ಹಸೆಮಣೆ ಎರಬೇಕಿದ್ದ 24 ವರ್ಷದ ಆಟೋ ಚಾಲಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬ್ಯಾಟರಾಯನಪುರ ಠಾಣಾ ಪೊಲೀಸರು 11 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಅರುಣ್(24) ಹತ್ಯೆಯಾದ ಆಟೋ ಚಾಲಕ. ಹರೀಶ್, ಮಧು, ಪ್ರಶಾಂತ್ ಅಲಿಯಾಸ್ ಅಪ್ಪು ಸೇರಿದಂತೆ 11 ಆರೋಪಿಗಳನ್ನು ಬಂಧಿಸಲಾಗಿದೆ.
ಟಿಂಬರ್ ಯಾರ್ಡ್ ಬಡಾವಣೆ ನಿವಾಸಿ ಅರುಣ್ ಅವರನ್ನು ಡಿ. 5ರಂದು ರಾತ್ರಿ ಕೊಲೆ ಮಾಡಲಾಗಿತ್ತು. ಹಳೇ ವೈಷಮ್ಯವೇ ಕೊಲೆಗೆ ಕಾರಣ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಕೊಲೆ ಪ್ರಕರಣವೊಂದರಲ್ಲಿ ಈ ಹಿಂದೆ ಆರೋಪಿ ಹರೀಶ್ ಜೈಲು ಸೇರಿದ್ದನು. ಇದಕ್ಕೆ ಅರುಣ್ ಕಾರಣವೆಂದು ಹರೀಶ್ ಆತನ ಮೇಲೆ ಕೋಪಗೊಂಡಿದ್ದನು. ಹೀಗಾಗಿ, ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಬಳಿಕ, ಜಾಮೀನು ಪಡೆದು ಹೊರಬಂದಿದ್ದ ಹರೀಶ್, ಅರುಣ್ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲ ದಿನಗಳ ಹಿಂದೆ ಚಾಮರಾಜಪೇಟೆ ಬಾರ್ ಬಳಿ ಕಾಟನ್ ಪೇಟೆ ಭಕ್ಷಿ ಗಾರ್ಡನ್ ಹುಡುಗರ ಜತೆಗೆ ಆರೋಪಿ ಹರೀಶ್ ಗಲಾಟೆ ಮಾಡಿಕೊಂಡಿದ್ದನು. ಈ ವೇಳೆ ಗಾರ್ಡನ್ ಹುಡುಗರು ಅರುಣ್ ಸಂಪರ್ಕ ಮಾಡಿ, ಹರೀಶ್ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಹರೀಶ್ ತನಗೆ ಗೊತ್ತು ಎಂದು ಅರುಣ್ ಹೇಳಿದ್ದಾನೆ.
ಬಳಿಕ, ಹರೀಶ್ ವಿರೋಧಿಗಳಿಗೆ ಕೊಲೆಯಾದ ಆಟೋ ಚಾಲಕ ಅರುಣ್ ಸಹಾಯ ಮಾಡುತ್ತಿದ್ದನು. ಹರೀಶ್ ಮನೆ ಬಳಿ ಓಡಾಡಿ ಆತನ ಬಗ್ಗೆ ವಿಚಾರಿಸುವುದು, ಮನೆ ಬಳಿ ಹೋಗುವುದು ಹರೀಶ್ ಪತ್ನಿಗೆ ಹರೀಶ್ ಬಂದಿದ್ದಾನಾ ಎಂದು ವಿಚಾರಿಸಿಕೊಳ್ಳುತ್ತಿದ್ದನು. ಹರೀಶ್ ಬಗ್ಗೆ ಮಾಹಿತಿ ಕಲೆಹಾಕುವ ಕೆಲಸ ಮಾಡುತ್ತಿದ್ದನು.
ಈ ಬಗ್ಗೆ ತಿಳಿದ ಹರೀಶ್, ಅರುಣ್ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಹರೀಶ್ ಸಹೋದರ ಮಧು ಕೂಡ ಈ ಬಗ್ಗೆ ಕೋಪಗೊಂಡಿದ್ದಾನೆ. ಈ ವಿಚಾರವನ್ನು ಹಳೆ ದ್ವೇಷ ಹೊಂದಿದ್ದ ಪ್ರಶಾಂತ್ ಅಲಿಯಾಸ್ ಅಪ್ಪು ಜತೆಗೆ ಚರ್ಚೆ ಮಾಡಿದ್ದಾರೆ. ಬಳಿಕ ಎಲ್ಲರೂ ಸೇರಿ ಅರುಣ್ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ.
ಅದರಂತೆ, ಡಿಸೆಂಬರ್ 5ರಂದು ಟಿಂಬರ್ ಯಾರ್ಡ್ ಲೇಔಟ್ ರಸ್ತೆಯಲ್ಲಿ ಅರುಣ್ ಸ್ನೇಹಿತರ ಜೊತೆ ಮಾತನಾಡುತ್ತ ನಿಂತಿದ್ದ. ಅದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.
ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಬ್ಯಾಟರಾಯನಪುರ ಠಾಣಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ 15 ಸಾವಿರ ದಾಟಿದ ಡೆಂಗ್ಯೂ ಪ್ರಕರಣಗಳು: ಮುಂಜಾಗೃತಾ ಕ್ರಮವಹಿಸಿ ಎಂದ ವೈದ್ಯರು
ಜೂಜು ದಂಧೆ | ಕ್ಲಬ್‌ವೊಂದರ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ
ಅಕ್ರಮವಾಗಿ ಜೂಜು ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಬೆಂಗಳೂರಿನ ಕ್ಲಬ್‌ವೊಂದರ ಮೇಲೆ ದಾಳಿ ನಡೆಸಿದ್ದಾರೆ.
ಹಲಸೂರಿನ ರಸ್ತೆಯಲ್ಲಿರುವ ವೈಎಂಐಎ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಜೂಜು ಆಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.
ಭಾರತೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.