ರಾಜ್ಯದಲ್ಲಿ ಮಗುವಿನ ಕಲಿಕೆಗೆ ಭದ್ರಬುನಾದಿ ಎಂದು ಕರೆಯಲ್ಪಡುವ ಅಂಗನವಾಡಿ ಕೇಂದ್ರಗಳು ಹಲವು ಸಮಸ್ಯೆಗಳು ಎದುರಿಸುತ್ತಿವೆ. ಇದಕ್ಕೆ ಬೀದರ್ ಜಿಲ್ಲೆ ಹೊರತಾಗಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದ ಪರಿಣಾಮ ಬಾಡಿಗೆ ಮನೆ, ದೇವಸ್ಥಾನ, ಶಾಲಾ ಕೋಣೆಗಳೇ ಮಕ್ಕಳ ಕಲಿಕೆಯ ತಾಣಗಳಾಗಿವೆ !
ಔರಾದ ತಾಲೂಕಿನ ಕರಂಜಿ(ಬಿ) ಗ್ರಾಮದ ಅಂಗನವಾಡಿ ಕೇಂದ್ರವೊಂದು ಕಳೆದ 15 ವರ್ಷಗಳಿಂದ ಬಾಡಿಗೆ ಮನೆಯಲ್ಲಿಯೇ ನಡೆಯುತ್ತಿದ್ದು, ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಸೇರಿದಂತೆ ಶೌಚಾಲಯ, ಶುದ್ಧ ಕುಡಿಯುವ ನೀರು ಸಹ ಇಲ್ಲ. ಇದರಿಂದ ಹೆಚ್ಚಿನ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ತೆಲಂಗಾಣ ಗಡಿ ಹಂಚಿಕೊಂಡಿರುವ ಕರಂಜಿ(ಬಿ) ಗ್ರಾಮ ನಾಗಮಾರಪಳ್ಳಿ ಗ್ರಾಮ ಪಂಚಾಯತ್ ಗೆ ಒಳಪಡುತ್ತದೆ, ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರವಿದ್ದು, ಒಂದು ಕೇಂದ್ರಕ್ಕೆ ಸ್ವಂತ ಕಟ್ಟಡವಿದೆ. ಗ್ರಾಮದ ಮಧ್ಯೆ ಭಾಗದಲ್ಲಿರುವ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ. ಹೀಗಾಗಿ ಕಳೆದ 2007 ರಿಂದ ವರ್ಷಕ್ಕೆ 6 ಸಾವಿರ ಬಾಡಿಗೆ ಕಟ್ಟಿ ಖಾಸಗಿಯೊಬ್ಬರ ಮನೆಯಲ್ಲಿ ನಡೆಸಲಾಗುತ್ತಿದೆ. ಇದೀಗ ಅಂಗನವಾಡಿಯಲ್ಲಿ 22 ಮಕ್ಕಳಿದ್ದಾರೆ. ಆದರೆ ಅಂಗನವಾಡಿಗೆ ಸ್ವಂತ ಕಟ್ಟಡದ ಭಾಗ್ಯ ದೊರೆಯದ ಪರಿಣಾಮ ಮಕ್ಕಳ ಕಲಿಕೆಗೆ ಸಮಪರ್ಕ ವಾತಾವರಣ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ಅಂಗನವಾಡಿ ಕಾಮಗಾರಿ ಅಪೂರ್ಣ :
“ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ 2016-17 ಸುಮಾರಿಗೆ ಮನರೇಗಾ ಯೋಜನೆಯಡಿ ಹೊಸ ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿ ನಡೆದಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳದೆ ನೆನೆಗುದಿದೆ ಬಿದ್ದಿದೆ. ನಾನು ವರ್ಗಾವಣೆಯಾಗಿ ಬಂದ ನಂತರ ಇತ್ತೀಚೆಗೆ ಅಂಗನವಾಡಿಗೆ ಭೇಟಿ ನೀಡಿದ್ದೇನೆ. ಮಕ್ಕಳ ಕಲಿಕೆಗೆ ಸೂಕ್ತ ವಾತಾವರಣ ಇಲ್ಲ ಎಂಬುದು ಕಂಡು ಬಾಡಿಗೆ ಮನೆಯಿಂದ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾದ ಬಯಲು ರಂಗಮಂದಿರದ ಕೋಣೆಯಲ್ಲಿ ನಡೆಸುವಂತೆ ಸ್ಥಳಾಂತರಿಸಲಾಗಿದೆ. ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಪಂಚಾಯಿತಿ ವತಿಯಿಂದ ಮಾಡಿಸಲಾಗುವುದು. ಶೌಚಾಲಯ ಸೇರಿದಂತೆ ಅಂಗನವಾಡಿ ಕಟ್ಟಡ ಬಗ್ಗೆ ಜಿಲ್ಲಾ ಪಂಚಾಯತಿಗೆ ಪತ್ರ ಬರೆಯುತ್ತೇನೆ” ಎಂದು ನಾಗಮಾರಪಳ್ಳಿ ಗ್ರಾಮ ಪಂಚಾಯತ್ ಪಿಡಿಒ ನಾಗೇಶ ಮುಕರಂಬೆ ಈದಿನ.ಕಾಮ್ ದೊಂದಿಗೆ ಮಾತನಾಡಿ ಹೇಳಿದ್ದಾರೆ.

