- ಹಿರಿಯ ನಟಿ ಲೀಲಾವತಿ ನಿಧನಕ್ಕೆ ವಿಧಾನಸಭೆ ಸಂತಾಪ
- ಆಡಳಿತ ಮತ್ತು ಪ್ರತಿಪಕ್ಷ ನಾಯಕರಿಂದ ಸಂತಾಪ ನುಡಿ
ಬೆಳಗಾವಿ ಚಳಿಗಾಲದ ಅಧಿವೇಶನದ ಸೋಮವಾರದ ವಿಧಾನಸಭೆ ಕಲಾಪದಲ್ಲಿ ಹಿರಿಯ ಚಲಚಿತ್ರ ನಟಿ ಡಾ.ಲೀಲಾವತಿ ನಿಧನಕ್ಕೆ ಸಂತಾಪ ಸೂಚಿಸಿ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.
ಸಭಾಧ್ಯಕ್ಷ ಯು ಟಿ ಖಾದರ್ ಸಂತಾಪ ಸೂಚನೆ ನಿರ್ಣಯ ಮಂಡಿಸಿ, “ಡಾ.ಲೀಲಾವತಿ ನಾಯಕಿಯಾಗಿ, ಪೋಷಕ ನಟಿಯಾಗಿ ವಿಭಿನ್ನ ಹಾಗೂ ವೈವಿಧ್ಯಮಯ ಪಾತ್ರಗಳಲ್ಲಿ ಕಪ್ಪು-ಬಿಳುಪು ಕಾಲದಿಂದ ಕಲರ್ ಸಿನಿಮಾ ಸ್ಕೋಪ್‍ವರೆಗೆ ಎಲ್ಲಾ ಪ್ರಸಿದ್ಧ ನಾಯಕ ನಟರೊಂದಿಗೆ ನಟಿಸಿ ಜನಪ್ರಿಯರಾಗಿದ್ದರು. ಕಾಲೇಜ್ ಹಿರೋ ಚಿತ್ರ ನಿರ್ಮಿಸಿದ್ದ ಅವರು ಕನ್ನಡದ ಕಂದ ಚಲನಚಿತ್ರಕ್ಕೆ ಚಿತ್ರಕಥೆ ಬರೆದಿದ್ದರು. ಡಾ.ರಾಜಕುಮಾರ್ ಹಾಗೂ ಫಿಲಂ ಫೇರ್ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು” ಎಂದರು.
ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, “ಡಾ.ಲೀಲಾವತಿ ಅತಿ ವಿರಳ ಹಾಗೂ ಅಪರೂಪದ ತಾರೆಯಾಗಿದ್ದರು. ತಮ್ಮ ಸ್ವಂತ ಹಣದಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಪಶುಚಿಕಿತ್ಸಾಲಯ ಕಟ್ಟಿಸಿ ಸಮಾಜ ಸೇವೆಯನ್ನು ಮಾಡಿದ್ದಾರೆ. ಅವರ ಪಾತ್ರಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಿವೆ. ಅವರ ಅಗಲಿಕೆ ಚಿತ್ರ ಪ್ರೇಮಿಗಳು ಹಾಗೂ ಎಲ್ಲಾ ಪ್ರಾಣಿಪ್ರಿಯರಿಗೂ ತುಂಬಲಾರದ ನಷ್ಟವಾಗಿದೆ” ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, “ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಅಭಿನಯಸಿ ಡಾ.ಲೀಲಾವತಿಯವರು ತಮ್ಮ ಪ್ರೌಢಿಮೆಯನ್ನು ಮೆರೆದಿದ್ದಾರೆ. ಸಮಾಜ ನನಗೇನು ಕೊಟ್ಟಿದೆ ಎಂದು ಯೋಚಿಸುವವರ ಮಧ್ಯೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಧೀಮಂತ ವ್ಯಕ್ತಿತ್ವ ಅವರದು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಆಸ್ಪತ್ರೆ ಕಟ್ಟಲು ಅನುಮತಿ ಕೊಡಿಸುವಂತೆ ನನ್ನ ಬಳಿ ಬಂದಿದ್ದರು. ಡಾ.ಲೀಲಾವತಿ ಅವರು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಆಸ್ಪತ್ರೆಯಲ್ಲಿ ಅವರ ಪ್ರತಿಮೆಯನ್ನು ನಿರ್ಮಿಸುವಂತೆ ಸರ್ಕಾರಕ್ಕೆ ಕೋರಿದರು” ಎಂದು ಹೇಳಿದರು.
ಜೆ.ಡಿ.ಎಸ್.ಶಾಸಕ ಬಾಲಕೃಷ್ಣ ಮಾತನಾಡಿ, “42 ಚಿತ್ರಗಳಲ್ಲಿ ಡಾ.ರಾಜ್‍ಕುಮಾರ್ ಅವರೊಂದಿಗೆ ಅಭಿನಯಸಿದ್ದ ಡಾ.ಲೀಲಾವತಿಯವರು ಆರಂಭದಲ್ಲಿ ತುಂಬಾ ಸಂಕಷ್ಟ ಅನುಭವಿಸಿ ಚಿತ್ರರಂಗಕ್ಕೆ ಆಗಮಿಸಿದ್ದರು. ಮಗ ವಿನೋದ್‍ಕುಮಾರ್ ಅವರೊಂದಿಗಿನ ಅವರ ಬಾಂಧವ್ಯ ಎಲ್ಲರಿಗೂ ಪ್ರೇರಣೆಯಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ” ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, “ಡಾ.ಲೀಲಾವತಿ ಅವರು ಅಜಾತಶತ್ರುವಾಗಿದ್ದರು. ಸುಮಾರು 32 ವರ್ಷಗಳಿಂದ ವೈಯಕ್ತಿಕವಾಗಿ ಪರಿಚಯವಿದ್ದರು. ಕಳೆದ 20 ದಿನಗಳ ಹಿಂದೆ ನನ್ನ ಮನೆಗೆ ಆಗಮಿಸಿ ನೂತನವಾಗಿ ನಿರ್ಮಿಸಿದ್ದ ಪಶು ಆಸ್ಪತ್ರೆ ಉದ್ಘಾಟನೆ ಮಾಡುವಂತೆ ನನ್ನನ್ನು ಆಹ್ವಾನಿಸಿದ್ದರು. ಅವರ ಆಹ್ವಾನದ ಮೇರೆಗೆ ಹೋಗಿ ಪಶು ಆಸ್ಪತ್ರೆ ಉದ್ಘಾಟಿಸಿ, ಅಗತ್ಯ ಇರುವ ಸಿಬ್ಬಂದಿ ನೇಮಿಸಿ ಆಸ್ಪತ್ರೆ ಕಾರ್ಯಾರಂಭ ಮಾಡಲು ಅನುವು ಮಾಡಿಕೊಟ್ಟಿದ್ದೆ. ವಿರೋಧ ಪಕ್ಷದ ನಾಯಕರ ಸಲಹೆಯಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆಸ್ಪತ್ರೆ ಬಳಿ ಡಾ.ಲೀಲಾವತಿ ಅವರ ಪ್ರತಿಮೆ ನಿರ್ಮಿಸುತ್ತೇವೆ” ಎಂದರು.