ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ಸರ್ಕಾರಿ ಹಾಸ್ಟೆಲ್‌ನಲ್ಲಿ ಆಹಾರ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದಿದೆ.
ಮಾನ್ವಿಯ ಫಾತೀಮಾ ನಗರದಲ್ಲಿರುವ ಹಾಸ್ಟೆಲ್‌ನಲ್ಲಿ ಭಾನುವಾರ ವಿದ್ಯಾರ್ಥಿಗಳಿಗೆ ಇಡ್ಲಿ ನೀಡಲಾಗಿತ್ತು. ಅದನ್ನು ತಿಂದವರಲ್ಲಿ 14 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ಶಾಸಕ ಹಂಪಯ್ಯ ನಾಯಕ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೂತ್ತಾರು ಭೇಟಿ ನೀಡಿದ್ದು, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಬೆಳಿಗ್ಗೆ ಉಪಾಹಾರಕ್ಕೆಂದು ನೀಡಿದ ಇಡ್ಲಿ ಮತ್ತು ಚಟ್ನಿ ಹಾಗೂ ಮಧ್ಯಾಹ್ನ ಊಟಕ್ಕೆ ನೀಡಿದ ಪಲಾವ್ ಅನ್ನ ಕೂಡಾ ಸರಿ ಇರಲಿಲ್ಲ ಎಂದು ಅಡುಗೆಯವರಿಗೆ ತಿಳಿಸಿದ್ದೆವು. ಆದರೂ, ಯಾರೂ ನಿಗಾ ವಹಿಸುತ್ತಿಲ್ಲೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಘಟನೆ ನಡೆದರೂ ಹಾಸ್ಟೆಲ್‌ಗೆ ಬಾರದ ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ ಹಾಗೂ ವಾರ್ಡನ್ ಪಾರ್ವತಿ ವಿರುದ್ದ ವಿದ್ಯಾರ್ಥಿನಿಯರು ಹಾಗೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ಹಫೀಜುಲ್ಲ