶದ ಸಂಪತ್ತನ್ನು ನುಂಗಿದವರಿಗೆ ವಿನಾಯಿತಿ ನೀಡಿ ಸಾಲ ಮನ್ನಾ ಮಾಡಲಾಗುತ್ತಿದೆ. ಆದರೆ ಮಕ್ಕಳು, ಮಹಿಳೆಯರಿಗೆ ನೀಡಬೇಕಾದ ಅನುದಾನವನ್ನು ಕಡಿತ ಮಾಡಲಾಗುತ್ತಿದೆ. ವೇತನ ತಾರತಮ್ಯ ಎಂಬುದು ಒಂದು ಅಪರಾಧ. 18 ಗಂಟೆ ದಡಿಯುವ ಅಂಗನವಾಡಿ ಕಾರ್ಯಕರ್ತೆಯರು, ಹೊರಗುತ್ತಿಗೆಯಲ್ಲಿ ದುಡಿಯುವ ಮೇಷ್ಟ್ರಗಳ ಸ್ಥಿತಿ ನೋಡಿ ಇವರು ನಾಚಿಕೆ ಪಡಬೇಕು. ಮೇಲಿನವರಿಗೆ ಕೊಡುತ್ತಿರುವ ಹತ್ತು ಪರ್ಸೆಂಟ್ ವೇತನವನ್ನೂ ಈ ನೌಕರರಿಗೆ ನೀಡುತ್ತಿಲ್ಲ ಎಂದು ಟೀಕಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ಮೇಲೆ ಮಕ್ಕಳು ಡ್ರಾಫ್ ಔಟ್ ಆಗುತ್ತಿರುವುದು ಹೆಚ್ಚಾಗಿದೆ. ಯಾವುದೇ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುವಾಗ ಪ್ರಾಥಮಿಕ ಹಂತದಿಂದ ನಿಧಾನಕ್ಕೆ ಹಂತ ಹಂತವಾಗಿ ಅನುಷ್ಠಾನ ಮಾಡುತ್ತಾ ಹೋಗಬೇಕು. ಆದರೆ ಉನ್ನತ ಶಿಕ್ಷಣದಿಂದ ಎನ್‌ಇಪಿ ಆರಂಭಿಸಲಾಯಿತು. ಪಠ್ಯಪುಸ್ತಕಗಳಿಲ್ಲ, ಶಿಕ್ಷಕರಿಗೆ ಟ್ರೈನಿಂಗ್ ಇಲ್ಲ. ಕಲಸು ಮೇಲೋಗರವಾಗಿ ಉನ್ನತ ಶಿಕ್ಷಣ ವ್ಯವಸ್ಥೆ ಎಕ್ಕಟ್ಟು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿವಿಗಳಿಗೆ ಅನುದಾನದ ಕೊರತೆ ಅಷ್ಟೇ ಅಲ್ಲ, ಮೇಷ್ಟ್ರುಗಳ ಕೊರತೆಯೂ ಇದೆ. ಪ್ರಾಧ್ಯಾಪಕರು ನಿವೃತ್ತರಾದರೂ ಹೊಸ ನೇಮಕಾತಿಗಳು ನಡೆಯುತ್ತಿಲ್ಲ. ಲೈಬ್ರರಿಗೆ ಹೊಸ ಹೊಸ ಪಠ್ಯಗಳು ಬರುತ್ತಿಲ್ಲ. ರಾಜಕಾರಣಿಗಳು ಅವರ ಬೇಳೆ ಬೇಯಿಸಿಕೊಳ್ಳಲು ಬೀದಿಗೊಂಡು ವಿಶ್ವವಿದ್ಯಾಲಯವನ್ನು ತರುತ್ತಿದ್ದಾರೆ. ವಾಸ್ತವದಲ್ಲಿ ಯಾವುದೇ ಸೌಲಭ್ಯಗಳನ್ನು ಇವುಗಳಿಗೆ ನೀಡುತ್ತಿಲ್ಲ. ಎಲ್ಲ ಪಕ್ಷಗಳ ರಾಜಕಾರಣಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಹರಿಹಾಯ್ದರು.

ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಎ.ಆರ್‌.ಸಿಂಧು ಮಾತನಾಡಿ, “ಈ ದೇಶವನ್ನು ಆಳುತ್ತಿರುವವರು ತಾವೇ ದೇಶದ ಅಭಿವೃದ್ಧಿಯ ಹರಿಕಾರರು ಎನ್ನುತ್ತಿದ್ದಾರೆ. ಜಿಡಿಪಿಯೇ ದೇಶದ ಆರ್ಥಿಕತೆ ಎಂದು ನಂಬಿಸುತ್ತಿದ್ದಾರೆ. ಜನರ ಪರ ಇರಬೇಕಾದವರು ಕಾರ್ಪೊರೇಟರ್‌ಗಳ ಪರ ಇದ್ದಾರೆ. ಮಕ್ಕಳು ಅಪೌಷ್ಟಿಕತೆಯಿಂದಾಗಿ ಜೀವಂತ ಶವಗಳಾಗುತ್ತಿವೆ” ಎಂದರು.

ಕಳೆದ ಒಂದು ವರ್ಷದಲ್ಲಿ ಎಪ್ಪತ್ತೈದು ಸಾವಿರ ಮಕ್ಕಳು ಸಾವನ್ನಪ್ಪಿವೆ. ಈ ಕುರಿತು ಭಾರತದಲ್ಲಿ ಗಂಭೀರವಾಗಿ ಚರ್ಚೆಯಾಗಲೇ ಇಲ್ಲ. ಜಿಡಿಪಿಯ ಅಂಕಿ- ಅಂಶಗಳನ್ನು ಮಾತ್ರ ತೋರಿಸಿದ್ದಾರೆ. ಇಂತಹ ಸರ್ಕಾರಗಳು ಏಕೆ ಬೇಕು ಎಂದು ಪ್ರಶ್ನಿಸಿದರು.

ಸಿಐಟಿಯು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, “ಅಂಗನವಾಡಿ ಟೀಚರ್‌ಗಳಿಂದ ರೈತರಿಂದಲೇ ಈ ಸರ್ಕಾರವನ್ನು ಹೊಗಳಿಸುವ ಕೆಲಸ ಆಗುತ್ತಿದೆ. ಕೆರೆ ತುಂಬಿಲ್ಲದಿದ್ದರೂ ತುಂಬಿದೆ ಎಂದು ನಿಮ್ಮಿಂದಲೇ ಹೇಳಿಸಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಬಿಸಿಯೂಟ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಮಾತನಾಡಿ, “ನಾಮಕಾವಸ್ತೆಗೆ ಯೋಜನೆಗಳನ್ನು ನೀಡಿ, ಅನುದಾನ ಕೊಡದೆ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಇಲ್ಲಿ ಕೆಲಸ ಮಾಡುತ್ತಿರುವವರ  ಕಷ್ಟವನ್ನು ಸರ್ಕಾರಗಳು ಗಮನಿಸುತ್ತಿಲ್ಲ” ಎಂದು ಅಳಲು ತೋಡಿಕೊಂಡರು.

ಬಿಸಿಯೂಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಒಂದು ರೂಪಾಯಿ ಕೊಡುತ್ತಿಲ್ಲ. ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಹೆಸರಿಗೆ ಮಾತ್ರ ಯೋಜನೆಗಳಿವೆ. ಆದರೆ ಸಮರ್ಪಪಕವಾಗಿ ಜಾರಿಗೆಯಾಗಿಲ್ಲ ಎಂದು ತಿಳಿಸಿದರು.

ಸಿಐಟಿಯು ರಾಜ್ಯ ಸಮಿತಿಯ ಅಧ್ಯಕ್ಷರಾದ ಎಸ್.ವರಲಕ್ಷ್ಮಿ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಮೆಡಿಕಲ್ ಆಫೀಸರ್‌ ಆಫೀಸರ್‌ ಡಾ.ರಮೇಶ್‌, ಕಾಂತರಾಜು, ಯಮುನಾ ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

Download Eedina App Android / iOS

X