“ಅಂಗನವಾಡಿ ನಡೆಸುವ ಬಾಡಿಗೆ ಮನೆಯವರಿಗೆ 2019 ತನಕ ಇಲಾಖೆಯಿಂದ ಹಣ ಪಾವತಿಸಿದ್ದಾರೆ. ತದನಂತರ ಇಲಾಖೆ ಬಾಡಿಗೆ ಹಣ ನೀಡದ ಕಾರಣ ಸ್ವಂತ ಬಾಡಿಗೆ ಕಟ್ಟಿ ಅಂಗನವಾಡಿ ನಡೆಸುತ್ತಿರುವ ಕಾರ್ಯಕರ್ತೆ ಹಾಗೂ ಅಡುಗೆ ಸಹಾಯಕಿಯವರು ಅಗತ್ಯ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಂತ ಕಟ್ಟಡ ನಿರ್ಮಿಸುವಂತೆ ಹಲವು ಬಾರಿ ಇಲಾಖೆಗೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಸ್ವಂತ ಕಟ್ಟಡ ದೊರೆಯಲಿಲ್ಲ. ಆತಂಕ ಅನುಭವಿಸುವಂತಾಗಿದೆ” ಎಂದು ಪೋಷಕರು ವಿಷಾದ ವ್ಯಕ್ತಪಡಿಸುತ್ತಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಖಾಸಗಿ ಸಂಸ್ಥೆಗಳ ಗೌರವ ಡಾಕ್ಟರೇಟ್‌ಗೆ ಸರ್ಕಾರದಿಂದ ಮಾನ್ಯತೆ ಇಲ್ಲ
ಅಂಗನವಾಡಿ ಕೇಂದ್ರ ಬಾಡಿಗೆ ಮನೆಯಿಂದ ಬಯಲು ರಂಗಮಂದಿರದ ಕೋಣೆಗೆ ಸ್ಥಳಾಂತರಿಸಲಾಗಿದೆ. ಆದರೆ ಅಲ್ಲಿಯೂ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯವಿಲ್ಲ. ತಗಡಿನ ಸೀಟ್ ಕೋಣೆಯಲ್ಲಿ ಅಂಗನವಾಡಿ ನಡೆಸುವುದು ಮಕ್ಕಳಿಗೆ ಸೂಕ್ತವಲ್ಲ. ಹೊಸ ಅಂಗನವಾಡಿ ಕಟ್ಟಡದ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳಿಗೆ ಸಮಪರ್ಕ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥ ಹಾಗೂ ನಾಗಮಾರಪಳ್ಳಿ ಗ್ರಾ.ಪಂ.ಅಧ್ಯಕ್ಷ ಸಂಗಾರೆಡ್ಡಿ ಈದಿನ.ಕಾಮ್ ದೊಂದಿಗೆ ಮಾತನಾಡಿ ಹೇಳಿದರು.
ಈ ಬಗ್ಗೆ ಔರಾದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಈದಿನ.ಕಾಮ್ ಸಂಪರ್ಕಿದರೆ ಪ್ರತಿಕ್ರಿಯಿಸಲಿಲ್ಲ.