ರಾಜ್ಯದಲ್ಲಿ ಖಾಸಗಿ ಸಂಸ್ಥೆಯವರು ಗೌರವ ಡಾಕ್ಟರೇಟ್ ಪದವಿ ನೀಡಿ ಸಾರ್ವಜನಿಕರಿಂದ ಹಣ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಗೌರವ ಡಾಕ್ಟರೇಟ್ ಪಡೆದವರಿಗೆ ರಾಜ್ಯ/ಕೇಂದ್ರ ಸರ್ಕಾರದಿಂದ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಸೋಮವಾರ ಸಚಿವರು ಉತ್ತರಿಸಿದ್ದಾರೆ.
“ಸರ್ಕಾರದ ಆದೇಶದ ಅನ್ವಯ ಯಾವುದಾದರೂ ಸಂಸ್ಥೆಯು ಯಾವುದೇ ರೀತಿಯ ನಕಲಿ/ಅನಧಿಕೃತಪದವಿ/ಗೌರವ ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡುತ್ತಿರುವುದು/ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ, ಅದಕ್ಕೆ ಕಾರಣಕರ್ತರಾದ ವ್ಯಕ್ತಿ/ ಸಂಸ್ಥೆಯ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ” ಎಂದು ಸಚಿವರು ಹೇಳಿದ್ದಾರೆ.