ಪ್ರಸವ ಪೂರ್ವ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ತಡೆ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ಕೋಲಾರದ ಹೋಪ್ ಹೆಲ್ತ್ ಕೇರ್‌ನ ಸ್ಕ್ಯಾನಿಂಗ್ ಕೇಂದ್ರವನ್ನು ಜಪ್ತಿ ಮಾಡಲಾಗಿದೆ. ಆರೋಗ್ಯ ಇಲಾಖೆಯ ಜಿಲ್ಲಾ ತಪಸಣಾ ಮತ್ತು ಮೇಲ್ವಿಚಾರಣೆ ತಂಡವು ಕೇಂದ್ರವನ್ನು ಜಪ್ತಿ ಮಾಡಿದೆ.
ಸೋಮವಾರ ತಂಡವು ಆಸ್ಪತ್ರೆಯ ಮೇಲೆ ದಾಳಿ ನಡೆಸಿದೆ. ಈ ವೇಳೆ, ಸ್ಕ್ಯಾನಿಂಗ್ ಕೇಂದ್ರದಲ್ಲಿ ನೋಂದಾಯಿತ ವೈದ್ಯ ಡಾ. ಡೈಸಿ ಯಶವಂತ್ ಅವರು ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ಕಂಡು ಬಂದಿದೆ. ಅಲ್ಲದೆ, ಅರ್ಹತೆ ಇಲ್ಲದ ಶುಶ್ರೂಷಕಿ ವಿಜಯಲಕ್ಷ್ಮಿ ಮತ್ತು ವೈದ್ಯ ಡಾ. ಯಶವಂತ್ ವಿಟ್ಲೆ ಎಂಬವರು ಸ್ಕ್ಯಾನಿಂಗ್ ಮಾಡುತ್ತಿರುವುದನ್ನು ತಂಡವು ಗಮನಿಸಿದೆ ಎಂದು ತಿಳಿದುಬಂದಿದೆ.
ನೋಂದಾಯಿತ ವೈದ್ಯರು ಕಾರ್ಯನಿರ್ವಹಿಸದೇ ಇರುವುದು ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ತಡೆ ಕಾಯ್ದೆ (ಪಿಸಿ ಅಂಡ್ ಪಿಎನ್‌ಡಿಟಿ) ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಕೇಂದ್ರವನ್ನು ಜಪ್ತಿ ಮಾಡಲಾಗಿದೆ. ಅಧಿಕಾರಿಗಲು ಕೇಂದ್ರವನ್ನು ಪಂಚನಾಮೆ ಮಾಡಿದ್ದಾರೆ.
ದಾಳಿ ವೇಳೆ, ಸಮಿತಿಯ ಅಧ್ಯಕ್ಷ ಡಾ.ಎಸ್.ಚಂದನ್ ಕುಮಾರ್, ಡಾ.ರವೀಂದ್ರ ನಾಯಕ್, ಡಾ.ರಾಜೇಂದ್ರ ಹಾಗೂ ರುದ್ರೇಶ್ ಹುನ್ಸಾಳ್ ಇದ್ದರು.